Kodagu Cricket Stadium: ಪ್ರಕೃತಿ ಸೊಬಗು.. ಬೆಟ್ಟಗುಡ್ಡಗಳ ಮಧ್ಯೆ ಕೊಡಗಿನಲ್ಲಿ ತಲೆ ಎತ್ತುತ್ತಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ಕೊಡಗಿನಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಸ್ಟಾರ್ ಆಟಗಾರರ ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಬಹುದು. ಹೌದು ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ.
ಕೊಡಗು: ಕ್ರೀಡಾ ಜಿಲ್ಲೆ ಕೊಡಗಿನ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಅಲ್ದೆ, ಇನ್ನೇನು 3ವರ್ಷಗಳಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಸದ್ದು ಮಾರ್ಧನಿಸಲಿದೆ.
ಇಲ್ಲಿನ ಪ್ರಕೃತಿ ಸೊಬಗು.. ಇಲ್ಲಿನ ಬೆಟ್ಟಗುಡ್ಡಗಳ ಸಾಲು ನೋಡೋಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರ್ತಾರೆ. ವಿವಿಧ ರಾಜ್ಯಗಳಿಂದ ಮತ್ತು ವಿದೇಶದಿಂದ್ಲೂ ಜನ ಆಗಮಿಸ್ತಾರೆ. ಆದ್ರೀಗ, ಇದೇ ಬೆಟ್ಟಗುಡ್ಡಗಳ ಮಧ್ಯೆ ಕುಳಿತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡಿದ್ರೆ ಹೇಗಿರುತ್ತೆ ಹೇಳಿ.. ನಿಜಕ್ಕೂ ಅದ್ಭುತವಾಗಿರುತ್ತೆ.. ಅಂತಹ ಕಾಲ ಹತ್ತಿರವಾಗೋ ಸಮಯವೂ ಬಂದಿದೆ.
ಕೊಡಗಿನಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಸ್ಟಾರ್ ಆಟಗಾರರ ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಬಹುದು. ಹೌದು ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಕೆಎಸ್ಸಿಎ ನೇತೃತ್ವದಲ್ಲಿ ಈ ಸ್ಟೇಡಿಯಂ ತಲೆ ಎತ್ತಲಿದೆ. ಇದಕ್ಕಾಗಿ ಜಿಲ್ಲಾಡಳಿತ ಈಗಾಗಲೇ 12 ಎಕರೆ ಜಾಗವನ್ನು ಮಂಜೂರು ಮಾಡಿದೆ. ಹಿಮಾಚಲ ಪ್ರದೇಶದ ಧರ್ಮ ಶಾಲಾ ಮಾದರಿಯಲ್ಲಿ ಈ ಸ್ಟೇಡಿಯಂ ನೈಸರ್ಗಿಕವಾಗಿಯೇ ತಲೆ ಎತ್ತಲಿದೆ. ವಿಶೇಷ ಅಂದ್ರೆ ಈ ಸ್ಟೇಡಿಯಂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರಲಿದೆ. ಕೊಡಗು ಡಿಸಿ ಡಾ.ಬಿ.ಸಿ. ಸತೀಶ್ ಅವರೇ ಸ್ವತಃ ಆಸಕ್ತಿ ವಹಿಸಿ ಕ್ರೀಡಾಂಗಣ ನಿರ್ಮಾಣಕ್ಕಿದ್ದ ಅಡೆತಡೆಗಳನ್ನ ನಿವಾರಿಸಿದ್ದಾರೆ.
ಇನ್ನು ಕೊಡಗು ಜಿಲ್ಲೆಯಲ್ಲಿ ಲೆದರ್ ಬಾಲ್ನಲ್ಲಿ ಕ್ರಿಕೆಟ್ ಆಡಲು ಬೇಕಾದ ಒಂದೇ ಒಂದು ಪಿಚ್ ಇರಲಿಲ್ಲ. ಕ್ರಿಕೆಟ್ ಪ್ರತಿಭೆಗಳು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಬೆಂಗಳೂರಿಗೇ ತೆರಳಬೇಕಿತ್ತು. ಬಹುತೇಕ ಪ್ರತಿಭೆಗಳು ಕನಸು ಈಡೇರಿಸಿಕೊಳ್ಳಲಾಗದೆ ಸುಮ್ಮನಾಗಿದ್ರು. ಆದ್ರೀಗ ಕೊಡಗಿನಲ್ಲೇ ಲೆದರ್ ಬಾಲ್ ಕ್ರಿಕೆಟ್ ಆಡಲು ಪ್ರಾಕ್ಟೀಸ್ ಮಾಡಲು ಅವಕಾಶ ಸಿಗಲಿದೆ. ಮಾತ್ರವಲ್ಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ಥಳೀಯ ಪ್ರತಿಭೆಗಳು ಬೆರೆಯುವ ಅವಕಾಶವೂ ದೊರೆಯಲಿದೆ.
ಸದ್ಯ, ಎಲ್ಲವೂ ಅಂದುಕೊಂಡಂತೆ ಆದಲ್ಲಿ 2025ರ ವೇಳೆಗೆ ಈ ಸ್ಟೇಡಿಯಂ ನಿರ್ಮಾಣ ಸಂಪೂರ್ಣವಾಗಲಿದೆ. ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ದೇಶ, ವಿದೇಶಗಳಿಂದ ಅಭಿಮಾನಿಗಳು ಕೂಡ ಆಗಮಿಸಲಿದ್ದು, ಕ್ರೀಡಾ ಪ್ರವಾಸೋಧ್ಯಮವೂ ಅಭಿವೃದ್ಧಿಯಾಗಲಿದೆ.
ವರದಿ: ಐಮಂಡ ಗೋಪಾಲ್ ಸೋಮಯ್ಯ, ಟಿವಿ9 ಕೊಡಗು
ಇದನ್ನೂ ಓದಿ: ಕುದುರೆಮುಖ ಅರಣ್ಯದ ಜಾಂಬಲೆ ಗ್ರಾಮಕ್ಕೆ ಸಿಕ್ತು ಡಿಜಿಟಲ್ ಲೈಫ್ ಶ್ರೀರಕ್ಷೆ, ಇದು ಜಿಯೋ ಕೊಡುಗೆ!