ಬೆಂಗಳೂರು, (ಆಗಸ್ಟ್ 28): ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ನೀಡಿರುವ ಜಾಮೀನು ರದ್ದು ಕೋರಿ SIT ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಎಸ್ಐಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದ್ರೆ, ಹೈಕೋರ್ಟ್ ಇಂದು (ಆಗಸ್ಟ್ 28) ಎಸ್ಐಟಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಎಚ್ಡಿ ರೇವಣ್ಣಗೆ ಮತ್ತಷ್ಟು ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇನ್ನು ಇದೇ ಪ್ರಕರಣದ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ. ಸತೀಶ್ ಬಾಬು, ಮಧುಗೌಡ, ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿಗೆ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಪೀಠ ಆದೇಶ ಹೊರಡಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ರೇವಣ್ಣ ಪತ್ನಿ ಭವಾನಿ ಕೂಡ ಈಗಾಗಲೇಜಾಮೀನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್
ಸಂತ್ರಸ್ತೆ ಮಹಿಳೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರೇವಣ್ಣ ಅವರಿಗೆ ಮೇ 13ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು. ಬಳಿಕ ಎಸ್ಐಟಿ ವಿಶೇಷ ಕೋರ್ಟ್ನ ಜಾಮೀನು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದು ಮಾಡುವಂತೆ ಮನವಿ ಮಾಡಿತ್ತು. ಆದ್ರೆ, ಕೋರ್ಟ್ ಜಾಮೀನು ರದ್ದಗೊಳಿಸಲು ನಿರಾಕರಿಸಿದೆ.
ಮೈಸೂರು ಜಿಲ್ಲೆಯ ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಚ್. ಡಿ. ರೇವಣ್ಣ ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 28 August 24