KAS, PSI ಪರೀಕ್ಷೆ ಮುಂದೂಡಿಕೆಗೆ ಕೆಪಿಎಸ್ಸಿ, ಕೆಇಎ ವಿರುದ್ಧ ಅಭ್ಯರ್ಥಿಗಳ ಆಕ್ರೋಶ
ಅದೆಷ್ಟೋ ಅಭ್ಯರ್ಥಿಗಳ ಬದುಕಲ್ಲಿ ಬೆಳಕು ತೋರಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕನಸನ್ನು ನುಚ್ಚು ನೂರು ಮಾಡುತ್ತಿವೆ ಎಂದು ಸಾವಿರಾರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಮಂಡಳಿಗಳು ಮೇಲಿಂದ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿವೆ ಎಂದು ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಅಭ್ಯರ್ಥಿಗಳ ಈ ಆಕ್ರೋಶಕ್ಕೆ ಕಾರಣವೇನು? ಈ ಸ್ಟೋರಿ ಓದಿ
ಬೆಂಗಳೂರು, ಸೆಪ್ಟೆಂಬರ್ 18: ಪದೇ ಪದೇ KAS ಹಾಗೂ PSI ಪರೀಕ್ಷೆ ಮುಂದೂಡುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. KAS, PSI, FDA ಸೇರಿದ್ದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವರ್ಷಗಳಿಂದ ಅಭ್ಯರ್ಥಿಗಳು ತಯಾರಿ ನಡೆಸಿದ್ದು, ಈಗ ಕರ್ನಾಟಕ ಲೋಕಸೇವಾ ಆಯೋಗ (KPSC) ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪರೀಕ್ಷಾ ದಿನಾಂಕದ ನೋಟಿಫಿಕೇಶನ್ ಹೊರಿಡಿಸಿ, ನಂತರ ಪರೀಕ್ಷೆಗಳನ್ನು ಮುಂದೂಡುತ್ತಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೆಪಿಎಸ್ಇ ಹಾಗೂ ಕೆಇಎ ಎಡವಟ್ಟು ವಿರುದ್ಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ.
ಈಗಾಗಲೇ ಕೆಪಿಎಸ್ಸಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಪಿಎಸ್ಸಿ ಪ್ರತೀ ಬಾರಿಯೂ, ಪ್ರತೀ ಪರೀಕ್ಷೆಯಲ್ಲಿಯೂ ಅಭ್ಯರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಒಂದು ಸಲ ಪ್ರಶ್ನೆಗಳ ಅನುವಾದದಲ್ಲಿ ಮಹಾ ತಪ್ಪು ಮಾಡಿದರೆ, ಮತ್ತೊಂದು ಬಾರಿ ಪರೀಕ್ಷೆಗಳನ್ನು ಬೇಕಾಬಿಟ್ಟಿ ದಿನಾಂಕದಲ್ಲಿ ನಡೆಸುತ್ತಿದೆ. ಮತ್ತೊಂದು ಬಾರಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಮೊನೆ ನಡೆಯಬೇಕಿದ್ದ ಕೆಪಿಎಸ್ಸಿ ಗ್ರೂಪ್ ಬಿ ಪರೀಕ್ಷೆ ಏಕಾಏಕಿ ಮುಂದೂಡಿದೆ. ಪ್ರತಿ ಬಾರಿಯೂ ಇತರ ಎಡವಟ್ಟು ಮಾಡುತ್ತಿರುವುದು ಅಭ್ಯರ್ಥಿಗಳಿಗೆ ಸಂಕಷ್ಟ ತಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ Learn And Earn ಗೆ ಹೆಚ್ಚಿದ ಬೇಡಿಕೆ
ಪರೀಕ್ಷೆ ನೋಟಿಫಿಕೇಶನ್ ಆಗುತ್ತಿದ್ದಂತೆ ಅಧ್ಯಯನಕ್ಕೆಂದು ಬೆಂಗಳೂರಿಗೆ ಬಂದು, ಸಾಲ ಮಾಡಿ ಪಿಜಿಯಲ್ಲಿದ್ದು ಓದತ್ತಿದ್ದೇವೆ. ಆದರೆ ಧಿಡೀರನೆ ಪರೀಕ್ಷೆ ಮುಂದೂಡಿದ್ದು ನಮಗೆ ಸಮಸ್ಯೆಯಾಗುತ್ತಿದೆ ಎಂದು ಅಭ್ಯರ್ಥಿ ಆಕಾಶ್ ಬೇಸರ ಹೊರ ಹಾಕಿದ್ದಾರೆ.
ಒಟ್ಟಿನಲ್ಲಿ ಇತ್ತಿಚ್ಚಿನ ದಿನಗಳಲ್ಲಿ ನೇಮಾತಿ ಪರೀಕ್ಷೆಗಳಲ್ಲಿ ಮಂಡಳಿಗಳಿಂದ ಒಂದಲ್ಲ ಒಂದು ಎಡವಟ್ಟು ಕಂಡು ಬರುತ್ತಿದ್ದು, ಕೊನೆ ಕ್ಷಣದಲ್ಲಿ ಮಂಡಳಿಗಳು ಪರೀಕ್ಷೆ ಮುಂದೂಡಿ ಹಾಗೂ ಪರೀಕ್ಷೆಯಲ್ಲಿ ಎಡವಟ್ಟು ಮಾಡುವುದು ವರ್ಷಗಳಿಂದ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Wed, 18 September 24