ಕೋಲಾರ: ಮಳಿಗೆ ನೋಂದಣಿ ಮಾಡಿಸಲು ಲಂಚಕ್ಕೆ ಬೇಡಿಕೆ ಆರೋಪ: ಎಪಿಎಂಸಿ ಕಾರ್ಯದರ್ಶಿ ವಿಡಿಯೋ ವೈರಲ್
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ಲಂಚದ ಹಣ ಹಂಚಿಕೆ ಬಗ್ಗೆ ಪ್ರಸ್ತಾಪದ ವಿಡಿಯೋ ವೈರಲ್ ಆಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಳಿಗೆ ನೊಂದಣಿ ಮಾಡಿಸಲು ಲಂಚಕ್ಕೆ ಬೇಡಿಕೆ ಆರೋಪ ಮಾಡಲಾಗಿದೆ. ವರ್ತಕ ಸತೀಶ್ ಎಂಬುವರಿಂದ ಒಂದೂವರೆ ಲಕ್ಷ ರೂ. ಹಣಕ್ಕೆ ಬೇಡಿಕೆ ಇಡಲಾಗಿದೆ.
ಕೋಲಾರ, ಮೇ 19: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಾರ್ಯದರ್ಶಿ ಎನ್.ವಿಜಯಲಕ್ಷಿ ಅವರು ಲಂಚಕ್ಕೆ (bribe) ಬೇಡಿಕೆ ಇಟ್ಟಿರುವ ವಿಡಿಯೋ ಸಖತ್ ವೈರಲ್ ಆಗಿದೆ. ತರಕಾರಿ ದಲ್ಲಾಳಿಗಳ ಸಂಘದ ಮುಖಂಡರ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಎನ್ನಲಾಗಿದೆ. ಎಪಿಎಂಸಿಯಲ್ಲಿ ಮಳಿಗೆಯೊಂದನ್ನ ವರ್ತಕರ ಹೆಸರಿಗೆ ನೊಂದಣಿ ಮಾಡಿಸಲು ಸುಮಾರು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಇದು 12 ಟೇಬಲ್ ಬದಲಾಯಿಸಬೇಕು. ಇದರಲ್ಲಿ ನನಗೆ 100 ರೂ. ಸಹ ಸಿಗಲ್ಲ ಎಂದಿದ್ದಾರೆ. ಎಪಿಎಂಸಿ ಕಾರ್ಯದರ್ಶಿ ಕಚೇರಿಯಲ್ಲೆ ವರ್ತಕ ಸತೀಶ್ ಎಂಬುವವರಿಂದ ಹಣ ಬೇಡಿಕೆಯಿಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿಮ್ಮ ಕೆಲಸ ಆಗಬೇಕಾದರೆ 12 ಟೇಬಲ್ ಸಿಬ್ಬಂದಿ, ಅಧಿಕಾರಿಗಳಿಗೆ ಹಣ ನೀಡಬೇಕು ಎಂದು ವೈರಲ್ ಆದ ವಿಡಿಯೋದಲ್ಲಿ ಹೇಳಿದ್ದಾರೆ. ಕೋಲಾರದ ಎಪಿಎಂಸಿಯ ಕಾರ್ಯದರ್ಶಿ ಆಗಿರುವ ವಿಜಯಲಕ್ಷಿ ಅವರು ಪ್ರತಿ ಹಂತದಲ್ಲೂ ದಲ್ಲಾಳಿಗಳಿಗೆ ತೊಂದರೆಯನ್ನು ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಅವರ ವಿರುದ್ದ ವರ್ತಕರು ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: ಚಿಕಿತ್ಸೆಗೆ ತಕ್ಕಂತೆ ಲಂಚ ಫಿಕ್ಸ್! ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ
ಅಲ್ಲದೇ ಎಪಿಎಂಸಿಗೆ ಬರುವ ತರಕಾರಿಗೆ ಒಂದಿಷ್ಟು ಹಣ ನೀಡುವಂತೆ ಫಿಕ್ಸ್ ಮಾಡಿದ್ದು, ವರ್ತಕರು, ದಲ್ಲಾಳಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ.
ಹಾಡು ಹಗಲೇ ಬ್ಯಾಂಕ್‌ನಿಂದ 2.20 ಲಕ್ಷ ರೂ. ಡ್ರಾ: ಕದ್ದು ಪರಾರಿ
ವಿಜಯಪುರ: ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಹಾಡು ಹಗಲೇ ಬ್ಯಾಂಕ್‌ನಿಂದ 2.20 ಲಕ್ಷ ರೂ. ಡ್ರಾ ಮಾಡಿದ್ದ ವ್ಯಕ್ತಿಯಿಂದ ಹಣ ಕಿತ್ತುಕೊಂಡು ಪರಾರಿಯಾದ ಘಟನೆ ಜರುಗಿದೆ. ನಿವೃತ್ತ ನೌಕರ ನಾಗಪ್ಪ ಅಮರಪ್ಪ ಕೆಂಭಾವಿ ಎಂಬುವವರೇ ಹಣ ಕಳೆದುಕೊಂಡವರು. ತಾಳಿಕೋಟಿ ಪಟ್ಟಣದಲ್ಲಿರುವ ಯುನಿಯನ್ ಬ್ಯಾಂಕ್‌ನ ಖಾತೆಯಲ್ಲಿ ಜಮೆ ಇದ್ದ ಹಣದಲ್ಲಿ 2.20 ಲಕ್ಷ ರೂ. ಹಣವನ್ನು ನಿನ್ನೆ ಬೆಳಿಗ್ಗೆ 11-40 ರ ಸುಮಾರಿಗೆ ಬ್ಯಾಂಕ್‌ನಿಂದ ಡ್ರಾ ಮಾಡಿದ್ದರು.
ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಒಂದೇ ದಿನ ಐದು ಶವ ಪತ್ತೆ!
ನಾಗಪ್ಪ ಅವರು ಬ್ಯಾಂಕ್‌ಗೆ ಬರುವಾಗಲೇ ಹಿಂಬಾಲಿಸಿ ಬಂದಿದ್ದ ಖದೀಮರು, ಡ್ರಾ ಮಾಡಿದ ಹಣವನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲಿನ ಕವರನಲ್ಲಿ ಇರಿಸಿಕೊಂಡು ಹೊರಟಿದ್ದರು. ಈ ವೇಳೆ ಹಿಂದಿನಿಂದ ಬೈಕ್ ಮೇಲೆ ಬಂದ ಸುಮಾರು 30-35 ವಯೋಮಾನದ ಓರ್ವ ಆಗಂತುಕ ಯುವಕ, ನಾಗಪ್ಪ ಅವರಿಗೆ ಊರಿಗೆ ಹೋಗುವ ದಾರಿ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾನೆ.
ಮಾಹಿತಿ ನೀಡಲು ನಾಗಪ್ಪ ಬೈಕ್ ನಿಲ್ಲಿಸುತ್ತಲೇ ಮತ್ತೊಬ್ಬ ಹಣ ಕಿತ್ತುಕೊಂಡು ಪರಾರಿಯಾಗಿದ್ದಾನೆ. ನಾಗಪ್ಪ ಬೈಕ್ ಬೆನ್ನಟ್ಟಿದರೂ ಆಗಂತಕ ಖದೀಮರು ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಲೇ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕದೀಮರ ಪತ್ತೆಗೆ ಪೊಲೀಸರು ಜಾಲ ಬೀಸಿದ್ಧಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:29 pm, Sun, 19 May 24