
ಶಿವಮೊಗ್ಗ: ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur), ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ತಕ್ಕ ಉತ್ತರ ನೀಡುವ ಹಕ್ಕು ಹಿಂದೂಗಳಿಗೆ ಕೂಡ ಇದೆ. ಹಿಂದೂಗಳು ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುವುದರಿಂದ ತಮ್ಮ ಮನೆಗಳಲ್ಲಿ ಚಾಕುಗಳನ್ನು ಹರಿತಗೊಳಿಸಿ ಇಟ್ಟುಕೊಳ್ಳುವಂತೆ ಕರೆ ನೀಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
“ಮುಸ್ಲಿಮರು ಲವ್ ಜಿಹಾದ್ ಸಂಪ್ರದಾಯವನ್ನು ಹೊಂದಿದ್ದಾರೆ, ಅವರು ಲವ್ ಮಾಡಿದರೂ ಅವರು ಅದರಲ್ಲಿ ಜಿಹಾದ್ ಮಾಡುತ್ತಾರೆ. ನಾವು (ಹಿಂದೂಗಳು) ಕೂಡ ಪ್ರೀತಿಸುತ್ತೇವೆ, ದೇವರನ್ನು ಪ್ರೀತಿಸುತ್ತೇವೆ, ಸನ್ಯಾಸಿಯಾದವರು ತನ್ನ ದೇವರನ್ನು ಪ್ರೀತಿಸುತ್ತಾರೆ” ಎಂದು ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
ಇದೇ ವೇಳೆ ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ ಅವರು, ಆತ್ಮರಕ್ಷಣೆಗಾಗಿ ಮನೆಯಲ್ಲಿ ಚಾಕುಗಳನ್ನು ಹರಿತವಾಗಿಟ್ಟುಕೊಳ್ಳುವಂತೆ ಹಿಂದೂಗಳ ಬಳಿ ಮನವಿ ಮಾಡಿದರು. ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ. ಏನಿಲ್ಲವೆಂದರೂ ತರಕಾರಿಗಳನ್ನು ಕತ್ತರಿಸಲು ಬಳಸುತ್ತಿದ್ದ ಚಾಕುಗಳಾದರೂ ಹರಿತವಾಗಿರಲಿ. ಯಾವಾಗ ಯಾವ ಪರಿಸ್ಥಿತಿ ಬರುತ್ತದೋ ಗೊತ್ತಿಲ್ಲ. ಎಲ್ಲರಿಗೂ ಆತ್ಮರಕ್ಷಣೆಯ ಹಕ್ಕಿದೆ. ನಮ್ಮ ಮನೆಗೆ ಯಾರಾದರೂ ನುಸುಳಿದರೆ ಅವರಿಗೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.
ಮಕ್ಕಳನ್ನು ಕ್ರೈಸ್ತ ಮಿಶನರಿ ಶಾಲೆಗೆ ಕಳುಹಿಸಬೇಡಿ. ಅಲ್ಲಿ ಕಲಿತ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ಲವ್ ಜಿಹಾದ್ಗೆ ಮಹಿಳಾ ಶಕ್ತಿ ಉತ್ತರ ಕೊಡಬೇಕು. ಮಹಿಳೆಯರಿಗೆ ಅಣ್ಣ ತಮ್ಮಂದಿರು ಸಾಥ್ ಕೊಡಬೇಕು. ಲವ್ ಜಿಹಾದ್ನಿಂದ ದೇಶದ ಮಹಿಳೆಯರನ್ನು ರಕ್ಷಣೆ ಮಾಡಬೇಕು. ಜೀವ ಉಳಿಸಲು ಬದ್ಧ, ಜೀವ ತೆಗೆಯಲು ನಾವು ಸಿದ್ಧ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕರೆ ನೀಡಿದ್ದಾರೆ.