
ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಪ್ರಮುಖ ಜಲಾಶಯಗಳಿಗೆ ಒಳಹರಿವು ಇನ್ನೂ ಗಣನೀಯವಾಗಿ ಹೆಚ್ಚಾಗಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ (Karnataka Dam Water Level) ಕಡಿಮೆಯೇ ಇದೆ. ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು 2 ಸಾವಿರ ಕ್ಯೂಸೆಕ್‌ಗಿಂತಲೂ ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ.
ಬೆಂಗಳೂರಿನ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು, ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 92.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,909 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 626 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕೆಆರ್‌ಎಸ್ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಪ್ರಸ್ತುತ 17.740 ಟಿಎಂಸಿ ನೀರು ಸಂಗ್ರಹವಾಗಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಮಟ್ಟ 70.90 ಅಡಿ ಇದೆ. ಕಳೆದ ವರ್ಷ ಇದೇ ದಿನ 81.15 ಅಡಿ ನೀರಿನ ಮಟ್ಟ ದಾಖಲಾಗಿತ್ತು. ಜಲಾಶಯದಲ್ಲಿ ಪ್ರಸ್ತುತ 12.12 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 17.72 ಟಿಎಂಸಿ ನೀರಿತ್ತು. ಜಲಾಶಯಕ್ಕೆ 1,636 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನ 10,995 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಪ್ರಸ್ತುತ 400 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ 12,000 ಕ್ಯೂಸೆಕ್ ನೀರು ಹೊರಹರಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಲಾನಯನ ಪ್ರದೇಶದಲ್ಲಿ 5 ಮಿ.ಮೀ. ಮಳೆಯಾಗಿದೆ.
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ. ಪ್ರಸ್ತುತ ನೀರಿನ ಮಟ್ಟ 1603.12 ಅಡಿ ಇದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಆಗಿದ್ದು, ಸದ್ಯ 25.826 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳ ಸರಾಸರಿ ಒಳಹರಿವು 4,814 ಕ್ಯೂಸೆಕ್, ಪ್ರಸ್ತುತ ಒಳಹರಿವು 4,620 ಕ್ಯೂಸೆಕ್ ಇದೆ. ಸರಾಸರಿ 522 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗುತ್ತಿದ್ದು, ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿಲ್ಲ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಪ್ರಸ್ತುತ ನೀರಿನ ಮಟ್ಟ 2847.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,012 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 180 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ). ಪ್ರಸ್ತುತ ನೀರಿನ ಮಟ್ಟ 2903.77 ಅಡಿ ಇದ್ದು, ಜಲಾಶಯದಲ್ಲಿ 22.218 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,383 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 300 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 2920.87 ಅಡಿ ಇದ್ದು, 36.108 ಟಿಎಂಸಿ ನೀರು ಸಂಗ್ರಹವಾಗಿತ್ತು. ಆಗ 8,714 ಕ್ಯೂಸೆಕ್ ಒಳಹರಿವು ಹಾಗೂ 5,350 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.
ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್‌ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ
ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವುದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನೂ ಕಳೆದ ವರ್ಷದ ಮಟ್ಟವನ್ನು ತಲುಪಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ