
ಕೋಲಾರ, ಜೂನ್ 14: ವಾತಾವರಣದಲ್ಲಿನ ಏರುಪೇರು, ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಸೇರಿದಂತೆ ಹಲವು ಕಾರಣಗಳಿಂದ ಬೇಡಿಕೆ ಕಳೆದುಕೊಂಡಿದ್ದ ‘ಕಿಚನ್ ಕ್ವೀನ್’ ಟೊಮೆಟೊಗೆ (Tomato) ಇದೀಗ ಮತ್ತೆ ಭರ್ಜರಿ ಬೇಡಿಕೆ ಬಂದಿದೆ. ಕೋಲಾರ (kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅಬ್ಬರ ಜೋರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಎರಡು ಮೂರು ತಿಂಗಳಿಂದ ಟೊಮೆಟೊ ಬೆಲೆ ಕುಸಿದಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರಣದಿಂದ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮ ನೆಲಕಚ್ಚಿದ ಪರಿಣಾಮ ಟೊಮೆಟೊ ಬೆಲೆ ಕೂಡ ಕುಸಿದಿತ್ತು. ಅದರ ಜೊತೆಗೆ ಮಿತಿಮೀರಿದ ಬಿಸಿಲ ತಾಪಮಾನದಿಂದಾಗಿ ಟೊಮೆಟೊ ಬೆಳೆ ಹಾಳಾಗಿ ರೈತರು ಕಂಗಾಲಾಗಿದ್ದರು. ಆದರೆ ಈಗ ಟೊಮೆಟೊ ಸೀಸನ್ ಶುರುವಾಗಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಬೆಲೆ ಏರಿಕೆ ಕಂಡಿದೆ.
10ರಿಂದ 15 ರೂ ಬೆಲೆ ಇದ್ದ ಕೆಜಿ ಟೊಮೆಟೊ ಇದೀಗ 30 ರಿಂದ 40 ರೂ.ಗೆ ಏರಿಕೆಯಾಗಿದೆ. ಅಂದರೆ 150 ರಿಂದ 200 ರೂ ಇದ್ದ 15 ಕೆಜಿಯ ಒಂದು ಮೂಟೆ ಟೊಮೆಟೊ ಈಗ 500 ರಿಂದ 550 ರೂ.ಗೆ ಏರಿಕೆಯಾಗಿದೆ. ಪರಿಣಾಮ ಟೊಮೆಟೊ ಬೆಳೆದ ರೈತರು ಪುಲ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ
ಹೊರ ರಾಜ್ಯಗಳಲ್ಲಿ ಸ್ಥಳೀಯವಾಗಿ ಟೊಮೆಟೊ ಸಿಗುತ್ತಿದ್ದ ಕಾರಣ ಬೆಲೆ ತೀವ್ರ ಕುಸಿತ ಕಂಡಿತ್ತು. ಆದರೆ ಈಗ ಹೊರ ರಾಜ್ಯಗಳಿಂದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಬಂದಿದೆ. ದೆಹಲಿ, ನಾಸಿಕ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಜೂನ್ನಿಂದ ಸೆಪ್ಟೆಂಬರ್ವರೆಗೂ ಕೋಲಾರದಲ್ಲಿ ಟೊಮೆಟೊ ಸುಗ್ಗಿ ಹಬ್ಬ ಶುರುವಾಗಲಿದೆ. ಕಾರಣ ಹೊರ ರಾಜ್ಯಗಳಲ್ಲಿ ಮಳೆಯ ಪರಿಣಾಮ ಸ್ಥಳೀಯವಾಗಿ ಟೊಮೆಟೊ ಬೆಳೆ ಇರುವುದಿಲ್ಲ. ಹಾಗಾಗಿ ದೇಶದ ಬಹುತೇಕ ಎಲ್ಲಾ ರಾಜ್ಯಗಳ ವ್ಯಾಪಾರಸ್ಥರು ಟೊಮೆಟೊ ಖರೀದಿಗೆ ಕೂಡ ಕೋಲಾರದ ಮಾರುಕಟ್ಟೆ ಕಡೆ ಮುಖ ಮಾಡುತ್ತಾರೆ, ಹಾಗಾಗಿ ಸಹಜವಾಗಿಯೇ ಇಲ್ಲಿ ಬೇಡಿಕೆ ಹೆಚ್ಚಾಗುತ್ತದೆ.
ಇನ್ನು ಮೊದಲೆಲ್ಲಾ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯುವ ಟೊಮೆಟೊ ರಪ್ತಾಗುತ್ತಿತ್ತು. ಆದರೆ ಈಗ ದಕ್ಷಣ ಕರ್ನಾಟಕದ ಭಾಗದ ಎಲ್ಲಾ ಜಿಲ್ಲೆಯಲ್ಲಿ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲಾ ಜಿಲ್ಲೆಗಳಿಂದಲೂ ಟೊಮೆಟೊ ತಂದು ರೈತರು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ಉತ್ತಮ ಇಳುವರಿ ಕೂಡ ಬಂದರೆ ರೈತರಿಗೆ ಈ ಬಾರಿ ಟೊಮೆಟೊ ಸುಗ್ಗಿ ಅಂದರೆ ತಪ್ಪಾಗೋದಿಲ್ಲ. ಇನ್ನು ಎರಡು ಮೂರು ತಿಂಗಳು ಟೊಮೆಟೊಗೆ ಉತ್ತಮ ಬೆಲೆ ಇರಲಿದ್ದು, ಮುಂದಿನ ಒಂದು ತಿಂಗಳಲ್ಲಿ ಬೆಲೆ ಸಾವಿರ ಗಡಿದಾಟುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಟೊಮೆಟೊ ವ್ಯಾಪಾರಿಯಾದ ಮುನಿರೆಡ್ಡಿ.
ಇದನ್ನೂ ಓದಿ: ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ!
ಒಟ್ಟಾರೆ ಟೊಮೆಟೊ ರೈತರಿಗೆ ಅದೃಷ್ಟದ ಬೆಳೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಳ್ಳೆಯ ಬೆಲೆ ಬಂದರೆ ಅದೃಷ್ಟ, ಒಂದು ವೇಳೆ ಬೆಲೆ ಕೈಕೊಟ್ಟರೆ ಭಾರಿ ನಷ್ಟ ಎನ್ನುವಂತಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದಿನ ಎರಡು ಮೂರು ತಿಂಗಳು ಟೊಮೆಟೊ ಬೆಳೆದ ರೈತರಿಗೆ ಬಂಪರ್ ಲಾಭ ಸಿಗೋದ್ರಲ್ಲಿ ಎರಡು ಮಾತಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:59 pm, Sun, 14 June 26