
ಬೆಂಗಳೂರು, ಡಿಸೆಂಬರ್ 18: ಸರ್ಕಾರಿ ಬಸ್ಗಳಲ್ಲಿ ಲಕ್ಷಾಂತರ ನಾರಿಮಣಿಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದಂತೆ ಹಲವರ ಬದುಕಿಗೆ ಶಕ್ತಿಯೋಜನೆಯೇ (shakti yojana) ಆಸರೆ ಆಗಿದೆ. ಆದರೆ ಯೋಜನೆಯೇ ಸಾರಿಗೆ ಇಲಾಖೆಯನ್ನ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆಯಾಗಿದ್ದು, ಅದರ ಬೆನ್ನಲ್ಲೇ ಇದೀಗ ಸರ್ಕಾರ ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದೆ. 4 ನಿಗಮಗಳಿಗೆ 441 ಕೋಟಿ ರೂ. ಅನುದಾನ (grant) ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ದಾಖಲೆಯ ಸಮೇತ ಬಯಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಗೆ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಬರಬೇಕಾಗಿದೆ. ಇದೇ ಕಾರಣಕ್ಕೆ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ
ಇನ್ನು ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆ ಆಗುತ್ತಿದ್ದಂತೆ ಇದೀಗ ಆರ್ಥಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳ ಅನುದಾನವಾಗಿ ಸಾರಿಗೆ ಇಲಾಖೆಯ 4 ನಿಗಮಗಳಿಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ 171.41 ಕೋಟಿ ರೂ, ಬಿಎಂಟಿಸಿಗೆ 75.65 ಕೋಟಿ ರೂ, ಕೆಕೆಆರ್ಟಿಸಿಗೆ 86.92 ಕೋಟಿ ರೂ, NWKRTCಗೆ 107.67 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಶಕ್ತಿ ಯೋಜನೆಯ ಬಾಕಿ 4006 ಕೋಟಿ ರೂ. ಹಣ ಹಾಗೆಯೇ ಉಳಿದಿದೆ.
ಕೆಸ್ಆರ್ಟಿಸಿಗೆ 2023-2024ರ ಅವಧಿಯಲ್ಲಿ 452 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ. 2024-2025ರ ಅವಧಿಯಲ್ಲಿ 495 ಕೋಟಿ ರೂ ಬಾಕಿ ಇದೆ. 2025 ನವೆಂಬರ್ ಅಂತ್ಯಕ್ಕೆ 631 ಕೋಟಿ ರೂ ಪೆಂಡಿಂಗ್ ಇದ್ದು, ಒಟ್ಟು 1580 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ.
ಬಿಎಂಟಿಸಿ ನಿಗಮಕ್ಕೆ 2023-2024ರಅವಧಿಯಲ್ಲಿ 205 ಕೋಟಿ ರೂ ಬಾಕಿ ಇದೆ. 2024-25ರ ಅವಧಿಯಲ್ಲಿ 194 ಕೋಟಿ ರೂ ಬಾಕಿ ಇದ್ರೆ, 2025ರ ನವೆಂಬರ್ ಅಂತ್ಯಕ್ಕೆ ಒಟ್ಟು 310 ಕೋಟಿ ರೂ ಸೇರಿದಂತೆ ಒಟ್ಟು 710 ಕೋಟಿ ರೂಪಾಯಿ ಸರ್ಕಾರದಿಂದ ಬರಬೇಕಿದೆ.
ಇದನ್ನೂ ಓದಿ: NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ: ಸಂಕಷ್ಟದಲ್ಲಿ ನಿಗಮ
ಅಲ್ಲದೇ NWKRTC ನಿಗಮಕ್ಕೆ 2023-2024 ರಲ್ಲಿ 283 ಕೋಟಿ ರೂ ಬಾಕಿ ಬರಬೇಕಿದೆ. 2024-2025ರ ಅವಧಿಯಲ್ಲಿ 275 ಕೋಟಿ ಮತ್ತು 2025ರ ನವೆಂಬರ್ ಅಂತ್ಯಕ್ಕೆ 428 ಕೋಟಿ ರೂ ಸೇರಿ ಒಟ್ಟು 988 ಕೋಟಿ ರೂ ಬಾಕಿ ಉಳಿಸಿಕೊಳ್ಳಳಾಗಿದೆ.
ಇಷ್ಟೇ ಅಲ್ಲ KKRTC ಸಾರಿಗೆ ನಿಗಮಕ್ಕೆ 2023-2024 ರಲ್ಲಿ 238 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. 2024-2025 ರ ಅವಧಿಯಲ್ಲಿ 204 ಕೋಟಿ ರೂ ಪೆಂಡಿಂಗ್ ಇದ್ದರೆ, 2025ರ ನವೆಂಬರ್ ಅಂತ್ಯಕ್ಕೆ 284 ಕೋಟಿ ರೂ ಬಾಕಿ ಇದೆ. 4 ನಿಗಮಗಳು ಸೇರಿ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಬಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:12 pm, Thu, 18 December 25