
ಕೊಡಗು, ಮೇ 13: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮುಗ್ದ ಪ್ರವಾಸಿಗರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ಅಲ್ಲಿನ ಪ್ರವಾಸೋದ್ಯಮದ (Jammu Kashmir Tourism) ಮೇಲೆ ಹೊಡೆತ ಬಿದ್ದಿತ್ತು. ಕೊನೆಗೆ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿ ಅನೇಕ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಈ ಬೆಳವಣಿಗೆಗಳ ಸಂದರ್ಭ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಲ್ಲಿನ ಪ್ರವಾಸೋದ್ಯಮ ಚಟುವಟಿಕೆಗೆ ಬ್ರೇಕ್ ಹಾಕಿತ್ತು. ಅದಾದ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿ, ಸದ್ಯ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ. ಆದರೆ, ಈ ಎಲ್ಲ ಬೆಳವಣಿಗೆಗಳಿಂದ ಕೊಡಗು (Kodagu) ಜಿಲ್ಲೆಗೆ ಪ್ರವಾಸ ಬರುವವರ (Kodagu Tourists) ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಕಾಶ್ಮೀರ ಪ್ರವಾಸಕ್ಕೆ ಪ್ಲಾನ್ ಮಾಡಿಕೊಂಡಿದ್ದ ಬೇರೆ ಬೇರೆ ರಾಜ್ಯಗಳ ಸಾವಿರಾರು ಪ್ರವಾಸಿಗರು ಇದೀಗ ಕೊಡಗಿನತ್ತ ಮುಖ ಮಾಡಿದ್ದಾರೆ. ಕಳೆದ 15 ದಿನಗಳಲ್ಲಿ ಜಿಲ್ಲೆಗೆ ಸುಮಾರು 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಹೆಚ್ಚುವರಿಯಾಗಿ ಆಗಮಿಸಿದ್ದಾರೆ.
ಒಂದೆಡೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಜನರು ಕೊಡಗಿಗೆ ಬರುವುದು ಹೆಚ್ಚಾಗಿದ್ದರೆ, ಮತ್ತೊಂದಡೆ ಉತ್ತರ ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯೂ ಆಗಿದೆ. ಭಾರತ ಹಾಗೂ ಪಾಕಿಸ್ತಾನ ಕದನಕ್ಕೂ ಮೊದಲು ಉತ್ತರ ಭಾರತದ ಸಹಸ್ರಾರು ಪ್ರವಾಸಿಗರು ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬುಕಿಂಗ್ ಮಾಡಿಕೊಡಿದ್ದರು. ಆದರೆ, ಉತ್ತರ ಭಾರತದ ಬಹುತೇಕ ವಿಮಾನ ನಿಲ್ದಾಣಗಳು ಬಂದ್ ಆಗಿದ್ದರಿಂದ ಬುಕಿಂಗ್ಗಳು ಕ್ಯಾನ್ಸಲ್ ಆಗಿವೆ. ಹಾಗಾಗಿ ಉತ್ತರ ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಮಾಲ್ಗಳಲ್ಲಿ ಕಟ್ಟೆಚ್ಚರ: ಸೆಕ್ಯೂರಿಟಿ ಚೆಕಿಂಗ್, ಭದ್ರತೆ ಹೆಚ್ಚಳ
ಸದ್ಯ ಎಲ್ಲಾ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯಲಾಗುತ್ತಿದ್ದು, ಕಾಶ್ಮಿರದಲ್ಲಿ ಪ್ರವಾಸೋದ್ಯಮ ಇನ್ನೂ ಶುರುವಾಗದೇ ಇರುವುದಿರಿಂದ ಈ ವಾರದಿಂದ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುವ ನಿರೀಕ್ಷೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ