ವೈದ್ಯನ ಎಡವಟ್ಟಿನಿಂದ ಯುವಕ ಸಾವು: ಬಾಳಿ ಬದುಕಬೇಕಿದ್ದವನನ್ನು ಬಲಿ ಪಡೆತಾ ಆ ಒಂದು ಇಂಜೆಕ್ಷನ್?

| Updated By: ಗಂಗಾಧರ​ ಬ. ಸಾಬೋಜಿ

Updated on: Feb 21, 2025 | 9:08 PM

ಕೋಲಾರ ತಾಲೂಕಿನ ವಕ್ಕಲೇರಿಯಲ್ಲಿ ಜ್ವರದಿಂದ ಬಳಲುತ್ತಿದ್ದ ಯುವಕನಿಗೆ ಬಿಎಎಂಎಸ್ ವೈದ್ಯ ಇಂಜೆಕ್ಷನ್ ನೀಡಿದ್ದಾನೆ. ಕೆಲವೇ ಹೊತ್ತಿನಲ್ಲಿ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವೈದ್ಯನ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ವೈದ್ಯನ ಎಡವಟ್ಟಿನಿಂದ ಯುವಕ ಸಾವು: ಬಾಳಿ ಬದುಕಬೇಕಿದ್ದವನನ್ನು ಬಲಿ ಪಡೆತಾ ಆ ಒಂದು ಇಂಜೆಕ್ಷನ್?
ವೈದ್ಯನ ಎಡವಟ್ಟಿನಿಂದ ಯುವಕ ಸಾವು: ಬಾಳಿ ಬದುಕಬೇಕಿದ್ದವನನ್ನು ಬಲಿ ಪಡೆತಾ ಆ ಒಂದು ಇಂಜೆಕ್ಷನ್?
Follow us on

ಕೋಲಾರ, ಫೆಬ್ರವರಿ 21: ಅವನು ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಪದವಿ ಮುಗಿಸಿದ್ದ ಯುವಕ (boy). ಇನ್ನೇನು ಓದಿದ್ದು ಮುಗಿಯಿತು ಕೆಲಸಕ್ಕೆ ಸೇರಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಕನಸು ಕಂಡಿದ್ದ. ಆದರೆ ಜ್ವರವೆಂದು ಅದೊಂದು ಕ್ಲಿನಿಗ್​ಗೆ ಹೋದ ಯುವಕನಿಗೆ ವೈದ್ಯ ಕೊಟ್ಟ ಅದೊಂದು ಇಂಜೆಕ್ಷನ್ ಆತನ ಪ್ರಾಣವನ್ನೇ ತೆಗೆದಿರುವಂತಹ ದಾರುಣ ಘಟನೆ ಕೋಲಾರ ತಾಲೂಕು ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.

ಇಂಜೆಕ್ಷನ್​ ಪಡೆದ ಕೆಲವೇ ಹೊತ್ತಿನಲ್ಲಿ ಕುಸಿದು ಬಿದ್ದ ವ್ಯಕ್ತಿ

ಕೋಲಾರ ತಾಲ್ಲೂಕು ವಕ್ಕಲೇರಿ ಗ್ರಾಮದ ಯುವಕ ಗೌತಮ್ ಆಲಿಯಾಸ್​​ ನಾಗೇಂದ್ರಬಾಬು ಎಂಬಾತ ನಿನ್ನೆ ಬೆಳಿಗ್ಗೆಯಿಂದ ಜ್ವರದಿಂದ ಬಳಲುತ್ತಿದ್ದ. ಸಂಜೆ ವೇಳೆಗೆ ಜ್ವರ ಹೆಚ್ಚಾದರಿಂದ ನಾಗೇಂದ್ರಬಾಬು ವಕ್ಕಲೇರಿ ಗ್ರಾಮದಲ್ಲೇ ಇದ್ದ ಸನ್​ರೈಸ್ ಅನ್ನೋ ಕ್ಲಿನಿಕ್​ಗೆ ಹೋಗಿದ್ದಾನೆ. ಅಲ್ಲಿದ್ದ ಮೊಹಮದ್ ರಫೀಕ್​ ಅನ್ನೋ ಬಿಎಎಂಎಸ್​ ವೈದ್ಯ ಆತನಿಗೆ ಒಂದು ಇಂಜೆಕ್ಷನ್​ ಕೊಟ್ಟಿದ್ದಾರೆ. ಇಂಜೆಕ್ಷನ್​ ಪಡೆದ ಕೆಲವೇ ಹೊತ್ತಿನಲ್ಲಿ ನಾಗೇಂದ್ರಬಾಬು ಕುಸಿದು ಬಿದ್ದು ಪಿಡ್ಸ್ ಬಂದಂತೆ ಆಗಿದೆ. ಈ ವೇಳೆ ವೈದ್ಯ ರಫೀಕ್​ ನಾಗೇಂದ್ರಬಾಬು ಜೊತೆಗಿದ್ದ ಅವರ ಸಂಬಂಧಿಕರನ್ನು ಹೊರಗೆ ಕಳಿಸಿ ಕೆಲಕಾಲ ಏನಾಗುತ್ತದೆ ಎಂದು ಕ್ಲಿನಿಕ್​ ಒಳಗೆ ಪರೀಕ್ಷಿಸಿ ನೋಡಿದ್ದಾನೆ. ಯಾವಾಗ ಹಾರ್ಟ್ ​ಬೀಟ್​ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವೈದ್ಯ ರಫೀಕ್​ ನಾಗೇಂದ್ರಬಾಬು ಅವರನ್ನು ಕೂಡಲೇ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿ ಕಳಿಸಿದ್ದಾನೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ: ರಸ್ತೆ ಜಗಳ ಕೊಲೆಯಲ್ಲಿ ಅಂತ್ಯ, ಇಬ್ಬರ ಬಂಧನ

ಕೂಡಲೇ ಆತನನ್ನು ಕೋಲಾರ ಜಾಲಪ್ಪ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ನಾಗೇಂದ್ರಬಾಬು ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾನೆ. ಸದ್ಯ ಮೃತ ನಾಗೇಂದ್ರಬಾಬು ಪೋಷಕರು ವಕ್ಕಲೇರಿ ಸನ್​ರೈಸ್​ ಕ್ಲಿನಿಕ್​ನ ವೈದ್ಯ ರಫೀಕ್​ ನೀಡಿದ ಇಂಜೆಕ್ಷನ್​​ನಿಂದಲೇ ನಾಗೇಂದ್ರಬಾಬು ಮೃತಪಟ್ಟಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಆತನನ್ನು ವೈದ್ಯ ಉದ್ಯೋಗದಿಂದಲೇ ತೆಗೆದು ಹಾಕಿ ಎಂದು ಮೃತ ನಾಗೇಂದ್ರಬಾಬು ತಾಯಿ ಕಣ್ಣೀರು ಹಾಕಿದ್ದಾರೆ.

ನಾರಾಯಣಸ್ವಾಮಿ ಹಾಗೂ ಪಾರ್ವತಮ್ಮ ಅವರ ಒಬ್ಬನೇ ಮಗ ನಾಗೇಂದ್ರಬಾಬು. ತಂದೆ ಇಲ್ಲದ ಕಾರಣ ತಾಯಿ ಈತನನ್ನು ಕೂಲಿನಾಲಿ ಮಾಡಿ ಸಾಕಿ ಚೆನ್ನಾಗಿ ಓದಿಸಿದ್ದರು. ಎಂಬಿಎ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕೆಂದುಕೊಂಡಿದ್ದ. ಊರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತನ್ನ ತಾಯಿಯ ಕಷ್ಟಕ್ಕೆ ಹೆಗಲುಕೊಡುತ್ತಿದ್ದ. ಇನ್ನು ಊರಿನಲ್ಲೂ ಎಲ್ಲರ ವಿಶ್ವಾಸಗಳಿಸಿಕೊಂಡು ಎಲ್ಲರೊಟ್ಟಿಗೆ ಖುಷಿ ಖಷಿಯಾಗಿರುತ್ತಿದ್ದ ನಾಗೇಂದ್ರಬಾಬು ವಕ್ಕಲೇರಿ ಗ್ರಾಮದಲ್ಲಿ ಎಲ್ಲರ ಅಚ್ಚುಮೆಚ್ಚಿನ ಹುಡುಗ. ಈತ ಒಂದಲ್ಲ ಒಂದು ದಿನ ಒಂದು ಒಳ್ಳೆಯ ಹುದ್ದೆಗೆ ಸೇರ್ತಾನೆ ಎಂದೆಲ್ಲಾ ಕನಸು ಕಟ್ಟಿಕೊಂಡಿದ್ದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ನಾಗೇಂದ್ರಬಾಬು ಸಾವಿನ ಸುದ್ದಿ ಆಘಾತ ಉಂಟುಮಾಡಿದೆ.

ವೈದ್ಯನ ಎಡವಟ್ಟು

ಇನ್ನು ಬಿಎಎಂಎಸ್​ ಮಾಡಿ ವಕ್ಕಲೇರಿಯಲ್ಲಿ ಕ್ಲಿನಿಕ್​ ಇಟ್ಟುಕೊಂಡಿದ್ದ ಮೊಹಮದ್ ರಫೀಕ್​ ಕೇವಲ ಆಯುರ್ವೇದ ಚಿಕಿತ್ಸೆ ಮಾತ್ರ ಕೊಡಬೇಕು ಆದರೆ ಈತ ಓದಿರುವುದನ್ನು ಬಿಟ್ಟು ಅಲೋಪತಿ ಔಷಧಿಯನ್ನು ನೀಡುತ್ತಿದ್ದ. ಇನ್ನು ರಫೀಕ್​ ಬಂಗಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆಯುರ್ವೇದ ಓದಿ ಅಲೋಪತಿ ಚಿಕಿತ್ಸೆ ನೀಡುವ ಮೂಲಕ ಎಡವಟ್ಟು ಮಾಡಿರುವ ಮೊಹಮದ್ ರಫೀಕ್​, ಈ ಮೊದಲೂ ಕೂಡ ಇದೇ ರೀತಿ ಎಡವಟ್ಟು ಮಾಡಿ ಒಬ್ಬರ ಜೀವಕ್ಕ ಕಂಟಕ ತಂದಿದ್ದನಂತೆ. ಆದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ.

ಸದ್ಯ ವೈದ್ಯರ ವಿರುದ್ದ ಆತನ ಸಂಬಂಧಿಕರು ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದು,  ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ವಕ್ಕಲೇರಿ ಸರ್ಕಾರಿ ಆಸ್ಪತ್ರೆಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ಅಲ್ಲಿರುವ ಆಂಬ್ಯುಲೆನ್ಸ್ ಕೆಲಸ ಮಾಡುತ್ತಿಲ್ಲ ಎಂದು ಸ್ಥಳಕ್ಕೆ ಬಂದಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟದಲ್ಲಿ ಮತ್ತೊಂದು ಹಗರಣ ಆರೋಪ: ನೂರಾರು ಕೋಟಿ ರೂಪಾಯಿ ಡೀಸೆಲ್ ಅವ್ಯವಹಾರ

ಒಟ್ಟಾರೆ ಮೃತನ ಸಂಬಂಧಿಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಮೃತನ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೋಲಾರದಲ್ಲಿ ನಕಲಿ ವೈದ್ಯರು, ಹಾಗೂ ನಕಲಿ ಕ್ಲಿನಿಕ್​ಗಳ ಹಾವಳಿ ಹೆಚ್ಚಾಗಿದ್ದು ಆರೋಗ್ಯ ಇಲಾಖೆ ಈಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಜನರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.