Kochimul job scam: ಸತತ ಎರಡನೇ ದಿನವೂ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ವಿಚಾರಣೆ ನಡೆಸಿದ ಇ.ಡಿ
ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಶುಕ್ರವಾರದಿಂದ ಕೆವೈ ನಂಜೇಗೌಡ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಕೋಚಿಮುಲ್ ಉದ್ಯೋಗ ಹಗರಣ ಸಂಬಂಧ ಜನವರಿಯಲ್ಲಿ ಇ.ಡಿ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಅವರ ಆಪ್ತರ ಮನೆಗಳ ಮೇಲೂ ಇ.ಡಿ ದಾಳಿ ನಡೆದಿತ್ತು.

ಬೆಂಗಳೂರು, ಫೆಬ್ರವರಿ 24: ಕೋಚಿಮುಲ್ ಉದ್ಯೋಗ ಹಗರಣ (Kochimul job scam) ಮತ್ತು ಸರ್ಕಾರಿ ಭೂಮಿ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಶಾಸಕ ಕೆವೈ ನಂಜೇಗೌಡ (Malur MLA KY Nanjegowda) ಅವರನ್ನು ಜಾರಿ ನಿರ್ದೇಶನಾಲಯ (ED) ವಿಚಾರಣೆ ನಡೆಸುತ್ತಿದೆ. ನಂಜೇಗೌಡ ಅವರು ಶನಿವಾರ ಶಾಂತಿನಗರದ ಇ.ಡಿ ಕಚೇರಿಯಲ್ಲಿ ಎರಡನೇ ದಿನದ ವಿಚಾರಣೆಗೆ ಹಾಜರಾದರು. ಕೆವೈ ನಂಜೇಗೌಡ ಮಾಲೂರು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದಾಗ 80 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ 150 ಕೋಟಿ ರೂ.ಗೆ ಅಕ್ರಮವಾಗಿ ಮಂಜೂರು ಮಾಡಿದ್ದು, ಕೋಲಾರದ ಪ್ರಾದೇಶಿಕ ಆಯುಕ್ತರು ಪರಿಶೀಲನೆಯ ನಂತರ ಭೂ ಮಂಜೂರಾತಿಯನ್ನು ರದ್ದುಗೊಳಿಸಿದ್ದರು.
ಕೋಚಿಮುಲ್ ಉದ್ಯೋಗ ಹಗರಣ
ಕೋಲಾರ – ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರೂ ಆಗಿರುವ ನಂಜೇಗೌಡ ಅವರು ಕೋಚಿಮುಲ್ ನೇಮಕಾತಿಯಲ್ಲಿ ಕೋಟ್ಯಂತರ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಶಿಫಾರಸು ಇರುವವರಿಗೆ ನೇಮಕಾತಿ ಪತ್ರ ನೀಡಲಾಗಿತ್ತು ಎಂಬ ಆರೋಪವಿದೆ. ಕೋಚಿಮುಲ್ನಲ್ಲಿ ಕೆಲಸ ಕೊಡಿಸುವುದಾಗಿ 30 ಮಂದಿಯಿಂದ 20ರಿಂದ 30 ಲಕ್ಷ ರೂಪಾಯಿ ಪಡೆದಿರುವ ಆರೋಪ ಕೂಡ ನಂಜೇಗೌಡ ಮೇಲಿದೆ.
ಇ.ಡಿ ಅಧಿಕಾರಿಗಳು ಜನವರಿಯಲ್ಲಿ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ 25 ಲಕ್ಷ ರೂ. ನಗದು, 50 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಕೊಮ್ಮನಹಳ್ಳಿ, ಕೆಆರ್ ಪುರಂನಲ್ಲಿರುವ ಅವರ ಮನೆಗಳು, ಅವರ ಕಚೇರಿಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ನಂಜೇಗೌಡ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) 2002ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಶಾಸಕ ನಂಜೇಗೌಡಗೆ ಸತತ 10 ಗಂಟೆ ಇಡಿ ಡ್ರಿಲ್; ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ಮೂರ್ತಿ ನಿವಾಸದ ಮನೆ ಮೇಲೂ ದಾಳಿ ಮಾಡಿದ್ದರು.
ಶುಕ್ರವಾರ ಸತತ 10 ಗಂಟೆ ನಡೆದಿತ್ತು ವಿಚಾರಣೆ
ಕಾಂಗ್ರೆಸ್ ಶಾಸಕ ನಂಜೇಗೌಡ ಅವರನ್ನು ಶುಕ್ರವಾರ ಸತತ 10 ಗಂಟೆ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ನಂಜೇಗೌಡ, ನನ್ನ ಜೊತೆ ಮಗನನ್ನೂ ವಿಚಾರಣೆಗೆ ಕರೆದಿದ್ದರು. ಬೆಳಗ್ಗೆ 11.30 ಕ್ಕೆ ವಿಚಾರಣೆಗೆ ಬಂದಿದ್ದೆವು. ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ. ನಾಳೆ 11 ಗಂಟೆಗೆ ಮತ್ತೆ ಬರಲು ಹೇಳಿದ್ದಾರೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ