ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದ್ರು, ಒಬ್ಬ ಮುಸ್ಲಿಂ ವಿರೋಧಿಸಿಲ್ಲ: ರಾಯರೆಡ್ಡಿ
ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ಮುಸ್ಲಿಂ ಸಮುದಾಯದ ಜಮೀನು ಹಕ್ಕು, ಶಿಕ್ಷಣ ಹಾಗೂ ರಾಜಕೀಯ ಸ್ಥಿತಿಗತಿಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದ್ರು ಒಬ್ಬ ಮುಸಲ್ಮಾನ ಕೂಡ ವಿರೋಧ ಮಾಡಿಲ್ಲ ಎಂದು ಹೇಳಿದ್ದಾರೆ.
ಕೊಪ್ಪಳ, ಜನವರಿ 26: ಬಾಬ್ರಿ ಮಸೀದಿ ಒಡೆದು ರಾಮಮಂದಿರ ನಿರ್ಮಾಣ ಮಾಡಿದರು ಒಬ್ಬ ಮುಸಲ್ಮಾನ ಕೂಡ ವಿರೋಧ ಮಾಡಿಲ್ಲ. ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ. ನಗರದಲ್ಲಿ ವಸತಿ ಇಲಾಖೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನ ಒಡೆದು ಬೇರೆ ಏನೋ ಕಟ್ಟಿದರೆ ಸುಮ್ಮನೇ ಇರುತ್ತೀವಾ? ಆದರೆ ರಾಜಕೀಯ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಮುಸ್ಲಿಮರಿಗೆ ಜಮೀನು ಇಲ್ಲ, ಬಹುತೇಕರು ಕಾರ್ಮಿಕರು. ಹಿಂದೂ, ಮುಸ್ಲಿಂ ಎಂಬ ಭೇದಭಾವ ಸೃಷ್ಟಿಸುವುದು ಸರಿಯಲ್ಲ. ಮುಸ್ಲಿಮರು ಸಹ ನಮ್ಮ ದೇಶದವರೇ, ಮಂಗಳ ಗ್ರಹದಿಂದ ಬಂದಿಲ್ಲ. ತುಷ್ಟೀಕರಣ ಮಾಡಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮುಸ್ಲಿಂ ಹುಡುಗಿಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹಿಂದೂ, ಮುಸ್ಲಿಂ ಒಂದಾಗಿ ಹೋಗಬೇಕು, ಇಲ್ಲದಿದ್ದರೆ ದೇಶ ಇಬ್ಭಾಗವಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸರ್ಕಾರದಲ್ಲಿ ಹಣ ಇಲ್ಲ ಅಂತಾ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಸ್ವಲ್ಪ ಕಷ್ಟ ಇದೆ ಅಂತ ಹೇಳಿದರೆ, ಹಣದ ಕೊರತೆ ಅಂತಾ ಹೇಳುತ್ತಾರೆ. ಬೊಮ್ಮಾಯಿ ಸಿಎಂ ಆದಾಗ 35,000 ಕೋಟಿ ರೂ. ಬಿಲ್ ಬಾಕಿ ಇತ್ತು. ಆ ಬಿಲ್ ನಾವು ನೀಡಲೇಬೇಕಿದೆ, ಹೀಗಾಗಿ ಸ್ವಲ್ಪ ತೊಂದರೆಯಾಗಿತ್ತು. ಆದರೆ ಇದೀಗ ಎಲ್ಲವು ಸರಿಯಾಗುತ್ತಿದೆ ಎಂದರು.
ಜಾತಿ ಮಾಡಿದರೆ ನಿರ್ನಾಮ ಆಗ್ತೇನೆ: ಜಮೀರ್ ಅಹ್ಮದ್ ಖಾನ್
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದ್ದು, ನನ್ನ ಮಕ್ಕಳು, ಮೊಮ್ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಯಾವತ್ತೂ ಜಾತಿ ಮಾಡಲ್ಲ, ಜಾತಿ ಮಾಡಿದರೆ ನಿರ್ನಾಮ ಆಗ್ತೇನೆ. ಜಾತಿ ಬಗ್ಗೆ ಯೋಚನೆ ಮಾಡಲ್ಲ, ನಾನು ಇರೋದೇ ಬಡವರಿಗೆ. ಇಸ್ಲಾಂನಲ್ಲಿ ಜಾತಿಭೇದ ಮಾಡು ಅಂತಾ ಹೇಳಿಲ್ಲ. ಬಿಜೆಪಿಯವರು ಜಾತಿಭೇದ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್ಗೆ ಡಿಕೆ ಶಿವಕುಮಾರ್ ಪತ್ರ
ನಾನು ಮೊದಲು ಕನ್ನಡಿಗ, ನಂತರ ಮುಸ್ಲಿಂ. ಜಾತಿ ಮಾಡುವುದಾದರೆ ಯಾರೂ ರಾಜಕೀಯಕ್ಕೆ ಬರಬೇಡಿ. ಜಾತಿ ಮಾಡಿದರೆ ಅವರು ಮತ್ತು ಅವರ ಮಕ್ಕಳು ಹುಳ ಬಿದ್ದುಸಾಯ್ತಾರೆ. ವಕ್ಫ್ ವಿಚಾರವಾಗಿ ಬಿಜೆಪಿಯವರು ಏನೇನೋ ಮಾಡಿಬಿಟ್ಟರು. ಹದಿನೇಳು ಸಾವಿರ ಎಕರೆ ವಕ್ಫ್ ಭೂಮಿ ಕಬಳಿಕೆಯಾಗಿದೆ. ರಾಜ್ಯದಲ್ಲಿ ಎಲ್ಲಾ ಜಾತಿಯವರು ಪ್ರೀತಿಯಿಂದ ಇದ್ದಾರೆ. ಆದರೆ ಬಿಜೆಪಿಯವರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಹಿಂದೂ ಬೇಕಿಲ್ಲ, ಮುಸ್ಲಿಮರು ಬೇಡ ಎಂದು ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.