
ಬೆಂಗಳೂರು, ನವೆಂಬರ್ 28: ಕರ್ನಾಟಕದ ಆದಾಯ ಸಂಗ್ರಹದಲ್ಲಿ 2026-27ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಅಕ್ಟೋಬರ್ 2026ರ ಅಂತ್ಯದ ವೇಳೆಗೆ ರಾಜ್ಯದ ಸ್ವಂತ ತೆರಿಗೆ ಆದಾಯ ₹1,24,986.94 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 16.58ರಷ್ಟು ಹೆಚ್ಚಳವಾಗಿದೆ. 2026-27ನೇ ಸಾಲಿಗೆ ಸರ್ಕಾರ ₹2.20 ಲಕ್ಷ ಕೋಟಿ ಸ್ವಂತ ತೆರಿಗೆ ಆದಾಯ ಸಂಗ್ರಹದ ಗುರಿ ನಿಗದಿಪಡಿಸಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಈ ಗುರಿಯ ಶೇ 56.81ರಷ್ಟು ಸಾಧನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯವು ₹1,07,215.22 ಕೋಟಿ ತೆರಿಗೆ ಆದಾಯ ಸಂಗ್ರಹಿಸಿತ್ತು.
ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಕ್ಟೋಬರ್ ಅಂತ್ಯದ ವೇಳೆಗೆ ₹72,689.29 ಕೋಟಿ ಸಂಗ್ರಹವಾಗಿದೆ. ಇದು ವಾರ್ಷಿಕ ಗುರಿಯ ಶೇ 58.15ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹62,621.17 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಶೇ 16.08ರಷ್ಟು ಬೆಳವಣಿಗೆ ದಾಖಲಾಗಿದೆ.
ಮದ್ಯ ಮಾರಾಟ ಮತ್ತು ಪರವಾನಗಿ ಶುಲ್ಕಗಳ ಮೂಲಕ ರಾಜ್ಯ ಅಬಕಾರಿ ಇಲಾಖೆಯು ₹25,857.09 ಕೋಟಿ ಆದಾಯ ಸಂಗ್ರಹಿಸಿದೆ. ಇದು ವಾರ್ಷಿಕ ಗುರಿಯ ಶೇ 57.46ರಷ್ಟಾಗಿದೆ.
ಆಸ್ತಿ ಖರೀದಿ ಮತ್ತು ನೋಂದಣಿ ಚಟುವಟಿಕೆಗಳಿಂದ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಆದಾಯ ₹17,327.55 ಕೋಟಿಗೆ ಏರಿಕೆಯಾಗಿದೆ. ಇಲಾಖೆಯು ವಾರ್ಷಿಕ ಗುರಿಯ ಶೇ 59.75ರಷ್ಟು ಸಾಧಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.43ರಷ್ಟು ಬೆಳವಣಿಗೆ ಕಂಡಿದೆ.
ಮೋಟಾರು ವಾಹನ ತೆರಿಗೆ ಸಂಗ್ರಹದಿಂದ ₹8,454.36 ಕೋಟಿ ಆದಾಯ ಬಂದಿದೆ. ಇದು ವಾರ್ಷಿಕ ಗುರಿಯ ಶೇ 54.54ರಷ್ಟಾಗಿದೆ. ಇತರೆ ತೆರಿಗೆ ಮೂಲಗಳಿಂದ ₹658.65 ಕೋಟಿ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ 11.98ರಷ್ಟು ಸಾಧನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಶೇ 26.09ರಷ್ಟು ಬೆಳವಣಿಗೆ ದಾಖಲಾಗಿದೆ.
ರಾಜ್ಯದ ಸ್ವಂತ ತೆರಿಗೆಯೇತರ ಆದಾಯ ₹9,092.25 ಕೋಟಿಗೆ ಸೀಮಿತವಾಗಿದೆ. ಇದು ವಾರ್ಷಿಕ ಗುರಿಯ ಶೇ 56.83ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹11,068.72 ಕೋಟಿ ಸಂಗ್ರಹವಾಗಿತ್ತು. ಈ ಬಾರಿ ತೆರಿಗೆಯೇತರ ಆದಾಯದಲ್ಲಿ ಶೇ 17.86ರಷ್ಟು ಕುಸಿತ ಕಂಡುಬಂದಿದೆ.
ಖನಿಜ, ಸೇವಾ ಶುಲ್ಕ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಲಾಭಾಂಶ ಸೇರಿದಂತೆ ತೆರಿಗೆಯೇತರ ಆದಾಯ ಮೂಲಗಳಲ್ಲಿನ ಕುಸಿತದ ಬಗ್ಗೆ ಮುಂದಿನ ತಿಂಗಳುಗಳಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ.
ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯ ರೂಪದಲ್ಲಿ ಕರ್ನಾಟಕಕ್ಕೆ ₹37,899.72 ಕೋಟಿ ದೊರೆತಿದೆ. ಇದು ವಾರ್ಷಿಕ ಗುರಿಯ ಶೇ 60.11ರಷ್ಟಾಗಿದೆ. ಕಳೆದ ವರ್ಷದ ₹30,450.95 ಕೋಟಿಗೆ ಹೋಲಿಸಿದರೆ ಶೇ 24.46ರಷ್ಟು ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ದೊರೆತ ಅನುದಾನ ಹಾಗೂ ಕೊಡುಗೆಗಳ ಮೊತ್ತ ₹6,331.69 ಕೋಟಿಯಾಗಿದೆ. ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಶೇ 0.40ರಷ್ಟು ಮಾತ್ರ ಬೆಳವಣಿಗೆ ದಾಖಲಾಗಿದೆ.
ಇದನ್ನೂ ಓದಿ: ಉಚಿತ ಕೊಟ್ಟು ಸಾರ್ವಜನಿಕರ ದರೋಡೆ: ರಾಜ್ಯ ಸರ್ಕಾರ ಹಾಕುವ ಪ್ರತಿಯೊಂದು ತೆರಿಗೆಯ ಪಕ್ಕಾ ಲೆಕ್ಕ ಕೊಟ್ಟ ಪ್ರಲ್ಹಾದ್ ಜೋಶಿ
ಒಟ್ಟಾರೆ, ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯದ ಪ್ರಮುಖ ತೆರಿಗೆ ಮೂಲಗಳು ವಾರ್ಷಿಕ ಗುರಿಯ ಶೇ.55ರಿಂದ 60ರ ನಡುವೆ ಸಾಧನೆ ಮಾಡಿವೆ. ಸ್ವಂತ ತೆರಿಗೆ ಆದಾಯ ಮತ್ತು ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕಂಡುಬಂದ ಬೆಳವಣಿಗೆ ರಾಜ್ಯದ ಆದಾಯ ಸಂಗ್ರಹಕ್ಕೆ ಬಲ ನೀಡಿದೆ. ಇದೇ ವೇಗ ಮುಂದುವರಿದರೆ 2026-27ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸರ್ಕಾರ ತನ್ನ ಆದಾಯ ಗುರಿಗಳನ್ನು ಸಾಧಿಸುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ