
ಬೆಂಗಳೂರು, (ನವೆಂಬರ್ 01): ರಾಜ್ಯದ ಹಲವೆಡೆ ಇಂದಿನಿಂದ ಒಂದು ವಾರಗಳ ಕಾಲ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 21°C ಇರಲಿದೆ.
ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 3ರಂದು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 1ರಿಂದ 5ರವರೆಗೆ ಅಲ್ಲಲ್ಲಿ ಭಾರಿ (64.5MM-115.5MM) ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 21°C ಇರಲಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ. ನಗರದ ಕೆಲವು ಭಾಗಗಳಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆಯಿದೆ. ತೇವಾಂಶವು ಶೇ. 60 ರಷ್ಟಿರಲಿದ್ದು, ಪೂರ್ವ ದಿಕ್ಕಿನಿಂದ ಗಂಟೆಗೆ 7 ಮೈಲಿ ವೇಗದಲ್ಲಿ ಗಾಳಿ ಬೀಸಲಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಬಾಗಲಕೋಟೆ, ವಿಜಯಪುರ, ಬೀದರ್ ಮತ್ತು ಕಲಬುರಗಿ ಭಾಗಗಳಲ್ಲಿ ಬಹುತೇಕ ಒಣ ಹವಾಮಾನ ಇರಲಿದ್ದು, ಚಳಿಯ ಪ್ರಮಾಣ ತುಸು ಹೆಚ್ಚಾಗಲಿದೆ.
ಸಾಮಾನ್ಯಕ್ಕಿಂತ ಕಡಿಮೆ ಮಳೆ!
ತಾಪಮಾನದ ಏರಿಕೆಯ ಜೊತೆಗೆ ಮಳೆಯ ಪ್ರಮಾಣದಲ್ಲೂ ಈ ಬಾರಿ ಭಾರಿ ಕೊರತೆ ಎದುರಾಗುವ ಲಕ್ಷಣಗಳಿವೆ. ಮಧ್ಯ, ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ನವೆಂಬರ್‌ನಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.