
ಕೋಲಾರ, (ಮೇ 05): ಸುಮಾರು 126 ವರ್ಷಗಳ ಹಳೆಯ ಶಾಲೆ (126 year oldest School). ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಪುರಾತನ ಶಾಲೆ ಇದು. ಚಿನ್ನದ ಗಣಿ ನಡೆಯುತ್ತಿದ್ದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಹಾಗೂ ಕಾರ್ಮಿಕರ ಮಕ್ಕಳು ಓದುತ್ತಿದ್ದ ಶಾಲೆ. ಅಷ್ಟೇ ಅಲ್ಲ ಕರ್ನಾಟಕದ ಪ್ರಥಮ ಇಂಗ್ಲೀಷ್ ಶಾಲೆ ಎನ್ನುವ ಹೆಗ್ಗಳಿಕೆ ಸಹ ಈ ಶಾಲೆಗಿದೆ. ಇಂತಹ ಇತಿಹಾಸವುಳ್ಳ ಕೋಲಾರ ಜಿಲ್ಲೆ ಕೆಜಿಎಫ್ನ ಬಿಜಿಎಂಎಲ್ ಫ್ರೌಡಶಾಲೆಯಲ್ಲಿ (Kolar BGML School )ಓದಿದವರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಆದ್ರೆ, ದುರದೃಷ್ಟವಶಾತ್ ಎಂಬಂತೆ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Result 2025) ಈ ಶಾಲೆ ಕಳಪೆ ಪ್ರದರ್ಶನ ತೋರಿದೆ. ಹೌದು..ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಈ ಶಾಲೆಯ ಒಟ್ಟು 38 ಕ್ಕೆ 38 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಈ ಮೂಲಕ ಮೊನ್ನೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಶತಮಾನದ ಶಾಲೆ ಶೂನ್ಯ ಸಾಧನೆ ಮಾಡಿದೆ.
ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಸಾಧನೆ ಮಾಡುವ ಮೂಲಕ ಸುದ್ದಿಯಲ್ಲಿದೆ. ಬಿಜಿಎಂಎಲ್ ಶಾಲೆಯಲ್ಲಿ 38 ಜನ ವಿದ್ಯಾರ್ಥಿಗಳು ಅಂದರೆ 24 ಜನ ಬಾಲಕರು ಹಾಗೂ 14 ಜನ ಬಾಲಕಿಯರು ಪರೀಕ್ಷೆ ಬರೆದಿದ್ದು, ಯಾರೊಬ್ಬರೂ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಇದರಿಂದ ಐತಿಹಾಸಿಕ ಹಿನ್ನೆಲೆ ಹೊಂದಿದ್ದ ಈ ಶಾಲೆಯು ಜಿಲ್ಲೆಯಲ್ಲಿ ತನ್ನ ಶೂನ್ಯ ಸಾಧನೆಯಿಂದ ಗಮನ ಸೆಳೆದಿದೆ.
ಇನ್ನು ಈಬಗ್ಗೆ ಮಾತನಾಡಿರುವ ಶಾಲಾ ಪ್ರಾಂಶುಪಾಲರು, ಇಲ್ಲಿನ ಮಕ್ಕಳು ಎಲ್ಲರೂ ತಮಿಳು ಭಾಷಿಕರಿದ್ದು ಇವರಿಗೆ ಭಾಷೆ ಸಮಸ್ಯೆ ಜೊತೆಗೆ ಶಾಲೆಯಲ್ಲಿ ಬೋಧಕ ಸಿಬ್ಬಂದಿ ಕೊರತೆ ಇದೆ. ಜೊತೆಗೆ ಕೆಲವು ಆಡಳಿತಾತ್ಮಕ ಕಾರಣಗಳಿಂದ ಫಲಿತಾಂಶ ಕುಸಿದಿದೆ ಎಂದು ಶೂನ್ಯ ಫಲಿತಾಂಶಕ್ಕೆ ಕಾರಣ ನೀಡಿದ್ದಾರೆ.
Kolar Bgml School (2)
ಬಿಜಿಎಂಎಲ್ ಫ್ರೌಢಶಾಲೆ ಅಂದರೆ ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಶಾಲೆ ಇದನ್ನು ಬ್ರಿಟಿಷರು ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಹಾಗೂ ಇಲ್ಲಿನ ಕಾರ್ಮಿಕರ ಮಕ್ಕಳಿಗಾಗಿ ಈ ಶಾಲೆಯನ್ನು 1899 ರಲ್ಲಿ ತೆರೆದಿದ್ದರು. ಕರ್ನಾಟಕ ರಾಜ್ಯದ ಮೊದಲ ಇಂಗ್ಲೀಷ್ ಶಾಲೆ ಅನ್ನೋ ಹೆಗ್ಗಳಿಕೆ ಕೂಡಾ ಈ ಶಾಲೆಗಿದೆ. ಈ ಶಾಲೆಯನ್ನು ಆಂಗ್ಲೋ ಆಫ್ರಿಕನ್ ಶಾಲೆ ಎಂದು ಕರೆಯಲಾಗುತ್ತಿತ್ತು. ಈ ಶಾಲೆಯಲ್ಲಿ ಬ್ರಿಟಿಷರ ಮಕ್ಕಳು ಬರೆದ ಪರೀಕ್ಷೆ ಮೌಲ್ಯಮಾಪನವನ್ನು ಇಂಗ್ಲೆಂಡ್ನಲ್ಲಿ ಮಾಡಲಾಗುತ್ತಿತ್ತಂತೆ. ಅಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಾಲೆ ಸದ್ಯ ಈಗ ಮತ್ತೆ ತಮ್ಮ ಅಸಹಾಯಕತೆಯಿಂದ ಶೂನ್ಯ ಫಲಿತಾಶಂದ ಮೂಲಕ ಸದ್ದು ಮಾಡುತ್ತಿದೆ.
ಇನ್ನು ಕೆಜಿಎಫ್ ಚಿನ್ನದ ಗಣಿ ನಡೆಯುತ್ತಿದ್ದ ಕಾಲದಲ್ಲಿ ಈ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ಸಿಗುತ್ತಿತ್ತು. ಶಾಲೆಗೂ ಸಾವಿರಾರು ಮಕ್ಕಳು ದಾಖಲಾಗಿ ಇಲ್ಲಿ ಉನ್ನತ ಮಟ್ಟದ ವಿದ್ಯಾಬ್ಯಾಸ ಪಡೆಯುತ್ತಿದ್ದರು. ಆದರೆ ಈ ಶಾಲೆ 2001 ರಲ್ಲಿ ಕೆಜಿಎಫ್ ಚಿನ್ನದ ಗಣಿಗೆ ಬೀಗ ಹಾಕಿದ ನಂತರ ಈ ಶಾಲೆ ನಿರ್ವಹಣೆ ಇಲ್ಲದೆ ಮಂಕಾಗುತ್ತಾ ಬಂದಿದೆ. ಕಳೆದ 25 ವರ್ಷಗಳಿಂದ ಚಿನ್ನದ ಗಣಿ ಮುಚ್ಚಿದ ನಂತರ ಈ ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಾ ಬಂದಿದೆ, ಇನ್ನು ಇಲ್ಲಿನ ಕಾರ್ಮಿಕರ ಮಕ್ಕಳ ಹಿತದೃಷ್ಟಿಯಿಂದ ಈ ಶಾಲೆಯನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಅನ್ನೋ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಬಿಜಿಎಂಎಲ್ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿದೆ. ಆದರೂ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅಧೀನಕ್ಕೆ ಪಡೆಯದೆ ಹಿಂದೇಟು ಹಾಕುತ್ತಲೇ ಇದೆ.
ಸದ್ಯ ಈ ಶಾಲೆಯನ್ನು ಸರ್ಕಾರಿ ಅನುಧಾನಿತ ಶಾಲೆ ಎಂದು ಪರಿಗಣಿಸಿದ್ದು, ಮಕ್ಕಳ ಹಿತದೃಷ್ಟಿಯಿಂದ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಕರೆಸಿ ಮಕ್ಕಳಿಗೆ ಪಾಠ ಹೇಳಿಸುವ ಕೆಲಸ ನಡೆಯುತ್ತಿದೆ. ಇನ್ನು ಶಾಲೆಯಲ್ಲಿ ವಿಜ್ಞಾನ ಹಾಗೂ ಹಿಂದೆ ವಿಷಯಕ್ಕೆ ಬೋಧಕರಿಲ್ಲ, ಶಿಕ್ಷಕರ ಸಮಸ್ಯೆ ಒಂದೆಡೆ ಆದರೆ ಆಡಳಿತಾತ್ಮಕವಾಗಿ ಸಾಕಷ್ಟು ಸಮಸ್ಯೆ ಇದೆ. ಇಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಾಲೆಯನ್ನು ಕೆಲವರು ಶಾಲೆಯನ್ನು ಅಭಿವೃದ್ದಿ ಮಾಡುತ್ತೇವೆಂದು ಹೇಳಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಈ ಐದು ಎಕರೆ ಪ್ರದೇಶವನ್ನು ಕಬಳಿಕೆ ಮಾಡುವ ಪ್ರಯತ್ನ ಕೂಡಾ ನಡೆಸುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಈ ಐತಿಹಾಸಿಕ ಶಾಲೆಗೆ ಮರು ಜೀವ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಹೀಗಾಗಿ ಈ ಶಾಲೆಯನ್ನು ತಮ್ಮ ಅಧೀನಕ್ಕೆ ಪಡೆದುಕೊಂಡು ಬೋಧಕ ಸಿಬ್ಬಂದಿ, ಆಡಳಿತಾತ್ಮಕ ಸಮಸ್ಯೆ ಬಗೆಹರಿಸಬೇಕಿದೆ. ಮಂಕಾಗಿರುವ ಚಿನ್ನದ ಇತಿಹಾಸ ಹೊಂದಿರುವ ಶಾಲೆ ಮತ್ತೆ ಪ್ರಜ್ವಲಿಸಬೇಕಿದೆ.
Published On - 7:55 pm, Mon, 5 May 25