ಹಲವು ಜನರ ಪ್ರಾಣ ತೆಗೆದು ಪುಂಡಾಟ ಮೇರೆದಿದ್ದ ಆನೆಗಳು ಇದೀಗ ಸನ್ನಡತೆಯ ಪಾಠ ಕಲಿಯುತ್ತಿವೆ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ
ಕಾಡು ಬಿಟ್ಟು ನಾಡಿಗೆ ಬಂದು ಹಲವು ಜನರನ್ನ ಬಲಿ ಪಡೆದಿದ್ದ ಮೂರು ಆನೆಗಳನ್ನ ಬಂಧಿಸಿ ಕೊಡಗಿನ ಕುಶಾಲನಗರ ತಾಲೂಕಿನ ದುಬಾರೆಯಲ್ಲಿರುವ ಆನೆ ಶಿಬಿರಕ್ಕೆ ಸೇರಿಸಲಾಗಿದ್ದು, ಇದೀಗ ಸನ್ನಡತೆಯ ಪಾಠ ಮಾಡಲಾಗುತ್ತಿದೆ.
ಕೊಡಗು: ಕೆಲವು ದಿನಗಳ ಹಿಂದೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಪುಂಡಾಟ ನಡೆಸುತ್ತಿದ್ದ ಮೂರು ಆನೆಗಳನ್ನ ಇದೀಗ ಮರದ ಧಿಮ್ಮಿಗಳಿಂದ ನಿರ್ಮಾಣ ಮಾಡಲಾಗಿರುವ ಟ್ರಾಲಿಗಳೊಳಗೆ ಬಂಧಿಸಿ ಪಳಗಿಸಲಾಗುತ್ತಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಕ್ಷಣಾರ್ಧದಲ್ಲಿ ಹಾಳು ಮಾಡುತ್ತಿದ್ದೂ ಅಲ್ಲದೇ ಹಲವು ಜನರನ್ನ ತುಳಿದು ಸಾಯಿಸಿತ್ತು. ಪುಂಡಾನೆಗಳ ಕಾಟಕ್ಕೆ ಬೇಸತ್ತಿದ್ದ ಜನರಿಗೆ ಈಗ ನೆಮ್ಮದಿ ಸಿಕ್ಕಂತಾಗಿದೆ.
ಒಂದು ಕಾಡಾನೆಯನ್ನ ಮೈಸೂರಿನ ಬಿಳಿಕೆರೆಯಲ್ಲಿ ಸೆರೆಹಿಡಿಯಲಾಗಿತ್ತು. ಮತ್ತೊಂದನ್ನ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಸೆರೆಹಿಡಿಯಲಾಗಿದ್ದರೆ, ಮೂರನೆಯದನ್ನ ಕೊಡಗಿನ ಕರಡಿಗೋಡು ಗ್ರಾಮದಲ್ಲಿ ಹಿಡಿಯಲಾಗಿದ್ದು, ಇದೀಗ ಕೊಡಗಿನ ಕುಶಾಲನಗರ ತಾಲೂಕಿನ ದುಬಾರೆಯಲ್ಲಿರುವ ಆನೆ ಶಿಬಿರಕ್ಕೆ ತರಲಾಗಿದೆ. ಇಲ್ಲಿ ಈ ಕಾಡಾನೆಗಳನ್ನ ಇಕ್ಕಟ್ಟಾದ ಟ್ರಾಲಿಯೊಳಕ್ಕೆ ಹಾಕಿ ಪಳಗಿಸಲಾಗುತ್ತಿದೆ. ಇನ್ನು ಇದಕ್ಕೆ ತರಬೇತಿ ನೀಡಲು ಆನೆ ಪಳಗಿಸುವಲ್ಲಿ ಅಪಾರ ಅನುಭವವಿರುವ ಮಾವುತ ಚಂದ್ರ ಎನ್ನುವವರನ್ನ ನೇಮಿಸಲಾಗಿದೆ.
ಇನ್ನು 15 ದಿನಗಳ ಹಿಂದೆಯೇ ಇವುಗಳನ್ನು ಇಲ್ಲಿಗೆ ತರಲಾಗಿದ್ದು ಆರಂಭದಲ್ಲಿ ಇನ್ನಿಲ್ಲದ ನಕರಾ ಮಾಡುತ್ತಿದ್ದವಂತೆ. ಟ್ರಾಲಿಯನ್ನೇ ಗುದ್ದುವುದು, ಘೀಳಿಡುವುದು ಮಾಡುತ್ತಿದ್ದವು. ಹೇಳಿದ ಮಾತು ಕೇಳುತ್ತಿರಲಿಲ್ಲವಂತೆ. ಎಷ್ಟೇ ಹಠ ಕೋಪ ತಾಪ ಮಾಡಿದರು ಪ್ರಯೋಜನವಿಲ್ಲ. ಸಧ್ಯಕ್ಕಂತೂ ಈ ಜೈಲಿನಿಂದ ಇವುಗಳಿಗೆ ಬಿಡುಗಡೆಯ ಭಾಗ್ಯವಿಲ್ಲ. ಹಾಗಾಗಿ ನಿಧಾನವಾಗಿ ಇವುಗಳು ಸನ್ನಡತೆಯ ಪಾಠ ಕಲಿಯುತ್ತಿದ್ದು ಮಾವುತರ ಮಾತುಗಳನ್ನು ಕೇಳುತ್ತಿದೆ. ಆದರೆ ಅದರ ಮೇಲೆ ಹತ್ತಿ ಕುಳಿತು ಸವಾರಿ ಮಾಡುವಷ್ಟು ಇನ್ನು ಪಳಗಿಲ್ಲ. ಆರಂಭದಿಂದಲೇ ಇದರ ಜೊತೆಗಿರುವ ಮಾವುತ ಚಂದ್ರನನ್ನ ಬಿಟ್ಟರೆ ಇನ್ನಾರನ್ನೂ ಇದು ಹತ್ತಿರ ಸೇರಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: Hassan News: ಕಂದಕದಿಂದ ಕಾಡಾನೆ ಹೊರ ತೆಗೆಯಲು ಬಂದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರೈತರು
ಇವುಗಳನ್ನು ಸಂಪೂರ್ಣ ಪಳಗಿಸಲು ಇನ್ನೂ ಹಲವು ತಿಂಗಳು ಬೇಕಾಗಬಹುದು. ಸಂಪೂರ್ಣ ಪಳಗಿದ ಬಳಿಕ ಇವುಗಳು ಕೂಡ ದುಬಾರೆ ಸಾಕಾನೆ ಶಿಬಿರದ ಭಾಗವಾಗಿ, ಪ್ರವಾಸಿಗರ ಆಕರ್ಷಣೆಯಾಗಲಿವೆ. ಅಷ್ಟೇ ಅಲ್ಲದೇ ದಸರಾ ಉತ್ಸವದಲ್ಲೂ ಪಾಲ್ಗೊಳ್ಳಲಿವೆ.
ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ