Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಬಟನ್ ರೋಸ್ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ ಹೊಸೂರು ಗ್ರಾಮದ ರೈತ

Koppal News; ರೈತ ನಿಂಗಪ್ಪ, ದೇವನಹಳ್ಳಿ ಹತ್ತಿರ ಇರುವ ವೆಂಕಟಾಪುರ ಗ್ರಾಮದಲ್ಲಿ ಮಾರಾಟ ಮಾಡಲಾಗುತ್ತಿದ್ದ ಗ್ಲ್ಯಾಡಿಯೇಟರ್‌ ತಳಿಯ ಬಟನ್‌ ರೋಸ್‌ ಪ್ರತಿ ಸಸಿಗೆ 14 ರೂಪಾಯಿಯಂತೆ ಒಟ್ಟು 2400 ಸಸಿಗಳನ್ನು ಖರೀದಿಸಿ, ನಾಟಿ ಮಾಡಿದ್ದಾರೆ. ಪರಿಣಾಮವಾಗಿ ಭರ್ಜರಿ ಆದಾಯ ಗಳಿಸಿದ್ದಾರೆ.

ಕೊಪ್ಪಳ: ಬಟನ್ ರೋಸ್ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ ಹೊಸೂರು ಗ್ರಾಮದ ರೈತ
ರೈತ ನಿಂಗಪ್ಪ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Ganapathi Sharma

Updated on: Aug 04, 2023 | 4:45 PM

ಕೊಪ್ಪಳ: ಸತತ ಮೂರು ದಶಕಗಳ‌ ಕಾಲ ಸಾಂಪ್ರದಾಯಿಕ ಬೆಳೆಗಳಲ್ಲಿ ಕೃಷಿ‌ ಮಾಡಿಕೊಂಡಿದ್ದ ರೈತ, ಸೂಕ್ತ ಆದಾಯ ಗಳಿಸದ ಕಾರಣ ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿ ವಾರ್ಷಿಕ ಲಕ್ಷ ಲಕ್ಷ ಆದಾಯ ಪಡೆದು ಗಮನ ಸೆಳೆದಿದ್ದಾರೆ. ಹೌದು, ತಮಗಿರುವ 2 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಬಟನ್ ರೋಸ್ (Button Rose) ಬೆಳೆದು ಯಶಸ್ವಿಯಾಗಿರುವ ರೈತನೇ ಕೊಪ್ಪಳ (Koppal) ತಾಲೂಕಿನ ಹೊಸೂರು ಗ್ರಾಮದ ನಿಂಗಪ್ಪ. 30 ವರ್ಷಗಳ ಕಾಲ ವ್ಯವಸಾಯದಲ್ಲಿ ಕಾಲ ಕಳೆದ ರೈತ ನಿಂಗಪ್ಪ 2 ಎಕರೆಯಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಇನ್ನೀತರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇಳುವರಿ ಕೊರತೆ, ಬೆಂಬಲ ಬೆಲೆ ಸೇರಿದಂತೆ ವಿವಿಧ ಕಾರಣಗಳಿಂದ ಆದಾಯವೂ ಅಷ್ಟಕ್ಕಷ್ಟೆ ಇತ್ತು. ಹೀಗಾಗಿ ಅವರ ಪುತ್ರ ಯಮನೂರಪ್ಪ ಲೇಬಗೇರಿ ಗ್ರಾಮದ ರೈತರೊಬ್ಬರ ಬಟನ್ ರೋಸ್ ಕೃಷಿ ಕಂಡು ತಾವು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.

14 ರೂಪಾಯಿಯಂತೆ ಸಸಿಗಳ ಖರೀದಿ

ರೈತ ನಿಂಗಪ್ಪ, ದೇವನಹಳ್ಳಿ ಹತ್ತಿರ ಇರುವ ವೆಂಕಟಾಪುರ ಗ್ರಾಮದಲ್ಲಿ ಮಾರಾಟ ಮಾಡಲಾಗುತ್ತಿದ್ದ ಗ್ಲ್ಯಾಡಿಯೇಟರ್‌ ತಳಿಯ ಬಟನ್‌ ರೋಸ್‌ ಪ್ರತಿ ಸಸಿಗೆ 14 ರೂಪಾಯಿಯಂತೆ ಒಟ್ಟು 2400 ಸಸಿಗಳನ್ನು ಖರೀದಿಸಿ, ನಾಟಿ ಮಾಡಿದ್ದಾರೆ. ಬಳಿಕ ಬಟನ್ ರೋಸ್ ಗಿಡಗಳಲ್ಲಿ ಹೂ ಕಾಣಿಸಿಕೊಳ್ಳುವವರೆಗೂ ಸಕಾಲಕ್ಕೆ ಉಪಚಾರ ಮಾಡಿದ್ದಾರೆ. ಗಿಡಗಳು‌ ಕೂಡ ಸಮೃದ್ಧವಾಗಿ ಹೂಗಳನ್ನು ಬಿಡುತ್ತಿವೆ. ಇವರ ಕೃಷಿಗೆ ಪುತ್ರ ಯಮನೂರಪ್ಪ ಖಾಸಗಿ ಕಂಪನಿ ಕೆಲಸದ ಜತೆಗೆ ಕೈ ಜೋಡಿಸುತ್ತಿದ್ದಾರೆ.

ದಿನನಿತ್ಯ ಆದಾಯಕ್ಕೆ ದಾರಿ

1 ಎಕರೆ ಜಮೀನಿನಲ್ಲಿ ಪ್ರತಿ 2 ದಿನಕೊಮ್ಮೆ 10 ಕೆ.ಜಿ ಬಟನ್ ರೋಸ್ ಬೆಳೆದು ಸಮೀಪದ ಕೊಪ್ಪಳ ತಾಲೂಕಿನ ಇರಕಲ್ಲಗಡ, ಬೇವೂರು ಹಾಗೂ ಹೊಸಪೇಟೆಯಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ 110ರೂ.ನಂತೆ ಒಟ್ಟು ಪ್ರತಿ ತಿಂಗಳಿಗೆ 13,200ರೂ. ಆದಾಯ ಗಳಿಸುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಬೇಡಿಕೆಯಿದ್ದು, ಒಂದು ಕೆ.ಜಿಗೆ 200ರೂ.ನಂತೆ ಮಾರಾಟವಾಗಿದೆ ಎನ್ನುತ್ತಾರೆ ರೈತ ನಿಂಗಪ್ಪ. ಕಳೆದ ಆರು ತಿಂಗಳಲ್ಲಿ 1,58,400ರೂ. ಆದಾಯ ಪಡೆದಿದ್ದು, ಅದರಲ್ಲಿ 65,000ರೂ. ಖರ್ಚು ಭರಿಸಲಾಗಿದೆ. ಇವರ ಈ ಕೃಷಿಗೆ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ‌ಮೂಲಕ 206 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು 63,654 ರೂ‌. ಕೂಲಿ ಮೊತ್ತ ಜಮೆ ಮಾಡಿದ್ದ, ಇದರಲ್ಲಿ ಇವರ ಕುಟುಂಬಕ್ಕೆ 24,102 ರೂ. ಮೊತ್ತ, 23000 ರೂ. ಸಾಮಗ್ರಿ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗಿದೆ.

ಇದನ್ನೂ ಓದಿ: ಅಧಿಕ ಮಾಸದ ಹುಣ್ಣಿಮೆ ಹಿನ್ನೆಲೆ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ತರಹೇವಾರಿ ಬೆಳೆ ಬೆಯುತ್ತಿದ್ದರೂ, ಸಾಂಪ್ರದಾಯಿಕ ಬೆಳೆಗಳಿಂದ ಉತ್ತಮ ಆದಾಯ ಸಿಗುತ್ತಿರಲಿಲ್ಲ. ನರೇಗಾ ಯೋಜನೆ ಸಹಾಯದಿಂದ ಬೆಳೆಯುತ್ತಿರುವ ಬಟನ್ ರೋಸ್ ನಿಂದ ನಿತ್ಯವೂ ವಹಿವಾಟು ಆಗುತ್ತಿದ್ದು, ಕೃಷಿ ‌ಕೆಲಸ ಹಾಗೂ ಕುಟುಂಬಕ್ಕೆ ಅನುಕೂಲವಾಗಿದೆ ಎನ್ನುತ್ತಾರೆ ರೈತ. ಇನ್ನು ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ಮೂಲಕ ಬಟನ್ ರೋಸ್ ಕೃಷಿಗೆ ಅನುದಾನ ಒದಗಿಸಲಾಗಿದ್ದು, ವಿವಿಧ ಬೆಳೆಗಳಿಂದ ನಷ್ಟ ಅನುಭವಿಸುತ್ತಿದ್ದ ರೈತ ನಿಂಗಪ್ಪ ಅವರಿಗೆ ಲಾಭದಾಯಕವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ