ಕರ್ನಾಟಕದ 20 ಸಾವಿರ ಹೆಕ್ಟೇರ್​ಗೂ ಹೆಚ್ಚಿನ ಅರಣ್ಯ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆ!

|

Updated on: Oct 14, 2024 | 7:11 AM

ಕರ್ನಾಟಕದ ಸುಮಾರು 20 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಕಳೆದ 20 ವರ್ಷಗಳಲ್ಲಿ ಅರಣ್ಯೇತರ ಉದ್ದೇಶಕಗಳಿಗೆ ಬಳಕೆಯಾಗಿರುವುದು ತಿಳಿದುಬಂದಿದೆ. ಆದರೆ, ಹೀಗೆ ನೀಡಲಾದ ಅರಣ್ಯ ಭೂಮಿಗೆ ನಿಯಮಾನುಸಾರ ಪರಿಹಾರ, ಇತರ ಭೂಮಿ ನೀಡಲಾಗಿದೆಯೇ? ಇಲ್ಲ ಎನ್ನುತ್ತವೆ ಮೂಲಗಳು. ಅರಣ್ಯ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡುವಾಗ ಏನೇನು ನಿಯಮ ಪಾಲಿಸಬೇಕು? ಅರಣ್ಯ ಕಾಯ್ದೆ ಹೇಳುವುದೇನು? ಇಲ್ಲಿದೆ ವಿದೆ.

ಕರ್ನಾಟಕದ 20 ಸಾವಿರ ಹೆಕ್ಟೇರ್​ಗೂ ಹೆಚ್ಚಿನ ಅರಣ್ಯ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 14: ಕಳೆದ 20 ವರ್ಷಗಳಲ್ಲಿ ಅರಣ್ಯ ಇಲಾಖೆಯು ಕರ್ನಾಟಕದಲ್ಲಿ ವಿವಿಧ ಅರಣ್ಯೇತರ ಯೋಜನೆಗಳಿಗೆ ಸುಮಾರು 20,805.72 ಹೆಕ್ಟೇರ್ ಅರಣ್ಯ ಭೂಮಿ ನೀಡಿರುವುದು ದತ್ತಾಂಶಗಳಿಂದ ತಿಳಿದುಬಂದಿದೆ. 2004-05 ರಿಂದ 2023-24 ರವರೆಗೆ ಅರಣ್ಯ ಸಂರಕ್ಷಣಾ ಕಾಯ್ದೆ (1980) ಅಡಿಯಲ್ಲಿ ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ನೀಡಿದ ಮಾಹಿತಿಯ ಪ್ರಕಾರ, ವಿವಿಧ ಯೋಜನೆಗಳಿಗೆ ಭೂಮಿಗೆ ಮಂಜೂರಾತಿ ಕೋರಿ 534 ಪ್ರಸ್ತಾವನೆಗಳು ಇಲಾಖೆಗೆ ಸಲ್ಲಿಕೆಯಾಗಿದ್ದವು. ಗಣಿಗಾರಿಕೆ ಮತ್ತು ನೀರಾವರಿ ಸೇರಿದಂತೆ ಪ್ರಮುಖ ಯೋಜನೆಗಳಿಗೆ ದೊಡ್ಡ ಮತ್ತು ಸಣ್ಣ ಜಮೀನುಗಳನ್ನು ನೀಡಲಾಗಿದೆ

ಯಾವ ಜಿಲ್ಲೆಯಲ್ಲಿ ಎಷ್ಟು?

ಶಿವಮೊಗ್ಗದಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ 449.55 ಹೆಕ್ಟೇರ್, ಬಳ್ಳಾರಿಯಲ್ಲಿ ಗಣಿಗಾರಿಕೆಗೆ 335.04 ಹೆಕ್ಟೇರ್ ಮತ್ತು 232.76 ಹೆಕ್ಟೇರ್, ಬೆಳಗಾವಿಯಲ್ಲಿ ಪವನ ವಿದ್ಯುತ್ ಉತ್ಪಾದನೆಗೆ 215.55 ಹೆಕ್ಟೇರ್, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ರಸ್ತೆ ಯೋಜನೆಗಳಿಗೆ 0.78 ಹೆಕ್ಟೇರ್ ಮತ್ತು 0.4 ಹೆಕ್ಟೇರ್ ಶುದ್ಧೀಕರಣ ಘಟಕಕ್ಕೆ ನೀಡಲಾಗಿದೆ. ವಿಶೇಷವೆಂದರೆ ಹೆಚ್ಚಿನ ಸಂದರ್ಭಗಳಲ್ಲಿ, ಒಂದು ಹೆಕ್ಟೇರ್​​ಗಿಂತ ಕಡಿಮೆ ಭೂಮಿಯನ್ನು ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಸೆಲ್ ಫೋನ್ ನೆಟ್‌ವರ್ಕ್ ಟವರ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಅರಣ್ಯ ಭೂಮಿಯನ್ನು ಸಹ ನೀಡಿದೆ. ಕಳೆದ ಒಂದು ವರ್ಷದಲ್ಲಿ, ಕೇಂದ್ರ ಸರ್ಕಾರದ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕವನ್ನು ಹೆಚ್ಚಿಸುವ ಯೋಜನೆಯಡಿ, 256 ಬಿಎಸ್​ಎನ್​ಎಲ್ ಟವರ್‌ಗಳನ್ನು ಸ್ಥಾಪಿಸಲು ಅರಣ್ಯ ಭೂಮಿಯನ್ನು ನೀಡಲಾಗಿದೆ ಎಂದು ‘ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಹೀಗೆ ಮೊಬೈಲ್ ಸಂಪರ್ಕ ಹೆಚ್ಚಿಸುವುದಕ್ಕೆಂದು ನೀಡಲಾದ ಅರಣ್ಯ ಭೂಮಿ ಪೈಕಿ ಹೆಚ್ಚಿನವು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಪಶ್ಚಿಮ ಘಟ್ಟಗಳ ಇತರ ಸ್ಥಳಗಳಲ್ಲಿ ಒಳಗೊಂಡಿವೆ.

ಎತ್ತಿನಹೊಳೆ ಯೋಜನೆಗೆ 500 ಎಕರೆ

ಎತ್ತಿನಹೊಳೆ ಯೋಜನೆಗೆ ಸುಮಾರು 500 ಎಕರೆ ಮತ್ತು ಕಳಸಾ-ಬಂಡೂರಿ ಯೋಜನೆಗಳಿಗೆ 50 ಹೆಕ್ಟೇರ್ ಭೂಮಿ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಅರ್ಜಿದಾರರು ಸಣ್ಣ ಪ್ಲಾಟ್‌ಗಳಿಗೆ ಅನುಮೋದನೆ ಕೋರಿದ್ದಾರೆ. ಇದಕ್ಕೆ ಕಾರಣ ಕಠಿಣ ನಿಯಮಗಳು. ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ನೀಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಿಯಮಗಳಲ್ಲಿ ಏನಿದೆ? ಅರಣ್ಯ ಭೂಮಿಗೂ ಪರಿಹಾರ ನೀಡಬೇಕೇ?

‘ಅರಣ್ಯ ಸಂರಕ್ಷಣಾ ಕಾಯ್ದೆ 1980’ ರ ಅಡಿಯಲ್ಲಿ ಅರಣ್ಯ ಭೂಮಿಯನ್ನು ಇತರ ಉದ್ದೇಶಗಳಿಗೆ ಪರಿವರ್ತನೆ ಮಾಡುವ ನಿಯಮಗಳಿಗೆ 2023 ರಲ್ಲಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯಾದ ಪ್ರಕಾರ, ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಭೂಮಿ ನೀಡಬೇಕಾದ ಅಗತ್ಯ ಬಂದರೆ, ಪ್ರತಿ ಹೆಕ್ಟೇರ್‌ಗೆ ಸಮಾನವಾಗಿ ಇತರ ಭೂಮಿಯನ್ನು ಅರಣ್ಯೀಕರಣಕ್ಕಾಗಿ ಇಲಾಖೆಗೆ ಹಸ್ತಾಂತರಿಸಬೇಕು. ಅರಣ್ಯೀಕರಣಕ್ಕೆ ಪರಿಹಾರ ನೀಡಬೇಕು. ಅರ್ಜಿದಾರರು ಮರಗಳನ್ನು ಕಡಿಯುವ ವೆಚ್ಚವನ್ನು ಸಹ ಭರಿಸಬೇಕು ಮತ್ತು ಅವುಗಳ ಪ್ರಸ್ತುತ ಮೌಲ್ಯವನ್ನು ಪಾವತಿಸಬೇಕು. ವನ್ಯಜೀವಿಗಳ ಉಪಶಮನಕ್ಕಾಗಿ ಯೋಜನಾ ವೆಚ್ಚದ ಶೇ 2 ಮತ್ತು ಮಣ್ಣು ತಗ್ಗಿಸುವ ಕ್ರಮಗಳಿಗಾಗಿ ಶೇ 0.5 ಪಾವತಿಸಬೇಕು ಎಂದು ಅಧಿಕಾರಿ ಮಾಹಿತಿ ನೀಡಿರುವುದನ್ನು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಗುಡ್ಡ, ಭೂ ಕುಸಿತಕ್ಕೆ ಕಾರಣವೇನು? ಆಘಾತಕಾರಿ ವರದಿ ಬಹಿರಂಗ

ಅರಣ್ಯ ಪ್ರದೇಶದ ಬಳಿಯೇ ಪರಿಹಾರವಾಗಿ ಭೂಮಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಹಲವು ಪ್ರಕರಣಗಳಲ್ಲಿ, ಅರಣ್ಯದಿಂದ ದೂರವಿರುವ ಸ್ಥಳಗಳಲ್ಲಿ ಭೂಮಿ ನೀಡಲಾಗಿದೆ. ಇಲಾಖೆಗೆ ನೀಡಿರುವ ಕೆಲವು ಜಮೀನುಗಳು ವ್ಯಾಜ್ಯ ಅಥವಾ ಅತಿಕ್ರಮಣಕ್ಕೆ ಒಳಗಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ