
ಮಡಿಕೇರಿ, ಸೆಪ್ಟೆಂಬರ್ 06: ಮಡಿಕೇರಿ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆಗಳು, ಪೇಪರ್ ಕಪ್‌ಗಳು ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿ ನಗರಸಭೆ ಆದೇಶಿಸಿದೆ. ನಗರಸಭೆ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರ ಆದೇಶದಂತೆ ಪೇಪರ್ ಕಪ್‌ಗಳು, ಕಂಟೈನರ್‌ಗಳು, ಅಡಿಕೆ ತಟ್ಟೆಗಳು, ಕಾಲು, ಅರ್ಧ ಹಾಗೂ 1 ಲೀಟರ್ ಸಾಮರ್ಥ್ಯದ ನೀರಿನ ಬಾಟಲಿಗಳು ಮತ್ತು ಪೇಪರ್ ಪ್ಲೇಟ್‌ಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ವ್ಯಾಪಾರಿಗಳಿಗೆ ಆದೇಶದ ಪ್ರತಿಗಳನ್ನು ವಿತರಿಸಿ ಮಾಹಿತಿ ನೀಡಿದ್ದಾರೆ.
ಆದರೆ, ಅಡಿಕೆ ತಟ್ಟೆ, ಪೇಪರ್ ಪ್ಲೇಟ್‌ಗಳು ಹಾಗೂ ಕಪ್‌ಗಳ ಮೇಲೆ ನಿಷೇಧ ಹೇರಿರುವುದಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಣ್ಣಿನಲ್ಲಿ ಸುಲಭವಾಗಿ ಕೊಳೆಯುವ ಅಡಿಕೆ ಎಲೆಗಳಿಂದ ತಯಾರಿಸಿದ ತಟ್ಟೆಗಳು ಹಾಗೂ ಪೇಪರ್ ಕಪ್‌ಗಳನ್ನು ದೇವಾಲಯಗಳ ಜಾತ್ರೆ, ಸಾರ್ವಜನಿಕ ಮತ್ತು ಸರ್ಕಾರಿ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅವುಗಳನ್ನು ಬಳಕೆಯ ಬಳಿಕ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರದ ಆರೋಪ: ಮಾಕುಟ್ಟ ಚೆಕ್‌ಪೋಸ್ಟ್ ವಿಡಿಯೋ ವೈರಲ್
ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೇಕಲ್ ಮಾತನಾಡಿ, ಮಡಿಕೇರಿ ನಗರಸಭೆ ಆಡಳಿತವು ತನ್ನ ವ್ಯಾಪ್ತಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಮಡಿಕೇರಿಗೆ ಹೊರ ಪ್ರದೇಶಗಳಿಂದ ಬರುವ ಜನರು ಯಾವುದೇ ನಿರ್ಬಂಧವಿಲ್ಲದೆ ಈ ವಸ್ತುಗಳನ್ನು ಹೊರಗಿನಿಂದ ತಂದು ಬಳಸುವ ಸಾಧ್ಯತೆಯಿದೆ. ನಂತರ ಅವುಗಳನ್ನು ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮ ಆವರಣದೊಳಗೆ ಬಳಸಬಹುದು. ಇದನ್ನು ನಗರಸಭೆಯಿಂದ ತಡೆಯಲು ಸಾಧ್ಯವಾಗುವುದಿಲ್ಲ. ಜಿಲ್ಲಾ ಆಡಳಿತದೊಂದಿಗೆ ಸಮಾಲೋಚನೆ ನಡೆಸದೆ ನಗರಸಭೆ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇಂತಹ ನಿಷೇಧವನ್ನು ಇಡೀ ಜಿಲ್ಲೆಗೆ ಅನ್ವಯಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.