ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ

ಹಣದ ಆಸೆಗಾಗಿ 7 ದಿನದ ಮಗುವನ್ನು ಮಾರಾಟ ಮಾಡುತ್ತಿದ್ದ ದಂಪತಿ ಸಿಕ್ಕಿಬಿದ್ದಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್​​ಗೆ ಸಂಬಂಧಿಸಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 7 ದಿನದ ಮಗುವಿನ ರಕ್ಷಣೆ ಮಾಡಿದ್ದಾರೆ.

ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ
ಮಗು ಮಾರಾಟ ಜಾಲ
Image Credit source: tv9 kannada
Edited By:

Updated on: Feb 07, 2026 | 6:34 PM

ಕೋಲಾರ, ಫೆಬ್ರವರಿ 07: ಮಗು ಆಗಿಲ್ಲ ಅಂತ ಈಗಲೂ ಅದೆಷ್ಟೋ ದಂಪತಿ ಪರದಾಡುತ್ತಾರೆ. ದೇವಸ್ಥಾನ, ಆಸ್ಪತ್ರೆ, ಹರಕೆ ಅಂತ ಪ್ರತಿದಿನ ಸುತ್ತಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮಗು ಮಾರಾಟ (Sale) ಜಾಲದಲ್ಲಿ ತೊಡಗಿದ್ದು, ಇದೀಗ ಮಗುವನ್ನು (Newborn Baby) ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಅವರಿಬ್ಬರು ಗಂಡ-ಹೆಂಡತಿ ಅಲ್ಲ, ಆದರೆ ಲಿಂವಿಗ್ ಟುಗೆದರ್ ರೀತಿ ಸಂಸಾರ ಮಾಡಿಕೊಂಡಿದ್ದವರು. ಆಕೆಗೆ ಈಗಾಗಲೇ ಎರಡು ಮಕ್ಕಳಿದ್ದರು. ಮೊದಲ ಗಂಡನಿಗೆ ಒಂದು ಗಂಡು ಮಗುವಿತ್ತು. ಇನ್ನು ಎರಡನೇ ಗಂಡನಿಗೆ ಒಂದು ಮಗುವಿತ್ತು. ಈ ನಡುವೆ ಮೂರನೇ ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ವೇಳೆ ಸಿಕ್ಕಬಿದ್ದಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: ನವಜಾತ ಶಿಶು ರಸ್ತೆಯಲ್ಲಿ ಬಿಟ್ಟುಹೋಗಿದ್ದ ಮಹಿಳೆಗೆ ಜೈಲು ಶಿಕ್ಷೆ: 10 ಸಾವಿರ ರೂ ದಂಡ

ಶ್ರೀನಿವಾಸಪುರ ಪಟ್ಟಣದ ನಿವಾಸಿ ನೀತಾ ಎಂಬಾಕೆಗೆ ಮೊದಲು ಸಂತೋಷ್ ಎಂಬುವನ ಜೊತೆಗೆ ಮದುವೆಯಾಗಿತ್ತು. ಅವನಿಗೆ ಒಂದು ಗಂಡು ಮಗುವಾಗಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆ ಸಂತೋಷ್​​ನನ್ನು ತೊರೆದಿದ್ದ ನೀತಾ, ರಾಘವೇಂದ್ರ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ಈ ವೇಳೆ ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಈ ವೇಳೆ ನೀತಾ ಗರ್ಭಣಿಯಾಗಿದ್ದಳು. ಬಡತನ ಇದ್ದರೂ ಕೂಡ ಮತ್ತೊಮ್ಮೆ ಗರ್ಭಿಣಿಯಾಗಿದ್ದ ನೀತಾ ಮತ್ತು ರಾಘವೇಂದ್ರಗೆ ಈ ಮಗು ಬೇಡ ಎನ್ನಿಸಿತ್ತು.

ಐವರ ಬಂಧನ

ಈ ವೇಳೆ ನಾರಾಯಣಸ್ವಾಮಿ ಎಂಬಾತ ನನಗೆ ಪರಿಚಯಸ್ಥರೊಬ್ಬರಿಗೆ ಮಕ್ಕಳಿಲ್ಲ, ನಿಮ್ಮ ಮಗು ಕೊಟ್ಟರೆ ಐದು ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದ. ಅದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಹಾಗೂ ಮಂಜುಳ ದಂಪತಿಗಳಿಗೆ ಕೊಡಿಸಲು ಮಧ್ಯಸ್ಥಿಕೆ ವಹಿಸಿಕೊಂಡಿದ್ದ. ಅದರಂತೆ ಕಳೆದ ಏಳು ದಿನದ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ಒಪ್ಪಂದದಂತೆ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿದ ಹಿನ್ನೆಲೆ ಕಳೆದ ರಾತ್ರಿ ಪೊಲೀಸರು ಮಗುವಿನ ಸಹಿತ ಒಟ್ಟು ಐದು ಜನರನ್ನು ಬಂಧಿಸಿದ್ದಾರೆ.

ಇನ್ನು ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯ ನಿವಾಸಿಗಳಾದ ನೀತಾ ಅಲಿಯಾಸ್ ಅನಿತಾ ಮತ್ತು ರಾಘವೇಂದ್ರ ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿಕೊಂಡಿದ್ದರು. ಮೊದಲ ಗಂಡನಿಗೆ ಒಂದು 8 ವರ್ಷದ ಗಂಡು ಮಗನಿದ್ದಾನೆ. ಇನ್ನು ರಾಘವೇಂದ್ರನಿಗೆ ಒಂದು ಐದು ವರ್ಷದ ಹೆಣ್ಣು ಮಗುವಿತ್ತು. ಸದ್ಯ ಅವರಿಗೆ ಬಡತನವಿತ್ತು. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಘವೆಂದ್ರನಿಗೆ ಮೂರನೇ ಮಗುವನ್ನು ಸಾಕುವಷ್ಟು ಶಕ್ತಿ ಇರಲಿಲ್ಲ, ಹಾಗಾಗಿ ಗಂಡ-ಹೆಂಡತಿ ಇಬ್ಬರು ಮಾತನಾಡಿಕೊಂಡು ಇಬ್ಬರ ಒಪ್ಪಿಗೆ ಮೇರೆಗೆ ಮಗು ಮಾರಾಟಕ್ಕೆ ಮುಂದಾಗಿದ್ದಾರೆ.

ತನ್ನ ಪರಿಚಯಸ್ಥ ಕೊಟ್ರಗೊಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರ ಮೂಲಕ ಮಗುವನ್ನು ಐದು ಲಕ್ಷ ರೂಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಒಪ್ಪಂದದ ಪ್ರಕಾರವಾಗಿ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಮತ್ತು ಮಂಜುಳ ದಂಪತಿಗೆ ಮಗುವನ್ನು ಹಸ್ತಾಂತರಕ್ಕೆ ಮುಂದಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ಪೊಲೀಸರಿಗೆ ಸಿಕ್ಕ ಮಾಹಿತಿ ಮೇಲೆ ದಾಳಿ ಮಾಡಿದಾಗ ರಾತ್ರಿ 1.30 ರಲ್ಲಿ ಮಾರಾಟ ಮಾಡುತ್ತಿದ್ದ ದಂಪತಿ ಮತ್ತು ಖರೀದಿ ಮಾಡುತ್ತಿದ್ದ ದಂಪತಿ ಹಾಗೂ ಮಧ್ಯವರ್ತಿ ಸೇರಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು

ಸದ್ಯ ಪೊಲೀಸರು ಐವರನ್ನು ಬಂಧಿಸುವ ಮೂಲಕ ಮಗುವನ್ನು ರಕ್ಷಣೆ ಮಾಡಿದ್ದು, ಜೊತೆಗೆ 80 ಸಾವಿರ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿದ್ದು, ಮಗುವನ್ನು ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ವರ್ಷದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ ಹೇಳಿದ್ದಾರೆ.

ಒಟ್ಟಿನಲ್ಲಿ ಬಡತನದ ಹೆಸರಲ್ಲಿ ಹೀಗೆ ಹೆತ್ತವರೇ ಮಕ್ಕಳನ್ನ ಮಾರಾಟ ಮಾಡಲು ಮುಂದಾಗಿರುವುದು ಮಾತ್ರ ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.