ರಾಜ್ಯಸಭೆ ಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಕಾಂಗ್ರೆಸ್​, ಬಿಜೆಪಿ ಜೆಡಿಎಸ್ ಮೈತ್ರಿಗೆ ಪ್ರತಿಷ್ಠೆಯ ಫೈಟ್

| Updated By: Ganapathi Sharma

Updated on: Feb 27, 2024 | 6:28 AM

Rajya Sabha Election: ರಾಜ್ಯಸಭೆ ಚುನಾವಣೆ ಅಖಾಡಕ್ಕೆ ವೇದಿಕೆ ಸಂಪೂರ್ಣ ಸಿದ್ಧವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮತದಾನವೂ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯಸಭೆ ಚುನಾವಣೆಗೆ ತಂತ್ರ ಪ್ರತಿ ತಂತ್ರ ಭರದಿಂದ ಸಾಗಿವೆ.

ರಾಜ್ಯಸಭೆ ಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಕಾಂಗ್ರೆಸ್​, ಬಿಜೆಪಿ ಜೆಡಿಎಸ್ ಮೈತ್ರಿಗೆ ಪ್ರತಿಷ್ಠೆಯ ಫೈಟ್
ರಾಜ್ಯಸಭೆ ಚುನಾವಣೆಗೆ ವಿಧಾನಸೌಧದಲ್ಲಿ ಸಿದ್ಧತೆ
Follow us on

ಬೆಂಗಳೂರು, ಫೆಬ್ರವರಿ 27: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗೆ (Rajya Sabha Election) ಕ್ಷಣಗಣನೆ ಆರಂಭವಾಗಿದೆ. ವಿಧಾನಸೌಧದ (Vidhan Soudha) ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಒಟ್ಟು 4 ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 223 ಶಾಸಕರು ಮತ ಚಲಾಯಿಸಲಿದ್ದಾರೆ. ಶಾಸಕರ ಸಂಖ್ಯಾಬಲದಂತೆ ನಾಲ್ಕು ಸ್ಥಾನದ ಪೈಕಿ ಕಾಂಗ್ರೆಸ್‌ಗೆ 3, ಬಿಜೆಪಿಗೆ 1 ಸ್ಥಾನದ ಗೆಲುವು ಸಲೀಸಾಗಲಿದೆ.

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳು ಯಾರೆಲ್ಲ?

ಕಾಂಗ್ರೆಸ್‌ನಿಂದ ಅಜಯ್ ಮಕೇನ್, ಜಿ.ಸಿ ಚಂದ್ರಶೇಖರ್, ಡಾ. ಸೈಯದ್ ನಾಸೀರ್ ಹುಸೇನ್ ಕಣದಲ್ಲಿದ್ದಾರೆ.

ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿವರು

ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ಮೂರು ಪಕ್ಷಗಳಿಂದ ಶಾಸಕಾಂಗ ಪಕ್ಷದ ಸಭೆ: ತಂತ್ರ ಪ್ರತಿತಂತ್ರ!

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿರೋದರಿಂದಲೇ ಪೈಪೋಟಿ ಜೋರಾಗಿದೆ. ಶಾಸಕರನ್ನ ಸೆಳೆಯೋ ಕಸರತ್ತು ನಡೆಯುತ್ತಿದೆ. ಸೋಮವಾರ ರಾತ್ರಿವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಪಕ್ಷಗಳ ಶಾಸಕಾಂಗ ಪಕ್ಷದ ಸಭೆ ನಡೆಸಿ ಭರ್ಜರಿ ರಣತಂತ್ರ ರೂಪಿಸಿವೆ. ಅದರಲ್ಲೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಮತದಾನ ಹೇಗೆ ಮಾಡಬೇಕು ಎಂಬ ತರಬೇತಿಯನ್ನೂ ನೀಡಲಾಗಿದೆ. ಡಿಸಿಎಂ ಡಿಕೆ ಚುನಾವಣಾ ಏಜೆಂಟ್ ಆಗಿದ್ದು, ಅಡ್ಡ ಮತದಾನ ಆಗುವ ಆತಂಕ ನಮಗಿಲ್ಲ ಎಂದಿದ್ದಾರೆ.

ಇತ್ತ ದೋಸ್ತಿಗಳು ಸಹ ಪ್ರತಿ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರೋ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ರಣತಂತ್ರ ರೂಪಿಸಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ವಿಧಾನಸೌಧದ ಆರ್‌.ಅಶೋಕ್ ಕಚೇರಿಗೆ ಬರುವಂತೆ ಸೂಚನೆ ನೀಡಲಾಗಿದೆ. ಇನ್ನು ನಿನ್ನೆ ನಡೆದ ಜೆಡಿಎಸ್​ ಸಿಎಲ್​ಪಿ ಸಭೆಗೆ, ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗೈರಾಗಿದ್ದರು. ಮೊನ್ನೆಯಷ್ಟೇ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊರಹಾಕಿದ್ದೂ ಅಲ್ಲದೆ, ತಾವು ಸಿದ್ದರಾಮಯ್ಯನವರ ಋಣದಲ್ಲಿ ಇದ್ದೀನಿ ಅಂತಾ ಹೇಳಿದ್ದರು. ಹೀಗಾಗಿ ಮತದಾನಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ, ಹೆಚ್​.ಡಿ.ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಶರಣಗೌಡ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ಲ್ಯಾನ್; ಹೇಗಿದೆ ಗೊತ್ತಾ?

ಕಾಂಗ್ರೆಸ್‌ನಿಂದ ಅಡ್ಡ ಮತದಾನವಾದರೆ, ತಮಗೆ ಅನುಕೂಲ ಎಂಬುದು ದೋಸ್ತಿಗಳ ಲೆಕ್ಕಾಚಾರ. ಆದ್ರೂ, ಎಸ್‌.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ನಡೆ ಯಾವ ಕಡೆ ಅನ್ನೋದು ಅಸ್ಪಷ್ಟವಾಗಿರೋದು ಬಿಜೆಪಿಗೆ ಆತಂಕ ಹೆಚ್ಚಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ