ಒಂದಕ್ಕಿಂತ ಹೆಚ್ಚಿನ ಬಂದೂಕು ಹೊಂದಿದ್ದರೆ ತಕ್ಷಣವೇ ಪೊಲೀಸ್​ ಠಾಣೆಗೆ ತಂದೊಪ್ಪಿಸಬೇಕು; ಕೊಡಗು ಜಿಲ್ಲಾಡಳಿತ ಕಟ್ಟಪ್ಪಣೆಗೆ ಜನಾಕ್ರೋಶ

ಒಂದಕ್ಕಿಂತ ಹೆಚ್ಚಿನ ಬಂದೂಕನ್ನು ಹೊಂದಿದ್ದರೆ ತಕ್ಷಣವೇ ಪೊಲೀಸ್​ ಠಾಣೆಗೆ ತಂದೊಪ್ಪಿಸಿಬೇಕು ಎಂದು ಕೊಡಗು ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದೆ. ಬ್ರಿಟಿಷರ ಕಾಲದಿಂದಲೇ ಬಂದೂಕಿನ ಹಕ್ಕನ್ನು ಪಡೆದಿರುವ ಕೊಡಗಿನ ಮೂಲ ನಿವಾಸಿಗಳು ಈ ಆದೇಶದಿಂದ ಆಕ್ರೋಶಗೊಂಡಿದ್ದಾರೆ.

ಒಂದಕ್ಕಿಂತ ಹೆಚ್ಚಿನ ಬಂದೂಕು ಹೊಂದಿದ್ದರೆ ತಕ್ಷಣವೇ ಪೊಲೀಸ್​ ಠಾಣೆಗೆ ತಂದೊಪ್ಪಿಸಬೇಕು; ಕೊಡಗು ಜಿಲ್ಲಾಡಳಿತ ಕಟ್ಟಪ್ಪಣೆಗೆ ಜನಾಕ್ರೋಶ
ಕೊಡಗು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 6:33 PM

ಕೊಡಗು: ಜಿಲ್ಲೆಯ ಮೂಲ ನಿವಾಸಿಗಳ ಬಳಿ ಇರುವ ಒಂದಕ್ಕಿಂತ ಹೆಚ್ಚಿನ ಬಂದೂಕನ್ನು ತಕ್ಷಣವೇ ಪೊಲೀಸ್​ ಠಾಣೆಗೆ ತಂದೊಪ್ಪಿಸಬೇಕು ಎಂದು ಕೊಡಗು ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದೆ. ಆದ್ರೆ, ಜಿಲ್ಲಾಡಳಿತದ ಈ ಆದೇಶಕ್ಕೆ ಕೊಡಗಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕೊಡಗಿನಲ್ಲಿ ಬಂದೂಕಿಗೆ ವಿಶೇಷ ಮಹತ್ವವಿದೆ. ಬ್ರಿಟಿಷರ ಕಾಲದ ಕೊಡಗಿನ ಮೂಲ ನಿವಾಸಿಗಳಿಗೆ ಬಂದೂಕು ಹೊಂದಲು ವಿಶೇಷ ವಿನಾಯಿತಿ ಕಲ್ಪಿಸಲಾಗಿತ್ತು. ಅದು ಈಗಲೂ ಮುಂದುವರಿದಿದೆ. ಜಿಲ್ಲೆಯ ಹಬ್ಬ ಹರಿದಿನಗಳು, ಹುಟ್ಟು ಸಾವಿನ ಸಂದರ್ಭ ಕೊಡಗಿನ ಮೂಲ ನಿವಾಸಿಗಳು ಬಂದೂಕುಗಳನ್ನು ಸಾಂಪ್ರದಾಯಿಕವಾಗಿ ಬಳಸುತ್ತಾರೆ. ಹಾಗಾಗಿಯೇ ಜಿಲ್ಲೆಯ ಪ್ರತಿಯೊಬ್ಬ ಮೂಲ ನಿವಾಸಿಗಳ ಮನೆಯಲ್ಲಿ ಕನಿಷ್ಟ ಒಂದಾದರೂ ಬಂದೂಕು ಇದ್ದೇ ಇರುತ್ತದೆ. ಆದರೆ ಜಿಲ್ಲೆಗೆ ಬರುವ ಅಧಿಕಾರಿಗಳ ಅಜ್ಞಾನದಿಂದಾಗಿ ಜಿಲ್ಲೆಯ ಜನರ ಬಂದೂಕು ಹಕ್ಕಿಗೆ ಪದೇ ಪದೇ ಧಕ್ಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ಜಿಲ್ಲಾಡಳಿತ ಹೊರಡಿಸಿರುವ ಆದೇಶವೊಂದು ವಿವಾದಕ್ಕೀಡಾಗಿದೆ.  ಜಿಲ್ಲೆಯಲ್ಲಿ ಲೈಸೆನ್ಸ್​ ಪಡೆದು ಬಂದೂಕು ಪಡೆದವರು ಮತ್ತು ಲೈಸೆನ್ಸ್​ ವಿನಾಯಿತಿ ಅಡಿಯಲ್ಲಿ ಬಂದೂಕು ಪಡೆದವರು ಒಂದಕ್ಕಿಂತ ಹೆಚ್ಚು ಬಂದೂಕನ್ನು ಹೊಂದಿದ್ದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಂದೊಪ್ಪಿಸುವಂತೆ ಆದೇಶಿಸಿದೆ. ಬಂದೂಕು ಲೈಸೆನ್ಸ್​ ವಿನಾಯಿತಿ ಅಂದರೆ ವಿಶೇಷ ಹಕ್ಕಿನಡಿ ಒಂದಕ್ಕಿಂತ ಹೆಚ್ಚು ಕೋವಿ ಹೊಂದಿರುವ ಕೊಡಗಿನ ಮೂಲ ನಿವಾಸಿಗಳಲ್ಲಿ ಇದು ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನಿನಲ್ಲೇ 3 ಬಂದೂಕು ಹೊಂದುವ ಅಧಿಕಾರವಿರುವಾಗ ಇವರು ಅನಗತ್ಯ ಆದೇಶ ಹೊರಡಿಸಿ ಗೊಂದಲ ಮೂಡಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದೂಕು ಹಕ್ಕಿನ ಬಗ್ಗೆ ಜ್ಞಾನವಿರುವ ಬಹಳಷ್ಟು ತಜ್ಞರು, ಕಾನೂನು ಸಲಹೆಗಾರರೂ ಜಿಲ್ಲೆಯಲ್ಲಿದ್ದಾರೆ. ಆದರೆ ಪ್ರತಿ ಬಾರಿ ಜಿಲ್ಲಾಡಳಿತ ಬಂದೂಕಿನ ಬಗ್ಗೆ ಯಾವುದೇ ಆದೇಶ ಹೊರಡಿಸುವಾಗಲೂ ಈ ತಜ್ಞರ ಸಲಹೆ ಕೇಳುವ ಗೋಜಿಗೇ ಹೋಗುವುದಿಲ್ಲ. ಬದಲಿಗೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದು ಜಿಲ್ಲೆಯ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದು ಅಲ್ಲದೆ ಜಿಲ್ಲೆಗೆ ಬರುವ ಬಹುತೇಕ ಅಧಿಕಾರಿಗಳಿಗೆ ಕೊಡಗು ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೇ ಒಂದು ಹಕ್ಕಾಗಿ ಬೆಳೆದು ಬಂದಿರುವ ಬಂದೂಕಿನ ಬಗ್ಗೆ ಯಾವುದೇ ಜ್ಞಾನವಿಲ್ಲದೇ ಇರುವುದು ಕೂಡ ಈ ಗೊಂದಲಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ:ಕೊಡಗು: ಊಟಿ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರವಾಸಿಗರ ಹಾಟ್​ ಫೇವರಿಟ್ ‘ರಾಜಾಸೀಟ್’

ಸದ್ಯ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಬಹಳಷ್ಟು ಗೊಂದಲಕಾರಿಯಾಗಿದೆ. ವಾಸ್ತವವಾಗಿ ಲೈಸೆನ್ಸ್​ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಬಂದೂಕು ಪಡೆದವರಿಗೆ ಮಾತ್ರ ಈ ಆದೇಶ ಅನ್ವಯವಾಗಬೇಕು. ಆದರೆ ಲೈಸೆನ್ಸ್​ ಬದಲು ವಿನಾಯಿತಿ ಅಡಿಯಲ್ಲಿ ಬಂದೂಕು ಪಡೆದವರಿಗೂ ಕೂಡ ಹೆಚ್ಚುವರಿ ಬಂದೂಕು ತಂದೊಪ್ಪಿಸುವಂತೆ ಸೂಚಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಜಿಲ್ಲಾಡಳಿತ ಆದಷ್ಟು ಬೇಗ ಜಿಲ್ಲೆಯ ಬಂದೂಕು ಮತ್ತು ಕಾನೂನು ತಜ್ಞರನ್ನು ಕರೆದು ಸಭೆ ನಡೆಸುವ ಅಗತ್ಯವಿದೆ ಎಂದು ಕೊಡಗಿನ ಜನರು ಆಗ್ರಹಿಸಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ