Ganesh Chaturthi 2022: ಸರ್ಕಾರಿ ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮುಕ್ತ ಅವಕಾಶ; ಶಿಕ್ಷಣ ಸಚಿವರ ನಿರ್ಧಾರಕ್ಕೆ ಆಕ್ಷೇಪ
Govt Schools: ಹಿಜಾಬ್ ವಿವಾದದ ನಂತರ ಕರ್ನಾಟಕದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಧಾರ್ಮಿಕ ಅಂಶಗಳು ಚರ್ಚೆಗೆ ಗ್ರಾಸವಾಗುತ್ತಲೇ ಇವೆ.
ಬೆಂಗಳೂರು: ಕರ್ನಾಟಕ ಸರ್ಕಾರವು ನಡೆಸುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಣಪತಿ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅನುಮತಿ ನೀಡಿದ್ದಾರೆ. ಹಿಜಾಬ್ ವಿವಾದದ ನಂತರ ಕರ್ನಾಟಕದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಧಾರ್ಮಿಕ ಅಂಶಗಳು ಚರ್ಚೆಗೆ ಗ್ರಾಸವಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬದ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೂ ವ್ಯಾಪಕ ಚರ್ಚೆಗೆ ಗುರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಮಟ್ಟದಲ್ಲಿ ‘ಈ ಸೂಕ್ಷ್ಮ ಸಂದರ್ಭದಲ್ಲಿ ಇಂಥದ್ದೊಂದು ಕ್ರಮದ ಅಗತ್ಯವಿತ್ತೇ’ ಎಂಬ ಚರ್ಚೆ ಆರಂಭವಾಗಿದೆ.
ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ‘ಹಿಂದೂ ದೇವರು ಗಣಪತಿಯನ್ನು ಶಾಲೆಗಳಲ್ಲಿ ಕೂರಿಸಲು ಅವಕಾಶ ನೀಡಿದರೆ ಏಕಮುಖಿ ನಿರ್ಧಾರವಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಬೇಕೆಂದು ಕ್ರಿಶ್ಚಿಯನ್ನರು, ನಮಾಜ್ ಮಾಡಲು ಅವಕಾಶ ಬೇಕೆಂದು ಮುಸ್ಲಿಮ್ ಪೋಷಕರು ಬೇಡಿಕೆಯಿಟ್ಟರೆ ಏನು ಮಾಡುವುದು’ ಎಂಬ ಪ್ರಶ್ನೆ ಶಿಕ್ಷಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕೋಲಾರದ ಒಂದು ಶಾಲೆಯಲ್ಲಿ ಶುಕ್ರವಾರದಂದು ಮುಸ್ಲಿಮ್ ಮಕ್ಕಳಿಗೆ ನಮಾಜ್ಮಾಡಲು ಅವಕಾಶ ನೀಡಿದ್ದಕ್ಕೆ ಶಾಲೆಯ ಮುಖ್ಯಸ್ಥರನ್ನೇ ಕೆಲಸದಿಂದ ಅಮಾನತು ಮಾಡಲಾಗಿತ್ತು. ಆದರೆ ಗಣೇಶನ ಮೂರ್ತಿಗೆ ಸರ್ಕಾರವೇ ಅವಕಾಶ ಮಾಡಿಕೊಟ್ಟರೆ ಅದು ಪಕ್ಷಪಾತದ ನಡೆ ಆಗುವುದಿಲ್ಲವೇ ಎಂದೂ ಕೆಲವರು ಕೇಳುತ್ತಿದ್ದಾರೆ.
ಇದನ್ನೂ ಓದಿ: ಕೋಲಾರ: ವಿವಾದಕ್ಕೆ ಕಾರಣವಾಯ್ತು ಸರ್ಕಾರಿ ಶಾಲಾ ಕೊಠಡಿಯಲ್ಲಿ ಮಾಡಿದ ನಮಾಜ್!
ಗಣೇಶನನ್ನು ಕೂಡಿಸಲು ಅವಕಾಶ ಕೊಡುವುದಾದರೆ ನಮಾಜ್ಗೆ ಹಾಗೂ ಕ್ರಿಸ್ಮಸ್ ಆಚರಣೆಗೂ ಅವಕಾಶ ಕೊಡಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ಅಲ್ಪಸಂಖ್ಯಾತ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗಣೇಶ ಮೂರ್ತಿ ಕೂರಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
Published On - 9:44 am, Wed, 17 August 22