ಉಚಿತ ಹೆಲ್ಮೆಟ್ ಪಡೆಯಲು ಪ್ರವಾಹದಂತೆ ಮುಗಿಬಿದ್ದ ಜನ: ಲಾರಿಯನ್ನೇ ಏರಿ ಹೇಗೆ ದೋಚುತ್ತಿದ್ದಾರೆ ನೋಡಿ!

ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ನೇತೃತ್ವದಲ್ಲಿ ಮುಳಬಾಗಿಲು ಪಟ್ಟಣದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮ ಅಕ್ಷರಶಃ ರಣಾಂಗಣದಂತಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗಿತ್ತು. ಏಕಾಏಕಿ ಸುನಾಮಿಯಂತೆ ಬಂದ ಜನ ದಾಂಧಲೆ ಎಬ್ಬಿಸಿ ಹೆಲ್ಮೆಟ್​ಗಳಿಂದ ಕ್ಯಾಂಟರ್ ಲಾರಿಗಳನ್ನೇ ಏರಿ ಮನಬಂದಂತೆ ಹೊತ್ತೊಯ್ದರು. ವಿಡಿಯೋ ಸಹಿತ ಮಾಹಿತಿ ಇಲ್ಲಿದೆ.

ಉಚಿತ ಹೆಲ್ಮೆಟ್ ಪಡೆಯಲು ಪ್ರವಾಹದಂತೆ ಮುಗಿಬಿದ್ದ ಜನ: ಲಾರಿಯನ್ನೇ ಏರಿ ಹೇಗೆ ದೋಚುತ್ತಿದ್ದಾರೆ ನೋಡಿ!
ಉಚಿತ ಹೆಲ್ಮೆಟ್ ಪಡೆಯಲು ಮುಗಿಬಿದ್ದ ಜನ
Image Credit source: tv9
Edited By:

Updated on: Feb 05, 2026 | 7:02 AM

ಕೋಲಾರ, ಫೆಬ್ರವರಿ 5: ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ಪಟ್ಟಣದ ಮೈದಾನ ಜಾತ್ರೆಯಂತಾಗಿತ್ತು. ಡಿಸೆಂಬರ್​ 1 ರಿಂದ ಜಿಲ್ಲೆಯಲ್ಲಿ ಬೈಕ್​ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್ ಜಾರಿಮಾಡಲಾಗಿದೆ. ಹೀಗಾಗಿ ಮುಳಬಾಗಿಲು (Mulabagilu) ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆದಿನಾರಾಯಣ ನೇತೃತ್ವದಲ್ಲಿ ಬುಧವಾರ 25 ಸಾವಿರ ಉಚಿತ ಹೆಲ್ಮೆಟ್​ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವಸಂಜೀವಿನಿ ಕಾರ್ಯಕ್ರಮಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಚಾಲನೆ ನೀಡಿದರು.

ಬೈಕ್​ಗಳಲ್ಲಿ ಬಂದಿದ್ದ ಸವಾರರಿಗೆ ಹೆಲ್ಮೆಟ್ ವಿತರಿಸಲು 16 ಕೌಂಟರ್ ಓಪನ್ ಮಾಡಲಾಗಿತ್ತು. ಆದರೆ, ಉಚಿತ ಹೆಲ್ಮೆಟ್ ಪಡೆಯಲು ಜನ ‘ನಾ ಮುಂದು ತಾ ಮುಂದು’ ಎಂದು ಮುಗಿಬಿದ್ದರು. ಕೆಲವರಂತೂ ಕ್ಯಾಂಟರ್​​ಗಳನ್ನೇ ಏರಿ ಕೈಗೆ ಸಿಕ್ಕ ಹೆಲ್ಮೆಟ್​​ಗಳನ್ನು ಕೊಂಡೊಯ್ದರು. ಉಚಿತ ಹೆಲ್ಮೆಟ್ ಕೊಡುವ ಸುದ್ದಿ ಕೇಳುತ್ತಿದ್ದಂತೆಯೇ ಮುಳಬಾಗಿಲು ತಾಲೂಕಿನ ಜನ ಸುನಾಮಿಯಂತೆ ನುಗ್ಗಿ ಬಂದರು.

ಉಚಿತ ಹೆಲ್ಮೆಟ್​ಗೆ ಮುಗಿಬಿದ್ದ ಜನ: ವಿಡಿಯೋ ನೋಡಿ

20 ರಿಂದ 25 ಸಾವಿರ ಉಚಿತ ಹೆಲ್ಮೆಟ್​ ಕೊಡುವ ಯೋಜನೆ ಇದಾಗಿತ್ತು. ಆದರೆ 30 ಸಾವಿರಕ್ಕೂ ಹೆಚ್ಚು ಜನ ಲಗ್ಗೆ ಇಟ್ಟಿದ್ದರಿಂದ ಮೈದಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಜನ ಸರದಿ ಬಿಟ್ಟು ಸಿಕ್ಕಿಸಿಕ್ಕ ಕಡೆಯಿಂದ ನುಗ್ಗಿ ಲಾರಿಗಳಲ್ಲಿ ತುಂಬಿಟ್ಟಿದ್ದ ಹೆಲ್ಮೆಟ್ ಬಾಕ್ಸ್​ಗಳನ್ನು ಹೊತ್ತೊಯ್ದರು. ಇನ್ನು ಹೆಲ್ಮೆಟ್ ಪಡೆಯಲು ಸರದಿಯಲ್ಲಿ ನಿಂತಿದ್ದ ಸಾವಿರಾರು ಜನ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು.

ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ

ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಬೈಕ್ ಸವಾರರ ಜೀವ ಉಳಿಸುವುದೇನೋ ನಿಜ. ಆದರೆ, ಉಚಿತ ಸಿಗುತ್ತದೆ ಎಂದು ಜನ ಜೀವವನ್ನೇ ಪಣಕ್ಕಿಟ್ಟು ಮುಗಿಬಿದ್ದಿದ್ದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ