ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ
ಕೆಜಿಎಫ್‌ನಲ್ಲಿ ಬೃಹತ್ ಕಲಬೆರಕೆ ಹಾಲು ದಂಧೆ ಭೇದಿಸಿದ್ದು, ಪಾಮ್ ಆಯಿಲ್ ಮತ್ತು ಹಾಲಿನ ಪುಡಿ ಬಳಸಿ ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್ ಕಂಪನಿಗಳ ನಕಲಿ ಹಾಲು ತಯಾರಿಸುತ್ತಿದ್ದ 8 ಮಂದಿ ಆಂಧ್ರ ಮೂಲದವರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಕಲಬೆರಕೆ ಸಾಮಗ್ರಿ ಹಾಗೂ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.

ಕೋಲಾರ, ಜನವರಿ 16: ಹಲವು ಬ್ರ್ಯಾಂಡ್ ಕಂಪನಿಗಳ ಕಲಬೆರಕೆ ಹಾಲನ್ನು (Fake Milk) ತಯಾರಿಸುತ್ತಿದ್ದ 8 ಜನರನ್ನು ಕೆಜಿಎಫ್ (KGF) ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿ, ಕಲಬೆರಕೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಮೂಲದ ವೆಂಕಟೇಶಪ್ಪ (50), ಬಾಲಾಜಿ (35), ದಿಲೀಪ್ (25), ಬಾಲರಾಜ್ (33), ಮನೋಹರ್ (28), ಕಾರ್ತಿಕ್ (29), ಮನೋಜ್ (22) ಮತ್ತು ಮಂಜುನಾಥ್ (55) ಬಂಧಿತ ಆರೋಪಿಗಳು.
ನಕಲಿ ಹಾಲು ತಯಾರಿಕೆ ಅಡ್ಡೆ ಮೇಲೆ ದಾಳಿ
ಕೆಜಿಎಫ್ ನಗರದ ಬಳ್ಳಗೆರೆ ಹೊರವಲಯದ ಗ್ರಾಮದ ತೋಟದ ಮನೆಯಲ್ಲಿ ಪಾಮ್ ಆಯಿಲ್ ಹಾಗೂ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಅಕ್ರಮವಾಗಿ ನಕಲಿ ಹಾಲು ತಯಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಅಂಡರ್‌ಸನ್ ಪೇಟೆ ಪೊಲೀಸರು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮಧುಗಿರಿ: ಕಲಬೆರಕೆ ಸೇಂದಿ ಸೇವಿಸಿ ಕರ್ನಾಟಕ, ಆಂಧ್ರ ಪ್ರದೇಶದ 15 ಮಂದಿ ಅಸ್ವಸ್ಥ
ಒಂದು ಲೀಟರ್ ಮಿಶ್ರಣದಿಂದ 20 ಲೀಟರ್ ಹಾಲು ತಯಾರು ಮಾಡಲಾಗುತ್ತಿತ್ತು. ಹೀಗೆ ತಯಾರು ಮಾಡಿದ ಹಾಲನ್ನು ಬೇತಮಂಗಲ ಸೇರಿದಂತೆ ಇತರೆ ಪ್ರದೇಶದ ಡೈರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು ನಂದಿನಿ ಸೇರಿದಂತೆ ವಿವಿಧ ಬ್ರ್ಯಾಂಡ್ ಹೆಸರಲ್ಲಿ ಕಲಬೆರಕೆ ಹಾಲನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಇನ್ನು ದಾಳಿ ವೇಳೆ 500 ಗ್ರಾಂ ನಂದಿನ ಹಾಲಿನ ಪುಡಿಯ 350 ಪಾಕೆಟ್, ಒಂದು ಕೆಜಿ ತೂಕದ 40 ಪಾಕೆಟ್, ಮಿಲೆಟ್ ಮಿಲ್ಕ್ ಲಡ್ಡು 12 ಪಾಕೆಟ್, 500 ಗ್ರಾಂ ಸಾಮರ್ಥ್ಯದ 7 ಬೆಲ್ಲದ ಪಾಕೆಟ್, 900 ಪಾಕೆಟ್ ಪಾಮ್ ಆಯಿಲ್, ಎರಡು ಮಿಕ್ಸಿ, 38 ಲೀಟರ್ ಸಾಮರ್ಥ್ಯದ 51 ಹಾಲಿನ ಕ್ಯಾನ್, ಹಾಲು ಸರಬರಾಜು ಮಾಡುತ್ತಿದ್ದ ಎರಡು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ
ನಂದಿನಿ ಸಂಸ್ಥೆ ಹೊರಗಡೆ ಮಾರಾಟ ಮಾಡದ ಹಾಲಿನ ಪೌಡರ್ ಹಾಗೂ ಅಂಗನವಾಡಿ ಕೇಂದ್ರಕ್ಕೆ ನೀಡಲಾಗುವ ಪೌಷ್ಠಿಕ ಆಹಾರದ ಪಾಕೆಟ್‌ಗಳು ಆರೋಪಿಗಳ ಬಳಿಗೆ ಹೇಗೆ ಬಂದವು, ಇದರಲ್ಲಿ ಯಾರಾದರೂ ಸರ್ಕಾರಿ ನೌಕರರು ಶಾಮಿಲಾಗಿದ್ದಾರೆಯೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಹೇಳಿದ್ದಾರೆ. ಇನ್ನು ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಪಿಎಂ ನವೀನ್, ಮಾರ್ಕೊಂಡಯ್ಯ ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
