Delhi Chalo | ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಕೋಡಿಹಳ್ಳಿ ಚಂದ್ರಶೇಖರ್
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ.
ತುಮಕೂರು: ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಕೇಂದ್ರ ಸರ್ಕಾರ ಮಾಡಿರುವ ತಪ್ಪನ್ನು ತಿದ್ದಿ ಬುದ್ಧಿ ಹೇಳಿದೆ. ಸಮಿತಿ ರಚಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಸೂಚಿಸಿದೆ. ಸುಪ್ರೀಂಕೋರ್ಟ್ ಮಾಡಿರುವ ನಿರ್ಧಾರ ಸರಿಯಾಗಿದೆ ಎಂದು ಇಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಈಗ ತಂದಿರುವ ಕಾನೂನು ಪ್ರಜಾಸತ್ತಾತ್ಮಕವಾಗಿಲ್ಲ. ಸರ್ಕಾರದ ಕಾನೂನನ್ನು ತಡೆಹಿಡಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಗ್ರೀವಾಜ್ಞೆ ಯಾವಾಗಲೂ ಪ್ರಜಾಸತ್ತಾತ್ಮಕವಲ್ಲ. ಯಾವುದೇ ಕಾನೂನು ತರುವುದಕ್ಕಿಂತ ಮುಂಚೆ ದೇಶದೊಳಗೆ ಅದನ್ನು ಚರ್ಚೆಗೆ ಒಳಪಡಿಸಬೇಕು. ವಿಧಾನಸಭೆ ಮತ್ತು ಸಂಸತ್ನಲ್ಲಿ ಚರ್ಚೆ ಬಳಿಕ ಅದು ಕಾನೂನು ಆಗಬೇಕು. ಇದೀಗ ಕೋರ್ಟ್, ರೈತರನ್ನು ಒಳಗೊಂಡ ಸಮಿತಿ ಮಾಡಿ, ಪರಿಹಾರ ಕಂಡುಕೊಳ್ಳಬೇಕು. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿದೆ. ಈ ಮೂಲಕ ಭಾರತ ಸರ್ಕಾರ ತಪ್ಪು ಮಾಡಿರುವುದನ್ನು ತಿದ್ದಿ ಬುದ್ಧಿ ಹೇಳಿದೆ ಎಂದು ವಿಶ್ಲೇಷಿಸಿದ್ದಾರೆ.
ಈ ಕಾರಣಕ್ಕೆ ಕೇಂದ್ರ ಸರ್ಕಾರ ತಕ್ಷಣ ಕಾರ್ಯೋನ್ಮುಖ ಆಗಬೇಕು. ಇಲ್ಲದಿದ್ದಲ್ಲಿ ದೇಶದ ರೈತರ ವಿರೋಧ ಕಟ್ಟಿಕೊಂಡು, ಆಡಳಿತ ತಪ್ಪು ದಾರಿಗೆ ಕೊಂಡೊಯ್ಯಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ಮಂದ ಧೋರಣೆ ಮುಂದುವರೆದರೆ, ಸುಪ್ರೀಂ ಕೋರ್ಟ್ ತನ್ನ ಆದೇಶ ಎತ್ತಿಹಿಡಿಯಬೇಕು. ಹಾಗೆಂದು ನಾವು, ನ್ಯಾಯಾಲಯವನ್ನು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ ಸಂದರ್ಶನ | ನಾನು ಸೂಟ್ಕೇಸ್ ಗಿರಾಕಿ ಅಲ್ಲ, ಹಾಗಾಗಿ ಪ್ರಭುತ್ವ ಹೆದರುತ್ತೆ
Published On - 7:25 pm, Mon, 11 January 21