
ಬೆಂಗಳೂರು, ಆಗಸ್ಟ್ 30: ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಾರಣ (Trekking) ಅವಘಡಗಳು ಮತ್ತು ವನ್ಯಜೀವಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಚಾರಣಿಗರ ಸುರಕ್ಷತೆ ಮತ್ತು ಚಾರಣ ಮಾರ್ಗಗಳ ಭದ್ರತೆ ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯಾಚರಣೆ ನಿಯಮಾವಳಿ (SOP) ಜಾರಿಗೆ ತರಲು ಇಲಾಖೆ ಮುಂದಾಗಿದೆ.
ಇತ್ತೀಚೆಗೆ ನಡೆದ ಸರಣಿ ಅವಘಡಗಳು ಚಾರಣಿಗರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿವೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾಗಿದ್ದರೆ, ಬಂಡಾಜೆ ಜಲಪಾತ ಮಾರ್ಗದಲ್ಲಿ ಚಾರಣಕ್ಕೆ ತೆರಳಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮತ್ತೊಂದೆಡೆ, ತಡಿಯಂಡಮೋಲ್‌ನಲ್ಲಿ ಕೇರಳ ಮೂಲದ ಮಹಿಳೆಯೊಬ್ಬರು ದಾರಿ ತಪ್ಪಿ ನಾಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು.
ರಾಜ್ಯದಲ್ಲಿ ಒಟ್ಟು 39 ನಿಯಮಿತ ಅರಣ್ಯ ಚಾರಣ ಮಾರ್ಗಗಳನ್ನು ಗುರುತಿಸಲಾಗಿದೆ. ಅತಿಯಾದ ಪ್ರವಾಸಿಗರ ದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಕೃತಿಯ ಮೇಲಿನ ಒತ್ತಡ ಕಡಿಮೆ ಮಾಡಲು ಇನ್ನುಮುಂದೆ ‘ಕ್ಯಾರಿಯಿಂಗ್ ಕೆಪಾಸಿಟಿ’ ಆಧಾರದ ಮೇಲೆ ಚಾರಣಿಗರ ಸಂಖ್ಯೆಗೆ ಕಟ್ಟುನಿಟ್ಟಿನ ಮಿತಿ ಹೇರಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಅಕೌಂಟ್ ನಲ್ಲಿ 1 ಕೋಟಿ ಬ್ಯಾಲೆನ್ಸ್: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿ 7 ದಿನಗಳಾದ್ರೂ ಸಿಗದ ಟೆಕ್ಕಿ ಅದ್ವೈತ್ ಸುಳಿವು
ವನ್ಯಜೀವಿಗಳ ಸಂಚಾರ ಹೆಚ್ಚಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಚಾರಣವನ್ನು ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ. ಕುದುರೆಮುಖ ಸೇರಿದಂತೆ ಸುರಕ್ಷಿತವಾಗಿರುವ ಆಯ್ದ ಮಾರ್ಗಗಳನ್ನು ಮಾತ್ರ ಹಂತ-ಹಂತವಾಗಿ ಮರುಆರಂಭಿಸಲು ನಿರ್ಧರಿಸಲಾಗಿದೆ. ಇನ್ನು ನಿಯಮ ಉಲ್ಲಂಘಿಸುವ ಚಾರಣಿಗರು ಹಾಗೂ ಅನಧಿಕೃತ ಗೈಡ್‌ಗಳನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲಾಗುವುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.