Karnataka Rains: ರಾಜ್ಯದ ಕೆಲವಡೆ ಇಂದೂ ಮಳೆ; ವರುಣಾರ್ಭಟದಿಂದ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಮಾಹಿತಿ

ರಾಜ್ಯದ ಕೆಲವೆಡೆ ಸೋಮವಾರವೂ ಮಳೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ. ಭಾನುವಾರದ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಕೃಷಿಭೂಮಿಗೆ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಕೃಷಿಗೆ ಹಾನಿಯಾಗಿದ್ದರೆ, ಹಾಸನದಲ್ಲಿ ಮನೆಯೊಂದಜು ಕುಸಿದುಬಿದ್ದಿದೆ.

Karnataka Rains: ರಾಜ್ಯದ ಕೆಲವಡೆ ಇಂದೂ ಮಳೆ; ವರುಣಾರ್ಭಟದಿಂದ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಮಾಹಿತಿ
ದಾವಣಗೆರೆಯಲ್ಲಿ ಸಿಡಿಲು ಬಡಿದು ತೆಂಗಿನ ಮರಗಳು ಹೊತ್ತಿ ಉರಿದಿರುವುದು

Updated on: May 22, 2023 | 3:49 PM

ಬೆಂಗಳೂರು: ರಾಜ್ಯದ ಕೆಲವೆಡೆ ಸೋಮವಾರವೂ ಮಳೆಯಾಗಿದ್ದು (Karnataka Rains) ಅಪಾರ ಹಾನಿ ಸಂಭವಿಸಿದೆ. ಭಾನುವಾರದ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಕೃಷಿಭೂಮಿಗೆ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಕೃಷಿಗೆ ಹಾನಿಯಾಗಿದ್ದರೆ, ಹಾಸನದಲ್ಲಿ ಮನೆಯೊಂದಜು ಕುಸಿದುಬಿದ್ದಿದೆ. ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ದೊಡ್ಡಬಳ್ಳಾಪುರದಲ್ಲಿಯೂ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಈ ವರ್ಷ ಮೊದಲ ಬಲಿ ವರದಿಯಾಗಿದೆ. ಜಿಲ್ಲೆಯ ಬಲ್ಲಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಬೀರಪ್ಪ (55) ಎಂಬವರು ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಕುರಿದೊಡ್ಡಿಯಲ್ಲಿ ಮಲಗಿದ್ದಾಗ ಸಿಡಿಲು ಬಡಿದು ಬೀರಪ್ಪ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ಚಿಕ್ಕ ತೊಗಲೇರಿ, ದೊಡ್ಡ ತೊಗಲೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿದೆ. ಭತ್ತದ ಕಟಾವಿಗೆ‌ ಸಿದ್ದವಾಗಿದ್ದ ಗದ್ದೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿರುವುದರಿಂದ ಕೃಷಿ ನಾಶವಾಗಿದೆ. ಭತ್ತ ಮಣ್ಣು ಪಾಲಾಗಿದೆ. ಸ್ಥಳಕ್ಕೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಈ ಮಧ್ಯೆ, ಹಾಸನ ಹೊರವಲಯದ ದೇವೇಗೌಡ ನಗರದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮನೆಯೊಂದರ ಮೇಲ್ಚಾವಣಿ ಹಾರಿಹೋಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಅಪಾರ ಬೆಳೆ ನಾಶವಾಗಿದೆ. ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಜೋಳ, ಹೂಕೋಸು, ಹಿರೇಕಾಯಿ, ಹೂವು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ಕಸವನಹಳ್ಳಿಯಲ್ಲಿ ಅಪಾರ ಬೆಳೆ ನಾಶವಾಗಿದೆ.

ಕೋಲಾರ ಜಿಲ್ಲೆಯಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು, ಶ್ರೀನಿವಾಸಪುರ ತಾಲ್ಲೂಕಿನ ಹಲವೆಡೆ ಮಾವು ಬೆಳೆ ನಾಶವಾಗಿದೆ. ಗಾಳಿ ಮಳೆ ಮಳೆಯಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ ಐದು ದಿನ ಮಳೆಯ ಆರ್ಭಟ, ಯೆಲ್ಲೋ ಅಲರ್ಟ್

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರ ಬೆಳಕೆರೆಯಲ್ಲಿ‌ ಮತ್ತೆ ಸಂಕಷ್ಟ ಸುರುವಾಗಿದೆ. ಇಲ್ಲಿ ಪಿಕ್ ಅಪ್ ಡ್ಯಾಂನಲ್ಲಿ ಅಪಾರದ ಜಲ‌ಸಸ್ಯಗಳು ಬೆಳೆದುಕೊಂಡಿದ್ದು ನೀರು ಹರಿದು ಹೋಗುತ್ತಿಲ್ಲ. ಇದೇ ಕಾರಣದಿಂದ ಸೃಷ್ಟಿಯಾಗುವ ಹಿನ್ನೀರಿನಿಂದ ಅಪಾರ ಪ್ರಮಾಣದ ಬೆಳೆಗಳು ಹಾಳಾಗುತ್ತಿವೆ. ರೈತರೇ ಪಿಕ್ ಅಪ್ ಡ್ಯಾಂ ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿಲ್ಲ. ಸರ್ಕಾರ ಈ ಸಮಸ್ಯೆ ಬಗ್ಗೆ ಸೂಕ್ತ ಕ್ರಮ‌ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ