ಯುದ್ದಗಳಲ್ಲಿ ಹೋರಾಡಿ ಮಡಿದ ವೀರ ಯೋಧರ ನೆನಪಿನಲ್ಲಿ ನಿರ್ಮಾಣವಾಗುತ್ತಿರುವ ಅಪರೂಪದ ಪಾರ್ಕ್; ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ
ಯುದ್ದಗಳಲ್ಲಿ ಹೋರಾಡಿ ಮಡಿದ ವೀರ ಯೋಧರ ನೆನಪಿನಲ್ಲಿ ಇಲ್ಲೊಂದು ಪಾರ್ಕ್ ನಿರ್ಮಾಣವಾಗುತ್ತಿದೆ. ಈ ಪಾರ್ಕ್ನಲ್ಲಿ ಕಂಡು ಬರುವ ಹತ್ತಾರು ಬಗೆಯ ವೀರಗಲ್ಲುಗಳು ಹಲವು ಸಂಸ್ಥಾನಗಳ ಹಾಗೂ ರಾಜ ಮನೆತನಗಳ ಇತಿಹಾಸ ನೆನಪಿಸುತ್ತವೆ. ಇಂತಹ ಇತಿಹಾಸ ಹೊಂದಿರುವ ಈ ವೀರಗಲ್ಲುಗಳನ್ನು ಸಂರಕ್ಷಿಸು ಕಾರ್ಯ ಕೋಲಾರದಲ್ಲಿ ನಡೆಯುತ್ತಿದೆ.
ಕೋಲಾರ: ಜಿಲ್ಲೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ, ಇಲ್ಲಿ ಚೋಳರು, ಗಂಗರು, ಚಾಲುಕ್ಯರು ಹೀಗೆ ಹಲವು ರಾಜಮನೆತನಗಳು ಆಳಿರುವ ನೂರಾರು ಕುರುಹುಗಳು ಕೋಲಾರದಲ್ಲಿ ಸಿಗುತ್ತವೆ. ಇಂಥ ಇತಿಹಾಸ ಹೊಂದಿರುವ ಜಿಲ್ಲೆಯಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲಾ ಪಂಚಾಯತಿ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಅದು ಕೋಲಾರ ಜಿಲ್ಲೆಯಲ್ಲಿರುವ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುವ ನೂರಾರು ವೀರಗಲ್ಲುಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ಒಂದೆಡೆ ಸುರಕ್ಷಿತವಾಗಿ ಇಡುವ ಮೂಲಕ ಆ ವೀರಗಲ್ಲುಗಳ ಇತಿಹಾಸವನ್ನು ಮುಂದಿನ ತಲೆ ತಲೆಮಾರಿಗೆ ತಿಳಿಸುವ ಪ್ರಯತ್ನವೊಂದು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪಂಚಾಯತಿ ಸಿಇಓ ಯುಕೇಶ್ ಕುಮಾರ್ ಜಿಲ್ಲೆಯಲ್ಲಿ ಹಲವೆಡೆ ವೀರಗಲ್ಲು ಪಾರ್ಕ್ ನಿರ್ಮಾಣ ಮಾಡಿ ಜಿಲ್ಲೆಯ ಹಲವು ಭಾಗಗಳಲ್ಲಿ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿದ್ದ ವೀರಗಲ್ಲುಗಳನ್ನು ಸುರಕ್ಷಿತವಾಗಿ ಒಂದೆಡೆ ಸಂರಕ್ಷಿಸಿ ಅದನ್ನು ಒಂದೊಳ್ಳೆ ಮಾಹಿತಿ ಕೇಂದ್ರವನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ.
ಸದ್ಯಕ್ಕೆ ಕೋಲಾರ ತಾಲೂಕಿನ ಅರಾಭಿಕೊತ್ತನೂರು, ಮಾಲೂರು ತಾಲೂಕಿನ ದೊಡ್ಡಶಿವಾರ, ಬಂಗಾರಪೇಟೆ ತಾಲೂಕಿನ ಹುನುಕುಂದ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಇಂತಹದೊಂದು ವೀರಗಲ್ಲು ಪಾರ್ಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರಲ್ಲೂ ಕೇವಲ ವೀರಗಲ್ಲುಗಳಷ್ಟೇ ಅಲ್ಲದೆ ಅಲ್ಲಿನ ಆ ಗ್ರಾಮಗಳ ಸುತ್ತಮುತ್ತ ಸಿಗುವ ಇತಿಹಾಸವನ್ನು ನೆನಪಿಸುವ ಶಿಲಾ ಶಾಸನಗಳನ್ನು ಹಾಗೂ ಕೆಲವೊಂದು ಇತಿಹಾಸ ಹೇಳುವ ಕುರುಹುಗಳು ಎಲ್ಲವನ್ನೂ ಪಾರ್ಕ್ನಲ್ಲಿ ಸುರಕ್ಷಿತವಾಗಿ ಒಂದೇ ಸೂರಿನಡಿಯಲ್ಲಿ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ.
ಈ ಪಾರ್ಕ್ ವಿದ್ಯಾರ್ಥಿಗಳಿಗೆ ಭೋದನಾ ಕೇಂದ್ರವನ್ನಾಗಿ ಮಾಡುವ ಸ್ಥಳವಾಗಿ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ಇಂಥಾದೊಂದು ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ತಾಲ್ಲೂಕುಗಳಲ್ಲಿ ವೀರಗಲ್ಲು ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲೇ ಮೊದಲ ಬಾರಿಗೆ ಸಾವಿರಾರು ವರ್ಷಗಳ ಇತಿಹಾಸ ಹೇಳುವ ವೀರಗಲ್ಲುಗಳನ್ನು ಸಂರಕ್ಷಿಸುವ ಮೂಲಕ ಅವುಗಳ ಇತಿಹಾಸವನ್ನು ಮುಂದಿನ ತಲೆ ಮಾರುಗಳಿಗೆ ತಿಳಿಸುವ ಒಂದು ಬೋಧನಾ ಕೇಂದ್ರವನ್ನಾಗಿ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ವಿಭಿನ್ನ ಹಾಗೂ ಅಪರೂಪ ಎನ್ನುವುದರಲ್ಲಿ ಎರಡು ಮಾತಿಲ್ಲ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Wed, 1 March 23