AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸುತ್ತಿದ್ದ ಯುವತಿಯೊಂದಿಗೆ ವಿವಾಹ: ಮದ್ವೆಯಾದ ರಾತ್ರಿಯೇ ನವವಿವಾಹಿತ ದುರಂತ ಸಾವು

ಸದ್ಯಕ್ಕೆ ಮದುವೆ ಬೇಡ ಎನ್ನುತ್ತಿದ್ದ ಆ ಹುಡುಗನಿಗೆ ನಿನ್ನೆಯಷ್ಟೇ (ಜುಲೈ 02) ಪ್ರೀತಿಸಿದ್ದ ಹುಡುಗಿಯ ಸಂಬಂಧಿಕರ ಮುಂದಾಳತ್ವದಲ್ಲಿ ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಲಾಗಿದೆ. ಮನೆ ಕಟ್ಟಿ ಮದುವೆಯಾಗುತ್ತೇನೆ ಎನ್ನುತ್ತಿದ್ದವನಿಗೆ ಏಕಾಏಕಿ ಮದುವೆ ಮಾಡಿದ್ದಾರೆ. ಆದ್ರೆ, ಮದುವೆಯಾದ ರಾತ್ರಿಯೇ ಯುವಕ ದುರಂತ ಸಾವು ಕಂಡಿದ್ದಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರೀತಿಸುತ್ತಿದ್ದ ಯುವತಿಯೊಂದಿಗೆ ವಿವಾಹ: ಮದ್ವೆಯಾದ ರಾತ್ರಿಯೇ ನವವಿವಾಹಿತ ದುರಂತ ಸಾವು
Harish Babu
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ರಮೇಶ್ ಬಿ. ಜವಳಗೇರಾ|

Updated on:Jul 03, 2025 | 4:36 PM

Share

ಕೋಲಾರ, (ಜುಲೈ 03): ಮದುವೆಯಾದ (marriage ) ರಾತ್ರಿಯೇ ನವವಿವಾಹಿತ ಯುವಕನೋರ್ವ ದುರಂತ ಸಾವು ಕಂಡಿದ್ದಾನೆ. ನಿನ್ನೆ(ಜುಲೈ 02) ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಹರೀಶ್​ ಬಾಬು ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಕೋಲಾರ (Kolar) ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು, ನಿನ್ನೆ ರಾತ್ರಿಯೇ ಜಿಲ್ಲಾಸ್ಪತ್ರೆಯ ಇ.ಎನ್​.ಟಿ ವಿಭಾಗದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆ ಕಟ್ಟಿ ಬಳಿಕ ಪ್ರೀತಿಸಿದ ಹುಡುಗಿಯೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಸುಂದರ ಜೀವನ ಕಟ್ಟಿಕೊಳ್ಳಬೇಕೆಂದು ಕನಸು ಕಂಡಿದ್ದ. ಆದ್ರೆ, ಏಕಾಏಕಿ ಮದುವೆ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ.

ಜಿಲ್ಲಾಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಕೋಲಾರದ ಗಾಂಧಿನಗರ ಮೂಲದ ಯುವತಿ ಯುವತಿ ಹಾಗೂ ಹರೀಶ್ ಬಾಬು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೂ ಗೊತ್ತಿತ್ತು. ಆದ್ರೆ, ಮನೆ ಕಟ್ಟಿ ಬಳಿಕ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ. ಆದ್ರೆ, ಅದೇನಾಯ್ತೋ ಏನೋ ಏಕಾಏಕಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಲಾಗಿದೆ. ಆದ್ರೆ, ಮದುವೆಯಾದ ರಾತ್ರಿಯೇ ಹರೀಶ್ ಬಾಬು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಬೀದರ್: ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ರಾತ್ರಿ ವೇಳೆ ಜಿಲ್ಲಾಸ್ಪತ್ರೆಯಲ್ಲಿನ ಇ.ಎನ್​.ಟಿ ವಿಭಾಗದ ಕೊಠಡಿಯೊಂದಕ್ಕೆ ಆಗಮಿಸಿ ಮದ್ಯ ಸೇವಿಸಿದ್ದಾನೆ. ನಂತರ ಅಲ್ಲೇ ಆಸ್ಪತ್ರೆಯಲ್ಲಿದ್ದ ಬ್ಯಾಂಡೇಜ್​ ಬಟ್ಟೆಯಿಂದ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡಿದ್ದಾನೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದ ಸುರೇಶ್​ ಬಾಬು ಕಳೆದ ರಾತ್ರಿ ಆಸ್ಪತ್ರೆಗೆ ಬಂದು ಸಾವಿಗೆ ಶರಣಾಗಿದ್ದಾನೆ. ಇನ್ನು ಸಾವಿಗೂ ಮುನ್ನ ಮದ್ಯ ಸೇವಿಸಿ ತನ್ನ ಬಳಿ ಇದ್ದ ಮೊಬೈಲ್​ ಪೋನ್ ಸಿಮ್​ ಕಾರ್ಡ್​ ಮುರಿದು ಹಾಕಿದ್ದಾನೆ.

ಇನ್ನು ಇಂದು (ಜುಲೈ 03) ಬೆಳಿಗ್ಗೆ ಎಂದಿನಂತೆ ಜಿಲ್ಲಾಸ್ಪತ್​ರೆಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಹರಿಶ್​ ಬಾಬು ನೇಣಿಗೆ ಶರಣಾಗಿರುವುದು ಬೆಳಕಿಗದೆ ಬಂದಿದೆ. ಸದ್ಯ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಕೋಲಾರ ನಗರ ಠಾಣೆಗೆ ದೂರು ನೀಡಿದ್ದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಲವಂತ ಮದ್ವೆಯಿಂದಲೇ ಆತ್ಮಹತ್ಯೆ?

ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್​ ಬಾಬು ಒಳ್ಳೆಯ ಕೆಲಸಗಾರ ಜೊತೆಗೆ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ. ಹೀಗೆ ಕೆಲವು ವರ್ಷಗಳಿಂದ ಅದೇ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಯುವತಿ ಹಾಗೂ ಹರೀಶ್​ ಬಾಬು ನಡುವೆ ಪ್ರೇಮಾಂಕುರವಾಗಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗಿರುವಾಗಲೇ ಕೆಲವು ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ಸ್ವಲ್ಪ ಬಿರುಕು ಮೂಡಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಯುವತಿ, ಹರೀಶ್​ ಬಾಬು ಎಲ್ಲಿ ನನ್ನನ್ನು ಬಿಟ್ಟುಬಿಡುತ್ತಾನೋ ಅನ್ನೋ ಕಾರಣಕ್ಕೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾಳೆ. ಇದಕ್ಕೆ ಹರೀಶ್​ ಬಾಬು ಸದ್ಯಕ್ಕೆ ಮದುವೆ ಬೇಡ ಆಷಾಡ ಮಾಸ ಮುಗಿಯಲಿ ಜೊತೆಗೆ ತಾನು ಊರಿನಲ್ಲಿ ಮನೆ ಕಟ್ಟಿಸುತ್ತಿದ್ದು ಮನೆ ಕಟ್ಟಿದ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ.

ಆದರೆ ಇದಕ್ಕೆ ಒಪ್ಪದ ಯುವತಿ, ಹರೀಶ್​ ಬಾಬು ಅವರ ಮನೆಗೆ ಹೋಗಿ ಮದುವೆಗಾಗಿ ಆತನ ತಂದೆ ತಾಯಿಯನ್ನು ಮನವೊಲಿಸಿದ್ದಾಳೆ. ಈ ನಡುವೆ ಹರೀಶ್​ ಬಾಬು ಕುಟುಂಬಸ್ಥರು ಬಲವಂತವಾಗಿಯೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಆದ್ರೆ, ಈಗಿಂದೀಗಲೇ ಮದುವೆ ಬೇಡ. ಆಷಾಡ ಮಾಸ ಮುಗಿಯಲಿ ಎಂದರೂ ಕೇಳದೆ ನಿನ್ನೆ ಯುವತಿ ಸಂಬಂಧಿಕರು ಸೇರಿ ಕೋಲಾರ ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಹರೀಶ್ ಬಾಬು ಜೊತೆ ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ. ಈ ವೇಳೆ ಹರೀಶ್​ ಬಾಬು ತಾಯಿ ಕೂಡಾ ಬಂದಿದ್ದರು. ಮದುವೆ ಮುಗಿದ ನಂತರ ಎಲ್ಲರೂ ಮನೆಗೆ ವಾಪಸ್​ ಹೋಗಿದ್ದಾರೆ. ಅತ್ತ ಹರೀಶ್​ ಬಾಬು ತನ್ನ ತಾಯಿಯನ್ನು ಊರಿಗೆ ಬಿಟ್ಟು ವಾಪಸ್​ ಕೋಲಾರಕ್ಕೆ ಬಂದಿದ್ದ.

ನಂತರ ರಾತ್ರಿ ಸುಮಾರು ಹನ್ನೊಂದು ಗಂಟೆ ಸುಮಾರಿಗೆ ಮದ್ಯದ ಬಾಟಲಿಯೊಂದಿಗೆ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದವನೇ ಮದ್ಯ ಸೇವಿಸಿ ನಂತರ ಅಲ್ಲೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಹರೀಶ್ ಬಾಬು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇದ್ದ ಒಬ್ಬೇ ಒಬ್ಬ ತನ್ನ ಮಗನ ಮಗನ ಸಾವಿಗೆ ಬದಲವಂತದ ಮದುವೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗಬೇಕು ಎಂದುಕೊಂಡಿದ್ದವನಿಗೆ ನಡುವೆ ಅಂತರ್ಜಾತಿ ಕೂಡಾ ಅಡ್ಡಿಯಾಗಲಿಲ್ಲ. ಆದರೆ ಇಷ್ಟಕ್ಕೆ ವಿರುದ್ದವಾಗಿ ಬಲವಂತದಿಂದ ಮದುವೆ ಮಾಡಿದರೂ ಅನ್ನೋ ಕಾರಣಕ್ಕೆ ಬೆಳಿಗ್ಗೆ ಮದುವೆಯಾದ ಯುವಕ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಮದುವೆ ಮಾಡಿಕೊಂಡು ಹೊಸ ಜೀವನ ನಡೆಸಬೇಕಿದ್ದವನು ಒಲ್ಲದ ಮದುವೆಯಿಂದ ನೇಣಿಗೆ ಶರಣಾಗಿದ್ದು ಮಾತ್ರ ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:30 pm, Thu, 3 July 25