ಕೋಲಾರದ ರಾಮಭಕ್ತ ಪಾಚಾಸಾಬಿ ಕನಸು ನನಸು ಮಾಡಿದ ಗ್ರಾಮಸ್ಥರು; ರಾಮಕೋಟಿ, ಗ್ರಾಮಸ್ಥರೊಂದಿಗೆ ಭದ್ರಾಚಲಂಗೆ ಪ್ರಯಾಣ
ಪಾಚಾಸಾಬಿ ಅವರು ರಾಮಕೋಟಿ ಬರೆದು ಶ್ರೀರಾಮನ ಸನ್ನಿದಾನ ಭದ್ರಾಚಲಂಗೆ ರಾಮಕೋಟಿ ನಾಮವನ್ನ ಕೊಂಡೊಯ್ಯಬೇಕು ಅನ್ನೋ ಕನಸಿಗೆ ಗ್ರಾಮಸ್ಥರೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
ಕೋಲಾರ: ರಾಮಭಕ್ತ, ಕೋಲಾರದ ಪಾಚಾಸಾಬಿ ಕನಸನ್ನು ಗ್ರಾಮಸ್ಥರು ನನಸು ಮಾಡುವ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯ ಮೆರೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಪಾಚಾಸಾಬಿ ಅವರು ರಾಮಕೋಟಿ ಬರೆದು ಶ್ರೀರಾಮನ ಸನ್ನಿದಾನ ಭದ್ರಾಚಲಂಗೆ ರಾಮಕೋಟಿ ನಾಮವನ್ನ ಕೊಂಡೊಯ್ಯಬೇಕು ಅನ್ನೋ ಕನಸಿಗೆ ಗ್ರಾಮಸ್ಥರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಪಾಚಾಸಾಬಿ, ಮುಸ್ಲಿಂ ಸಮುದಾಯದಲ್ಲಿ ಜನಿಸಿ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ, ರಾಮನಾಮವನ್ನು ಕೋಟಿ ಸಾರಿ ಬರೆದ ಬಂಡಾರವನ್ನು ಗ್ರಾಮಸ್ಥರ ಸಹಕಾರದಿಂದ ಭದ್ರಾಚಲಂಗೆ ಸಮರ್ಪಿಸಲು ಪ್ರಯಾಣ ಬೆಳೆಸಿದ್ದಾರೆ.
ನಿತ್ಯವೂ ರಾಮನ ಜಪಿಸುವ ಪಾಚಾಸಾಬ್ ಪಾಚಾಸಾಬ್, ನಿತ್ಯ ಶ್ರೀರಾಮನನ್ನೇ ಆರಾಧಿಸುತ್ತಿರುವ ಭಕ್ತ. ಶ್ರೀರಾಮನಾಮವನ್ನು ಕೋಟಿ ಸಾರಿ ಬರೆದು ರಾಮನ ಮೇಲೆ ಇದ್ದ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಕಲಿಯುಗದ ಮಹಾಪುರುಷ ಶ್ರೀರಾಮನ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿರುವ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಮುಸ್ಲಿಂ ಸಮುದಾಯದ ಪಾಚಾಸಾಬಿ ಎಲ್ಲಾ ಜಾತಿ ಒಂದೇ ಎಂಬ ಭಾವನೆಯಿಂದ ಶ್ರೀರಾಮನನ್ನು ಆರಾಧಿಸುತ್ತಾ ರಾಮನಿಗೆ ಪರಮಭಕ್ತನಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಪಾಚಾಸಾಬಿ “ಪಂಡಿತ ಪಾಚಾಸಾಬಿ” ಎಂದೇ ಚಿರಪರಿಚಿತರು.
ಕನ್ನಡ ಶಾಲೆಯ ಮೇಸ್ಟರ್ ಈ ಪಾಚಾಸಾಬ್ ಕನ್ನಡದಲ್ಲಿ ಹೈಸ್ಕೂಲ್ ಪಾಸಾಗಿ, ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಆಂಧ್ರ ಭದ್ರಾಚಲಂಗೆ ಹೋಗಬೇಕು ಎನ್ನುವುದು ಪಾಚಾಸಾಬ್ ಕೊನೆಯ ಆಸೆ ಆಂಧ್ರಪ್ರದೇಶದ ಭದ್ರಾಚಲಂನಲ್ಲಿರುವ ಶ್ರೀರಾಮನ ಪರಮ ಭಕ್ತರಾಗಿರುವ ಪಾಚಾ ಸಾಬ್ ತಾಮ್ರದ ತಗಡು ಹಾಗೂ ಪುಸ್ತಕಗಳಲ್ಲಿ ರಾಮನಾಮಗಳನ್ನು ಬರೆದಿದ್ದಾರೆ. 97 ವರ್ಷ ವಯಸ್ಸಾದರೂ, ಪ್ರತಿ ದಿನ ನಮಾಜ್ ಮಾಡಿ, ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಿದ್ದರು. ಇಂತಹ ಪಾಚಾ ಸಾಬಿ ಕನಸನ್ನ ಗ್ರಾಮಸ್ಥರು ನನಸು ಮಾಡಿದ್ದಾರೆ. ಮಿನಿ ಬಸ್ ಮಾಡಿ ಅವರೊಂದಿಗೆ ಭದ್ರಾಚಲಂಗೆ ತೆರಳಿದ್ದಾರೆ. ಪಾಚಾಸಾಬಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿ ರಾಮನಾಮವನ್ನು ಕಂಠದಲ್ಲಿ ಉಚ್ಚರಿಸುತ್ತಾ ನೀನೆ ರಾಮ, ನೀನೆ ಶ್ಯಾಮ, ನೀನೇ ಅಲ್ಲಾ ಎಂದು ತನ್ನಲ್ಲಿ ತಾನು ರಾಮನನ್ನು ಕಣ್ಣಲ್ಲಿ ಕಂಡು ರಾಮನಾಮವನ್ನು ಕೋಟಿ ಸಾರಿ ಬರೆದು ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ. ರಾಮನಾಮವನ್ನು ಕೋಟಿ ಸಾರಿ ಬರೆದಿದ್ದು, ಅವುಗಳನ್ನು ನನ್ನ ಮನೆಯಲ್ಲಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ರಾಮಕೋಟಿಯನ್ನು ಅಯೋಧ್ಯೆ ಅಥವಾ ಭದ್ರಾಚಲಂ ದೇವಸ್ಥಾನಕ್ಕೆ ತಲುಪಿಸಬೇಕು ಅನ್ನೋದು ನನ್ನ ಬಹು ವರ್ಷಗಳ ಭಯಕೆ ಎಂದು ಪಾಚಾಸಾಬಿ ತನ್ನ ಭಯಕೆ ಹೇಳಿಕೊಂಡಿದ್ದಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಮುಸ್ಲಿಂ ಆದರೂ ರಾಮನ ಭಕ್ತ, ರಾಮ ಕೋಟಿ ಬರೆದು ಸರ್ವಧರ್ಮ ಸಮನ್ವಯ ಸಾರುತಿರುವ ಶಿಕ್ಷಕ