AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Price: ಹೆಚ್ಚಿದ ಕೆಂಪು ಸುಂದರಿ ಬೆಲೆ ; ಸಂತಸದಲ್ಲಿ ರೈತರು

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಯ ಆಟ ಮತ್ತೆ ಆರಂಭವಾಗಿದೆ. ಕಳೆದರೆಡು ದಿನಗಳಿಂದ ಕೆಂಪು ಸುಂದರಿ‌ ದರ ಏರಿಕೆಗೊಳ್ಳುತ್ತಿದೆ. ಅದರಂತೆ ಕಳೆದ ವರ್ಷದಂತೆ ಈ‌ ವರ್ಷವೂ ಸಹ ಟೊಮೆಟೊ ಹವಾ‌ ಹೆಚ್ಚಾಗುವ ಸಾಧ್ಯತೆಯಿದ್ದು, ದರ ಏರಿಕೆ ರೈತರಲ್ಲಿ ಸಂತಸವನ್ನು ಮೂಡಿಸಿದೆ.

Tomato Price: ಹೆಚ್ಚಿದ ಕೆಂಪು ಸುಂದರಿ ಬೆಲೆ ; ಸಂತಸದಲ್ಲಿ ರೈತರು
ಹೆಚ್ಚಿದ ಕೆಂಪು ಸುಂದರಿ ಬೆಲೆ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 20, 2024 | 9:05 PM

Share
ಕೋಲಾರ, ಜು.20: ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರ(Kolar)ದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಟೊಮೆಟೊ (Tomato)ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ. ಇಷ್ಟು ದಿನ 200 ರಿಂದ 250 ರೂ.ವರೆಗೂ ಮಾರಾಟವಾಗುತ್ತಿದ್ದ ಟೊಮೆಟೊ, ಇವತ್ತು 15 ಕೆ.ಜಿಯ ಬಾಕ್ಸ್​​ಗೆ 900 ರಿಂದ 1200 ರೂ.ಗಳಿಗೆ ಹರಾಜಾಗಿದೆ. ಹೌದು ಕೋಲಾರದ ಕೆಆರ್​ಎಸ್​​​ ಟೊಮೆಟೊ ಮಂಡಿಗಳಲ್ಲಿ ಇವತ್ತು 900 ರಿಂದ. 1200ಬೆಲೆಗೆ ಮಾರಾಟವಾಗಿದೆ. ಕಳೆದ ಒಂದು ವಾರದಿಂದ ಕೆಂಪು ಸುಂದರಿಯ ಬೆಲೆ ಗಗನಕ್ಕೇರುತ್ತಿರುವುಂದರಿಂದ ಗ್ರಾಹಕರ ಜೇಬಿಗೆ ಕತ್ತರಿ‌ ಬೀಳುತ್ತಿದ್ದರೆ, ಇತ್ತ ರೈತರಲ್ಲಿ ಮಂದಾಹಸ ಮೂಡಿಸಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಅಂದರೆ ಸುಮಾರು 2000 ರಿಂದ 2700 ರವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ‌ ವರ್ಷ ಸಹ ಟೊಮೆಟೊ ಫಸಲು ಕಡಿಮೆ ಇರುವ ಕಾರಣ ಜೊತೆಗೆ ಇಷ್ಟು ದಿನ ತಾಪಮಾನ ಇದುದ್ದರಿಂದ ಟೊಮೆಟೊ ಅವಕ ಕಡಿಮೆ ಬರುತ್ತಿದೆ. ಇತ್ತೀಚೆಗೆ ಟೊಮೆಟೊಗೆ ವೈರಸ್​ ರೋಗ ಕಂಡು ಬರುತ್ತಿರುವುದರಿಂದ ಬೆಳೆ ಇಲ್ಲದೆ ಟೊಮೆಟೊ ಅವಕ ಕಡಿಮೆಯಾಗುತ್ತಿದೆ. ಟೊಮೆಟೊ ಬೆಲೆ ಏರಿಕೆ‌ ಇನ್ನು ಕೆಲ‌ ದಿನಗಳ ಕಾಲ ಮುಂದುವರೆಯಲಿದ್ದು, 2 ಸಾವಿರಕ್ಕೆ ಹೋದರೂ ಆಶ್ವರ್ಯವಿಲ್ಲ.
ಇನ್ನು ಕೋಲಾರ ಮತ್ತು‌ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಜ್​ನಲ್ಲಿ ಅತಿ‌ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಿದ್ದರು.‌ ಆದ್ರೆ, ಇತ್ತೀಚಿನ ತಾಪಮಾನ, ಮಳೆ ಮತ್ತು ವೈರಸ್ ಹವಾಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಅವಕ ಕಡಿಮೆಯಾಗಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಇನ್ನು ಕಷ್ಟುಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದು, ಇದರಿಂದ ಅವಕ ಕಡಿಮೆ ಬರುತ್ತಿದೆ.
ಈ ಸೀಜ್​ನಲ್ಲಿ ಸರಾಸರಿ ಸುಮಾರು 1ಲಕ್ಷ ಬಾಕ್ಸ್ ಟೊಮೆಟೊ ಬರುತ್ತಿತ್ತು. ಆದ್ರೆ, ಇವತ್ತು ಸುಮಾರು 55,274 ಸಾವಿರ‌ ಬಾಕ್ಸ್ ಮಾತ್ರ ಬರುತ್ತಿದೆ.‌ ಕಳೆದ ವರ್ಷ 76,207 ಸಾವಿರ ಬಾಕ್ಸ್ ಬಂದಿತ್ತು. ಮೊದಲು ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ‌ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತಿತ್ತು.‌ ಆದ್ರೆ, ಈಗ ಬರುತ್ತಿಲ್ಲ. ಇನ್ನು ಜುಲೈ ಮತ್ತು ಆಗಸ್ಟ್ ತಿಂಗಳವರೆಗೂ ಟೊಮೆಟೊ ಸೀಜನ್‌ ಇರುವುದರಿಂದ ಟೊಮೆಟೊ ಬೆಲೆ ಏರಿಕೆಯಾಗುವ ಸಂಭವವಿದೆ.
ಇನ್ನು  ಕೋಲಾರದ ಟೊಮೆಟೊಗೆ  ದೆಹಲಿ, ಒರಿಸ್ಸಾ, ಗುಜರಾಜ್​, ಪಶ್ಚಿಮ ಬಂಗಾಳ, ರಾಜಾಸ್ಥಾನ್​,ಹೆಚ್ಚಿನ ಬೇಡಿಕೆ ಇರುವುದರಿಂದ ಕೆಂಪು ಸುಂದರಿಯ ಆಟ ಇನ್ನು ಮುಂದುವರೆಯಲಿದೆ. ಒಟ್ಟಾರೆ ಕೆಂಪು ಸುಂದರಿ ದಿನದಿಂದ ದಿನಕ್ಕೆ ತನ್ನ ಬೆಲೆ ಹೆಚ್ಚಿಸಿಕೊಳ್ಳುವ ಜೊತೆಗೆ ತನ್ನ ಆಟವನ್ನು ಆರಂಭಿಸಿದ್ದು, ಇದೇ ರೀತಿ ದರ ಏರಿಕೆಯಾದರೆ ರೈತರಲ್ಲಿ ಸಂತಸ ಮೂಡಿದರೆ, ಗ್ರಾಹಕರಲ್ಲಿ ತಳಮಳ ಉಂಟು ಮಾಡುವುದರಲ್ಲಿ ಯಾವುದೇ‌ ಅನುಮಾನವಿಲ್ಲ. ಆದರೆ, ಟೊಮೆಟೊ ಬೆಲೆ ಏರಿಕೆ ಜೊತೆಗೆ ಟೊಮೆಟೊ ಬೆಳೆದ ರೈತರಿಗೂ ಒಂದಷ್ಟು ಹಣ ಸಿಕ್ಕರೆ ರೈತರು ಸಂತೋಷಪಡುತ್ತಾರೆ ಎಂದು ರೈತರು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ