ಫ್ಲೈಟ್ ಟಿಕೆಟ್​ ಕೊಟ್ಟ ಸುಳಿವು! ಹೆಂಡತಿ ಮಾತು ಕೇಳಿ ಕರ್ನಾಟಕಕ್ಕೆ ಬಂದವನು ಸ್ನೇಹಿತನಿಂದಲೇ ಕೊಲೆಯಾಗಿದ್ದ

ಅಷ್ಟಕ್ಕೂ ಫ್ಲೈಟ್​ ಟಿಕೆಟ್ ಆಧಾರದಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿಯಾದರೂ ಏನು ಅಂತ ನೋಡೋದಾದ್ರೆ ಕೊಲೆಯಾದವನು ಬಿಹಾರದಿಂದ ಕರ್ನಾಟಕ ರಾಜ್ಯಕ್ಕೆ ಅದೇ ಮೊದಲ ಬಾರಿ ಬಂದಿದ್ದವ. ತಾನು ಕರ್ನಾಟಕಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಆತ ಬರ್ಬರವಾಗಿ ಹತ್ಯೆಯಾಗಿದ್ದ

ಫ್ಲೈಟ್ ಟಿಕೆಟ್​ ಕೊಟ್ಟ ಸುಳಿವು! ಹೆಂಡತಿ ಮಾತು ಕೇಳಿ ಕರ್ನಾಟಕಕ್ಕೆ ಬಂದವನು ಸ್ನೇಹಿತನಿಂದಲೇ ಕೊಲೆಯಾಗಿದ್ದ
ಮನಿಷಾ ದೇವಿ, ಲಾಲ್ತು ಪಂಡಿತ್ ದಂಪತಿ ಮತ್ತು ಸ್ನೇಹಿತ ರಾಜೇಶ್​ ಯಾದವ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Jan 02, 2024 | 4:24 PM

ಅಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಕುಯ್ದು ಕೊಲೆ ಮಾಡಲಾಗಿತ್ತು. ಆದರೆ ಕೊಲೆಯಾದವನು (Murder) ಯಾರು ಅನ್ನೋ ಗುರುತು ಮಾತ್ರ ಸಿಕ್ಕಿರಲಿಲ್ಲ, ಕೊಲೆಯಾದನ ಬಳಿ ಫೋನ್​, ಆಧಾರ್ ಕಾರ್ಡ್​, ವೋಟರ್​ ಐಡಿ ಈ ರೀತಿಯ ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ, ಆದರೆ ಕೊಲೆಯಾದವನ ಬಳಿ ಸಿಕ್ಕ ಅದೊಂದು ಫ್ಲೈಟ್​ ಟಿಕೆಟ್ (Flight ticket)​ ಕೊಲೆಯಾದವನ ಸುಳಿವು ಹುಡುಕಿ ಕೊಟ್ಟಿತ್ತು. ಅಷ್ಟಕ್ಕೂ ಆ ಫ್ಲೈಟ್ ಟಿಕೆಟ್​ ಕೊಟ್ಟ ಸುಳಿವಾದರೂ ಏನು, ಕೊಲೆಯ ರಹಸ್ಯ ಪತ್ತೆಯಾಗಿದ್ದು (Murder Mystery) ಹೇಗೆ? ಇಲ್ಲಿದೆ ಡೀಟೇಲ್ಸ್​..

ಕಳೆದ ಡಿಸೆಂಬರ್​ 17 ರಂದು ಕೋಲಾರ ತಾಲ್ಲೂಕು ಆಹಲಳ್ಳಿ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಕೋಲಾರ (Kolar) ಗ್ರಾಮಾಂತರ ಠಾಣಾ ಪೊಲೀಸರಿಗೆ ಕೊಲೆಯಾದವನ ಗುರುತು ಪತ್ತೆಯಾಗಲಿಲ್ಲ. ಜೊತೆಗೆ ಕೊಲೆಯಾದವನ ಬಳಿ ಅವನ ಯಾವುದೇ ದಾಖಲಾತಿಗಳು ಇರಲಿಲ್ಲ. ಫೋನ್​ ಕೂಡಾ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರಿಗೆ ಕೊಲೆಯಾದವ ವ್ಯಕ್ತಿಯ ಗುರುತು ಪತ್ತೆ ಮಾಡೋದು ತಲೆನೋವಾಗಿ ಪರಿಣಮಿಸಿತ್ತು. ಹೀಗಿರುವಾಗಲೇ ಕೊಲೆಯಾದ ಸ್ಥಳದಲ್ಲಿ ಒಂದು ಫ್ಲೈಟ್​ ಟಿಕೆಟ್​ ಮತ್ತು ಬೋರ್ಡಿಂಗ್ ಪಾಸ್​ ಸಿಕ್ಕಿತ್ತು. ಹೀಗೆ ಫ್ಲೈಟ್​ ಟಿಕೆಟ್​ ತೆಗೆದುಕೊಂಡು ಹುಡುಕಾಟ ಶುರು ಮಾಡಿದ ಪೊಲೀಸರಿಗೆ ಅಲ್ಲಿ ಕೊಲೆಯಾದವನ ಸುಳಿವು ಪತ್ತೆಯಾಗಿತ್ತು.

ಅಷ್ಟಕ್ಕೂ ಫ್ಲೈಟ್​ ಟಿಕೆಟ್ ಆಧಾರದಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿಯಾದರೂ ಏನು ಅಂತ ನೋಡೋದಾದ್ರೆ ಕೊಲೆಯಾದವನು ಬಿಹಾರದಿಂದ ಕರ್ನಾಟಕ ರಾಜ್ಯಕ್ಕೆ ಅದೇ ಮೊದಲ ಬಾರಿ ಬಂದಿದ್ದವ. ತಾನು ಕರ್ನಾಟಕಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಆತ ಬರ್ಬರವಾಗಿ ಹತ್ಯೆಯಾಗಿದ್ದ ಅನ್ನೋದು. ಅಷ್ಟಕ್ಕೂ ಅಲ್ಲಿ ಕೊಲೆಯಾಗಿದ್ದನು ಯಾರು ಅಂತ ನೋಡಿದ್ರೆ ಆತ ಬಿಹಾರ ಮೂಲದ ಲಾಲ್ತು ಪಂಡಿತ್​. ಆತ ತನ್ನ ಹೆಂಡತಿ ಹಾಗೂ ಮಕ್ಕಳನ್ನು ನೋಡೋದಕ್ಕೆಂದು ಕರ್ನಾಟಕಕ್ಕೆ ವಿಮಾನದಲ್ಲಿ ಬಂದಿದ್ದ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸೀದಾ ಮೆಜೆಸ್ಟಿಕ್​ಗೆ ಬಂದು ಅಲ್ಲಿಂದ ತನ್ನ ಸ್ನೇಹಿತನ ಜೊತೆಗೆ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಇರುವ ಆಲಹಳ್ಳಿ ಗ್ರಾಮಕ್ಕೆ ಬಂದಿದ್ದ. ಆದರೆ ಆ ಗ್ರಾಮದ ಹೊರವಲಯದಲ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.

ಅಷ್ಟಕ್ಕೂ ಬಿಹಾರದಿಂದ ಕರ್ನಾಟಕಕ್ಕೆ ಮೊದಲ ಬಾರಿಗೆ ಬಂದ ಆ ವ್ಯಕ್ತಿ ಲಾಲ್ತು ಪಂಡಿತ್​ ಹೀಗೆ ಕೊಲೆಯಾಗಿದ್ದಾದ್ರು ಏಕೆ ಅನ್ನೋದರ ತನಿಖೆ ಶುರು ಮಾಡಿದ ಪೊಲೀಸರಿಗೆ ಅಲ್ಲೊಂದು ಅಕ್ರಮ ಸಂಬಂಧದ ಕಥೆ ತೆರೆದುಕೊಂಡಿತ್ತು. ಅಲ್ಲಿ ಕೊಲೆಯಾಗಿದ್ದ ಲಾಲ್ತು ಪಂಡಿತ್ ಬಿಹಾರ ಮೂಲದವನು, ಆತ ಮನಿಷಾ ದೇವಿ ಅನ್ನೋ ಒಬ್ಬ ವಿವಾಹಿತ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ, ಆಕೆಯೊಂದಿಗೆ ಕೆಲವು ವರ್ಷಗಳ ಕಾಲ ಸಂಸಾರ ಮಾಡಿದ್ದ. ಆದರೆ ಆಕೆ ಲಾಲ್ತು ಪಂಡಿತ್ ತನ್ನನ್ನು ಹಾಗೂ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಗಂಡನನ್ನು ಬಿಟ್ಟು ಮನಿಷಾ ದೇವಿ ತನ್ನ ಮಕ್ಕಳೊಂದಿಗೆ ಕರ್ನಾಟಕಕ್ಕೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

ಹೀಗಿರುವಾಗಲೇ ಮನಿಷಾ ದೇವಿಗೆ ಲಾಲ್ತು ಪಂಡಿತ್ ಸ್ನೇಹಿತ ಬಿಹಾರ ಮೂಲದ ರಾಜೇಶ್​ ಯಾದವ್ ಎಂಬಾತ ಸಿಕ್ಕಿದ್ದ. ಕಾಂಟ್ರಾಕ್ಟ್​ ಕೆಲಸ ಮಾಡುತ್ತಿದ್ದ ಸುರೇಶ್​ ಯಾದವ್​ನ ಪರಿಚಯದಿಂದ ಮನಿಷಾ ದೇವಿಗೆ ಒಳ್ಳೆಯ ಕೆಲಸ ಸಿಕ್ಕಿತ್ತು. ಹೀಗಿರುವಾಗಲೇ ಅವರಿಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕೆಲವು ದಿನಗಳ ಕಾಲ ಇಬ್ಬರ ನಡುವೆ ಅಕ್ರಮ ಸಂಬಂಧ ನಡೆದುಕೊಂಡು ಬಂದಿತ್ತು. ಆನಂತರ ರಾಜೇಶ್​ ಯಾದವ್​ ಮನಿಷಾದೇವಿಯನ್ನು ಕರೆತಂದು ಕೋಲಾರ ತಾಲ್ಲೂಕು ಆಲಹಳ್ಳಿ ಗ್ರಾಮದಲ್ಲಿ ಮನೆ ಮಾಡಿ ಇಟ್ಟಿದ್ದ.

ಆದರೆ ಸುರೇಶ್​ ಯಾದವ್​ ನಿಂದ ಮನಿಷಾ ದೇವಿಗೆ ಕಾಟ ಹೆಚ್ಚಾದಾಗ ಆತ ಸರಿಯಾಗಿ ನೋಡಿಕೊಳ್ಳದೆ ಹೋದಾಗ ಮನಿಷಾ ದೇವಿ ತನ್ನ ಹಳೆಯ ಗಂಡ ಲಾಲ್ತು ಪಂಡಿತ್​ಗೆ ಕರೆ ಮಾಡಿದ್ದಳು. ನೀನು ಬಿಹಾರ ಬಿಟ್ಟು ಕರ್ನಾಟಕಕ್ಕೆ ಬಾ, ಇಲ್ಲೇ ಒಳ್ಳೆಯ ಕೆಲಸ, ಒಳ್ಳೆಯ ಸಂಬಳ ಎಲ್ಲಾ ಸಿಗುತ್ತೆ ಎಂದು ಹೇಳಿದ್ದಳು. ಅಲ್ಲದೆ ನಿನ್ನ ಸ್ನೇಹಿತ ರಾಜೇಶ್ ಯಾದವ್ ಇಲ್ಲೇ ಇದ್ದಾರೆ. ಅವರು ಇಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತಾರೆ ಎಂದು ಹೇಳಿದ್ದಳು. ಹೆಂಡತಿಯ ಮಾತು ಕೇಳಿ ಲಾಲ್ತು ಪಂಡಿತ್ ಡಿಸೆಂಬರ್​ 16 ರಂದು​​ ರಾತ್ರಿ ಗುವಾಹಟಿ ಯಿಂದ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಮೆಜೆಸ್ಟಿಕ್​ಗೆ ಬಂದಿದ್ದ. ತನ್ನ ಪತಿಯನ್ನು ಕರೆತರಲು ಮನಿಷಾ ದೇವಿ ಸುರೇಶ್​ ಯಾದವ್​ನನ್ನೇ ಕಳಿಸಿದ್ದಳು.

ಅದರಂತೆ ಸುರೇಶ್​ ಯಾದವ್​ ಮೆಜೆಸ್ಟಿಕ್​ನಿಂದ ಲಾಲ್ತು ಪಂಡಿತ್​ನನ್ನು ಆಲಹಳ್ಳಿ ಗ್ರಾಮದವರೆಗೆ ಕರೆದುಕೊಂಡು ಬಂದಿದ್ದ. ನರಸಾಪುರದಿಂದ ಇಬ್ಬರು ಆಲಹಳ್ಳಿ ಗ್ರಾಮದ ವರೆಗೆ ನಡೆದುಕೊಂಡು ಬಂದಿದ್ದರು. ಈ ಮಧ್ಯೆ ಲಾಲ್ತು ಪಂಡಿತ್​ ಇಲ್ಲಿಗೆ ಬರೋದು ರಾಜೇಶ್​ ಯಾದವ್​ಗೆ ಇಷ್ಟವಿರಲಿಲ್ಲ, ಎಲ್ಲಿ ತನ್ನ ಅಕ್ರಮ ಸಂಬಂಧ ಲಾಲ್ತು ಪಂಡಿತ್​ಗೆ ತಿಳಿದು ಬಿಡುತ್ತದೋ, ಅವಳು ತನ್ನಿಂದ ಎಲ್ಲಿ ದೂರವಾಗ್ತಾಳೋ ಎಂದು ತಿಳಿದ ರಾಜೇಶ್​ ಯಾದವ್​ ಆಲಹಳ್ಳಿ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ಲಾಲ್ತು ಪಂಡಿತ್​ನನ್ನು ತನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಮನೆಗೆ ಹೋಗಿದ್ದ.

ಮನೆಯಲ್ಲಿ ಲಾಲ್ತು ಪಂಡಿತ್ ಗಾಗಿ ಕಾದಿದ್ದ​ ಮನಿಷಾದೇವಿ ಲಾಲ್ತು ಪಂಡಿತ್ ಎಲ್ಲಿ ಎಂದು ಕೇಳಿದಾಗ ರಾಜೇಶ್​ ಯಾದವ್ ಆತ​ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾನೆ, ಬೆಳಿಗ್ಗೆ ಬರ್ತಾನೆ ಎಂದು ಸುಳ್ಳು ಹೇಳಿದ್ದ. ಆದರೆ ಬೆಳಗಾಗುಷ್ಟರಲ್ಲಿ, ಗ್ರಾಮದ ಬಳಿ ಲಾಲ್ತು ಪಂಡಿತ್​ ಕೊಲೆ ಯಾಗಿದ್ದ ವಿಷಯ ಮನಿಷಾದೇವಿಗೆ ತಿಳಿದು ಬಂದಿತ್ತು. ಆದರೆ ಎಲ್ಲಿ ಕೊಲೆ ತನ್ನ ಮೇಲೆ ಬರುತ್ತದೋ ಎಂಬ ಭಯದಲ್ಲಿ ಸುರೇಶ್​ ಯಾದವ್ ಜೊತೆಗೆ ಊರು ಬಿಟ್ಟು ಹೋಗಲು ಸಿದ್ದವಾಗಿದ್ದಳು.

ಆದರೆ ಈವೇಳೆ ಪೊಲೀಸರು ಕೊಲೆ ಆರೋಪಿ ಸುರೇಶ್ ಯಾದವ್​ನನ್ನು ಬಂಧಿಸಿದ್ದಾರೆ. ಅಲ್ಲದೆ ಕೊಲೆಯಲ್ಲಿ ಮನಿಷಾ ದೇವಿಯ ಪಾತ್ರವೇನಾದರೂ ಇದೆಯಾ ಅನ್ನೋದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಕೊಲೆಯಾದ ಲಾಲ್ತು ಪಂಡಿತ್​ ಶವವನ್ನು ಬಿಹಾರದಿಂದ ಅವರ ಸಂಬಂಧಿಕರನ್ನು ಕರೆಸಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನು ಕೇವಲ ಫ್ಲೈಟ್ ಟಿಕೆಟ್ ಆಧಾರದ ಮೇಲೆ ಇಡೀ ಕೊಲೆ ಪ್ರಕರಣವನ್ನು ಭೇದಿಸಿದ ಕೋಲಾರ ಗ್ರಾಮಾಂತರ ಠಾಣೆ ಸಿಪಿಐ ಲೋಕೇಶ್ ಕುಮಾರ್ ಹಾಗೂ ಸಿಬ್ಬಂದಿಯನ್ನು ಕೋಲಾರ ಎಸ್ಪಿ ಎಂ. ನಾರಾಯಣ್​ ಹಾಗೂ ಐಜಿಪಿ ರವಿಕಾಂತೇಗೌಡ ಪ್ರಶಂಶಿಸಿ 15 ಸಾವಿರ ರೂಪಾಯಿ ಬಹುಮಾನವನ್ನು ನೀಡಿದ್ದಾರೆ.

ಒಟ್ಟಾರೆ ಸ್ನೇಹಿತನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧಕ್ಕೆ ಮರುಳಾಗಿ ಹೋಗಿದ್ದವನು, ಎಲ್ಲಿ ತನ್ನ ಸ್ನೇಹಿತ ಬಂದರೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೋ ಅನ್ನೋ ಆತಂಕದಲ್ಲಿ, ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಸದ್ಯ ಈಗ ಅಕ್ರಮ ಸಂಬಂಧವೂ ಇಲ್ಲದೆ, ಸ್ನೇಹಿತನು ಇಲ್ಲದೆ ಪಾಪಿ ಜೈಲು ಪಾಲಾಗಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ