
ಬೆಂಗಳೂರು, ಜುಲೈ 7: ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಮುಂಗಾರು ಮಳೆ (Monsoon Rain) ತೀವ್ರಗೊಂಡಿದ್ದು, ಬತ್ತಿ ಹೋಗುತ್ತಿದ್ದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಈಗ ಭಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಜೂನ್ ತಿಂಗಳಲ್ಲಿ ಕೊಂಚ ಕೈಕೊಟ್ಟಿದ್ದ ಮಳೆಯು ಜುಲೈ ಆರಂಭದಲ್ಲಿ ಚುರುಕುಗೊಂಡಿದೆ. ನದಿ-ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿಯ ತುಂಗಾ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 22 ಗೇಟ್‌ಗಳನ್ನು ಮುಂಜಾನೆ ತೆರೆಯಲಾಗಿದ್ದು, ಸುಮಾರು 24,ವಾಹನ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ಆವರಣದಲ್ಲಿರುವ ತುಂಗಾದೇವಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.
ತುಂಗಾ ಜಲಾಶಯದ ಎಲ್ಲಾ ಗೇಟ್‌ಗಳಿಂದ ನೀರು ಧುಮುಕುತ್ತಿರುವುದರಿಂದ ಇಡೀ ವಾತಾವರಣ ಹಾಲಿನ ನೊರೆಯಂತೆ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಡ್ಯಾಂ ಸೌಂದರ್ಯ ಇಮ್ಮಡಿಯಾಗಿದೆ. ನಿರಂತರ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲವಾಗಲಿದೆ. ಮಳೆ ತಡವಾಗಿದ್ದರಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 59.32 ಅಡಿಯಷ್ಟಿದೆ (ಕಳೆದ ವರ್ಷ ಇದೇ ದಿನ 80.79 ಅಡಿ ಇತ್ತು). ಪ್ರಸ್ತುತ ಜಲಾಶಯದಲ್ಲಿ 7.07 ಟಿಎಂಸಿ ನೀರು ಸಂಗ್ರಹವಿದ್ದು, 4,394 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ನದಿಗೆ 500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಕಾಲುವೆಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿಯಲ್ಲಿ ನೀರಿನ ಮಟ್ಟ ಹಾಗೂ ಒಳಹರಿವು ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 30 ಮಿ.ಮೀ ಮಳೆ ದಾಖಲಾಗಿದೆ.
ರಾಜ್ಯಾದ್ಯಂತ ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಆರ್‌ಎಸ್, ಭದ್ರಾ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Tue, 7 July 26