
ಕೋಲಾರ, ಅಕ್ಟೋಬರ್ 18: ಅಡುಗೆ ಮಾಡುವ ವಿಚಾರವಾಗಿ ಗಂಡ, ಹೆಂಡತಿ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಬಾವನನ್ನೇ ಬಾಮೈದ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಜೋಡಿಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಏಳುಮಲೈ ಕೊಲೆಯಾದ ವ್ಯಕ್ತಿ. ಬಾಮೈದ ವಿಘ್ನೇಶ್ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಗಾಗಿ ವೇಮಗಲ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ತಮಿಳುನಾಡು ಮೂಲದ ತಿರುಮಣ್ಣಾಮಲೈ ಮೂಲದವರಾದ ವಿಘ್ನೇಶ್, ಕಸ್ತೂರಿ ಮತ್ತು ಏಳುಮಲೈ ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶಲ್ಲಿನ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ಬಂದಿದ್ದರು. ಮೂವರು ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್ ನಿರ್ಮಾಣ ಮಾಡಿಕೊಂಡು ವಾವಿದ್ದರು.
ವಿಘ್ನೇಶ್ ಹಾಗೂ ಕಸ್ತೂರಿ ಒಂದು ಶೆಡ್ನಲ್ಲಿದ್ದರೆ, ಏಳುಮಲೈ ಪಕ್ಕದ ಶೆಡ್ನಲ್ಲಿ ವಾಸವಿದ್ದ. ಊಟ, ತಿಂಡಿ ಮಾತ್ರ ಕಸ್ತೂರಿ ಶೆಡ್ಗೆ ಹೋಗುತ್ತಿದ್ದ. ಭಾನುವಾರ ಹಿನ್ನೆಲೆ ಏಳುಮಲೈ ಚಿಕನ್ ತಂದುಕೊಟ್ಟಿದ್ದ. ಆದರೆ ಕಸ್ತೂರಿ ಕೂಡ ಭಾನುವಾರ ಎನ್ನುವ ಕಾರಣಕ್ಕೆ ಅಡುಗೆ ಮಾಡದೆ ಇನ್ನು ಮಲಗಿದ್ದಳಂತೆ. ಆಗ ಬೇಗ ಎದ್ದು ಅಡುಗೆ ಮಾಡು ಎಂದು ವಿಘ್ನೇಶ್ ಜಗಳ ಶುರು ಮಾಡಿದ್ದು, ಕಸ್ತೂರಿಯನ್ನ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಏಳುಮಲೈ ಅಕ್ಕನನ್ನ ಹೊಡೆಯಬೇಡ ಎಂದು ಅಡ್ಡ ಹೋಗಿದ್ದಾನೆ. ಈ ವೇಳೆ ಕೋಪಗೊಂಡ ವಿಘ್ನೇಶ್, ಏಕಾಏಕಿ ಚಾಕುವಿನಿಂದ ಇರಿದಿದ್ದು, ಏಳುಮಲೈ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಘಟನೆಯಿಂದ ಗಾಬರಿಗೊಂಡ ವಿಘ್ನೇಶ್ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ವಿಷಯ ತಿಳಿದ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರೆ. ಕೊಲೆ ಮಾಡಿ ಪರಾರಿಯಾಗಿರುವ ವಿಘ್ನೇಶ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಕಾಮುಕ ಕಾರ್ತಿಕ್‌ಗೆ ಗಲ್ಲು ಶಿಕ್ಷೆ!
ಒಟ್ಟಾರೆ ಗಂಡ, ಹೆಂಡತಿ ಮಧ್ಯೆ ಜಗಳ ಉಂಡು ಮಲಗುವವರೆಗೆ ಎನ್ನುವ ಮಾತಿದೆ. ಆದರೆ ಇಲ್ಲಿ ಗಂಡ ಹೆಂಡತಿ ಜಗಳ ಬಿಡಿಸಲು ಹೋದವ ಹತ್ಯೆಗೊಳಗಾಗಿದ್ದಾನೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ದುರಂತ ಸಂಭವಿಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.