ಪೊಲೀಸರ ಸೋಗಿನಲ್ಲಿ ಉದ್ಯಮಿ ಅಪಹರಿಸಿ ಹಣಕ್ಕೆ ಬೇಡಿಕೆ; ನಾಲ್ವರು ಅರೆಸ್ಟ್, ಖದೀಮರು ಸಿಕ್ಕಿಬಿದ್ದಿದ್ದೇ ರೋಚಕ
ಸಿಸಿಬಿ ಪೊಲೀಸರೆಂದು ಹೇಳಿ ಬುಲೇರೋ ಜೀಪ್ನಲ್ಲಿ ಬಂದಿದ್ದ ಆ ಕಿಡ್ನ್ಯಾಪರ್ಸ್, ಉದ್ಯಮಿಯನ್ನು ಅಪಹರಿಸಿ ಹೊಡೆದು, ಬಡಿದು ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ತಲೆಮರೆಸಿಕೊಂಡು ಹೋಗಿದ್ದ ನಾಲ್ವರು ನಕಲಿ ಪೊಲೀಸರು ಅಂದರ್ ಆಗಿದ್ದಾರೆ. ಏನಿದು ಘಟನೆ ಅಂತೀರಾ? ಈ ಸ್ಟೋರಿ ಓದಿ.
ಕೋಲಾರ, ಆ.20: ಕೋಲಾರ ಜಿಲ್ಲೆಯ ಮುಳಬಾಗಲು(Mulabagilu) ಪಟ್ಟಣದ ಬಜಾರ್ ಬೀದಿಯಲ್ಲಿ ನಿರ್ಮಾ ಕಂಪನಿಯ ಡಿಸ್ಟ್ರಿಬ್ಯೂಟರ್ ಹಾಗೂ ಪೈನಾನ್ಸ್ ವ್ಯವಹಾರ ಮಾಡುವ ಉದ್ಯಮಿ ನಾಗರಾಜ್ ಎಂಬುವವರನ್ನು ಕಳೆದ ಆಗಸ್ಟ್.9 ರಂದು ಸಿನಿಮೀಯ ರೀತಿಯಲ್ಲಿ ನಕಲಿ ವೇಷಧಾರಿ ಪೊಲೀಸರು ಅಪಹರಣ ಮಾಡಿ ಹಣ ದೋಚಿದ್ದರು. ನಾಗರಾಜ್ ಆವತ್ತು ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿ ಎಂದಿನಂತೆ ತಮ್ಮ ಅಂಗಡಿಗೆ ತೆರಳಿ ಕಲೆಕ್ಷನ್ ಮಾಡುತ್ತಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಒಬ್ಬ ವ್ಯಕ್ತಿ, ಸಾಹೇಬರು ಕರೆಯುತ್ತಿದ್ದಾರೆ ಬಾ ಎಂದು ಕರೆದಿದ್ದಾನೆ. ಇದರಿಂದ ವಿಚಲಿತಗೊಂಡ ನಾಗರಾಜ್‌ಗೆ ಸಿಸಿಬಿ ಡಿವೈಎಸ್ಪಿ ಎಂದು ಬೆದೆರಿಸಿ ಕಾರಿನ ಬಳಿ ಕರೆದುಕೊಂಡು ಬಂದು ಆತನನ್ನ ಕಿಡ್ನಾಫ್ ಮಾಡಿಕೊಂಡು ನಂಗಲಿ, ರಾಮಸಂದ್ರ, ಹೊಸಕೋಟೆ, ಹಲವೆಡೆ ಸುತ್ತಾಡಿಸಿದ್ದಾರೆ.
‘ನೀವು ಗಾಂಜಾ ಮಾರಾಟ ಮಾಡುತ್ತಿದ್ದು, ಅನೇಕ ದೂರುಗಳು ಬಂದಿವೆ ಎಂದು ಕಾರಿನಲ್ಲೇ ಕೂರಿಸಿಕೊಂಡು ಲಾಠಿಯಲ್ಲಿ ಹೊಡೆದಿದ್ದಾರೆ. ನಿಮ್ಮ ಮೇಲೆ ಪ್ರಕರಣ ದಾಖಲು ಆಗದಂತೆ ನೋಡಿಕೊಳ್ಳಲು ನಮ್ಮ ಸಾಹೇಬರು ಹೇಳಿದ್ದಾರೆ. ನಂತರ ನಾಗರಾಜ್‌ಗೆ ಪತ್ನಿಗೆ ದೂರವಾಣಿ ಮಾಡಿ ಹಣ ತರುವಂತೆ ಒತ್ತಡ ಹಾಕಿದ್ದಾರೆ. ಇದರಿಂದ ನಾಗರಾಜ್ ಅನುಮಾನಗೊಂಡು ಇವರು ಪೊಲೀಸರು ಅಲ್ಲವೆಂದು ತಿಳಿದು, ತಮ್ಮ ಬಳಿ ಯಾವುದೇ ಹಣವಿಲ್ಲ, ಯಾವ ಪ್ರಕರಣ ಬೇಕಾದರೂ ಹಾಕಿ ಎಂದಾಗ ಅಪಹರಣಕೋರರು ಮದನಪಲ್ಲಿ, ಚಿಂತಾಮಣಿ ಸುತ್ತಾಡಿಸಿ ನಾಗರಾಜ್ ಬಳಿಯಿದ್ದ 72 ಸಾವಿರ ರೂಪಾಯಿ ಹಣ ಕಿತ್ತುಕೊಂಡು ಚಿಂತಾಮಣಿಯ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಉದ್ಯಮಿ
ಇದನ್ನೂ ಓದಿ:ಬಸ್ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್ ಆರೋಪ
ಇನ್ನು ನಾಗರಾಜ್ ಪತ್ನಿಗೆ ದೂರವಾಣಿ ಕರೆ ಮಾಡಿ ಹಣ ತೆಗೆದುಕೊಂಡು ಬರುವಂತೆ ತಿಳಿಸಿದಾಗ ಅನುಮಾನಗೊಂಡ ನಾಗರಾಜ್ ಪತ್ನಿ ಪ್ರಮೀಳಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮುಳಬಾಗಲು ನಗರ ಠಾಣೆ ಪೊಲೀಸರು, ನಕಲಿ ಪೊಲೀಸರ ಜಾಡು ಹಿಡಿದು ಹೋದಾಗ ನಾಲ್ಕು ಜನ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ನಕಲಿ ಪೊಲೀಸ್ ಎಂದು ಹೇಳಿಕೊಂಡಿದ್ದ ಬೆಂಗಳೂರಿನ ಬಾಣಸವಾಡಿ ಮೂಲದ ಡ್ಯಾನಿಯಲ್ ಎಸೆಕ್ಸ್, ಮುಳಬಾಗಿಲು ಮೂಲದ ಮಂಜುನಾಥ್, ಬಾಲಸುಬ್ರಹ್ಮಣ್ಯಂ ಮತ್ತು ಹರಿಬಾಬು ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತಷ್ಟು ಜನ ಇರುಬಹುದೆಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನು ಡ್ಯಾನಿಯಲ್ ವಿರುದ್ದ ಈ ಮೊದಲು ಕೂಡ ಆಂಧ್ರದ ವಿ.ಕೋಟ, ಕೃಷ್ಣಗಿರಿ ಮತ್ತು ನಂಗಲಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಆರೋಪಿಯ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಈ ಡ್ಯಾನಿಯಲ್ ಎಂಬಾತ ಬೆಂಗಳೂರಿನ ಹೆಚ್.ಆರ್.ಕನ್ಸಲ್ಟೆನ್ಸಿ ಯಲ್ಲಿ ರಿಕ್ಯ್ರೂಟ್ಮೆಂಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ಪೊಲೀಸರ ವೇಷ ಹಾಕಿ ಕಳ್ಳತನಕ್ಕೆ ಇಳಿದಿದ್ದು, ಸಾರ್ವಜನಿಕರು ಕೂಡ ಈಗ ಪೊಲೀಸರನ್ನು ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Tue, 20 August 24