ದೂರು ಸಲ್ಲಿಸಿದರೂ ನಿಮ್ಮ ಸಮಸ್ಯೆ ಇತ್ಯರ್ಥವಾಗಿಲ್ಲವೇ; ಚಿಂತೆ ಬೇಡ, ನೂತನ ಸಿಸ್ಟಮ್ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾದ ಕೊಪ್ಪಳ ಜಿಲ್ಲಾ ಪೊಲೀಸ್
ನೀವು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕವೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂಬ ಚಿಂತೆ ಬೇಡ. ನ್ಯಾಯಯುತವಾದ ಸಮಸ್ಯೆಯಿದ್ದಲ್ಲಿ "ಪಿಡ್ ಬ್ಯಾಕ್ ಸಿಸ್ಟಮ್' ಮೂಲಕ ಬಗೆಹರಿಸುವ ಕಾರ್ಯಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.
ಕೊಪ್ಪಳ: ಇನ್ನೂ ಮುಂದೆ ನೀವು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕವೂ ನಿಮ್ಮ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದರೇ ಇದೀಗ ಆ ಚಿಂತೆ ಬೇಡ. ನ್ಯಾಯಯುತವಾದ ಸಮಸ್ಯೆಯಿದ್ದಲ್ಲಿ “ಪಿಡ್ ಬ್ಯಾಕ್ ಸಿಸ್ಟಮ್‘ ಮೂಲಕ ಬಗೆಹರಿಸುವ ಕಾರ್ಯಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ (Koppal District Police) ಇಲಾಖೆ ಮುಂದಾಗಿದೆ. ಹೌದು, ಇಂತಹದೊಂದು ಹೊಸ ಸಿಸ್ಟಮ್ನ್ನು ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಜನರಿಗಾಗಿ ತೆರೆದಿದೆ. ಕಳೆದ 10 ದಿನಗಳ ಹಿಂದೆ ಈ ಯೋಜನೆ ಆರಂಭವಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ದೂರು ಸ್ವೀಕರಿಸಲು ವಿನಾಕಾರಣ ಹಿಂದೇಟು ಹಾಕುತ್ತಾರೆ ಎಂಬ ದೂರುಗಳಿದ್ದವು. ಇಂತಹ ಆರೋಪಗಳಿಗೆ ಇನ್ನು ಮುಂದೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಹೊಸ ಸಿಸ್ಟಮ್ನ್ನ ಜನರಿಗಾಗಿ ತೆರೆಯುವ ಮೂಲಕ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಕಟಿಬದ್ದರಾಗಿದ್ದಾರೆ. ಇನ್ನು ಮುಂದೆಯಾದರೂ ಸಾರ್ವಜನಿಕರ ಆರೋಪಗಳಿಗೆ ನ್ಯಾಯ ಸಿಗುವ ವಿಶ್ವಾಸ ವ್ಯಕ್ತವಾಗಿದೆ.
ಇದನ್ನೂ ಓದಿ:Hubballi News: ತಾನಿದ್ದ ರೂಂ ನಲ್ಲಿಯೇ ನೇಣಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ
ಏನಿದು ಪಿಡ್ ಬ್ಯಾಕ್ ಸಿಸ್ಟಮ್?
ಜಿಲ್ಲೆಯು 7 ತಾಲೂಕುಗಳನ್ನು ಒಳಗೊಂಡು, ಒಟ್ಟು 16 ಪೊಲೀಸ್ ಠಾಣೆಗಳಿದ್ದು, ಎರಡು ವಿಶೇಷ ಘಟಕಗಳಿವೆ. ಈ ಎಲ್ಲ ಠಾಣೆಗಳಿಗೆ ದಿನದ 24 ಗಂಟೆ ಆಗಮಿಸುವ ಸಾರ್ವಜನಿಕರ ಕುರಿತು ರಿಜಿಸ್ಟರ್ ಮೆಂಟನ್ ಮಾಡಲಾಗುತ್ತಿದೆ. ಯಾರು, ಯಾವ ಸಮಯಕ್ಕೆ, ಯಾವ ಕೆಲಸಕ್ಕೆ ಬಂದು ಹೋದರೂ ಎಂಬ ವಿವರಗಳನ್ನು ಅವರ ಮೊಬೈಲ್ ನಂಬರ್ ಸಮೇತ ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಈ ದಾಖಲಾತಿಗಳನ್ನು ಆಯಾ ಪೊಲೀಸ್ ಠಾಣೆಯವರು ಜಿಲ್ಲಾ ಪೊಲೀಸ್ ಇಲಾಖೆಗೆ ದಿನನಿತ್ಯ ಕಳುಹಿಸಿಕೊಡುತ್ತಾರೆ. ಇತ್ತ ಈ ಯೋಜನೆ ಸಾಕಾರಕ್ಕಾಗಿ ಇಲಾಖೆಯಿಂದ ಇಬ್ಬರು ಸಿಬ್ಬಂದಿಯನ್ನು ಎಸ್ಪಿ ಕಚೇರಿಯಲ್ಲಿ ನಿಯೋಜಿಸಲಾಗಿದೆ.
ಈ ಸಿಬ್ಬಂದಿ ರಿಜಿಸ್ಟರ್ ಪ್ರಕಾರ ಠಾಣೆಗೆ ಭೇಟಿ ನೀಡಿದವರಿಗೆ ರ‍್ಯಾಂಡಮ್ ಆಗಿ ದಿನಕ್ಕೆ 20 ಜನಕ್ಕೆ ಮರು ಕರೆ ಮಾಡಿ ನಿಮ್ಮ ದೂರು ಬಗೆಹರಿದಿದೆಯೇ? ಇಲ್ಲವೋ..? ನಿಮ್ಮ ಸಮಸ್ಯೆ ಏನಿತ್ತು, ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೇ ಮತ್ತೆ ಸಂಬಂಧಿಸಿದ ಪೊಲೀಸ್ ಠಾಣೆ ಸಂಪರ್ಕಿಸಿ, ತ್ವರಿತವಾಗಿ ದೂರು ವಿಲೇವಾರಿ ಮಾಡಲು ಸೂಚಿಸುತ್ತಾರೆ. ಇದರಲ್ಲಿ ನ್ಯಾಯಯುತ, ಸಾರ್ವಜನಿಕ ಹಿತಾಸಕ್ತಿ ದೂರುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಯೋಜನೆ ಸಹಕಾರದಿಂದ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ತ್ವರಿತ ದೂರಿಗೆ ಆದ್ಯತೆ ಸಿಗುತ್ತಿದೆ. ನಿಜವಾದ ಸಂತ್ರಸ್ಥರಿಗೆ ಪೊಲೀಸ್ ಠಾಣೆಗಳಲ್ಲಿ ನ್ಯಾಯ ದೊರಕುತ್ತಿದೆ. ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಅಮಾಯಕರಿಗೆ ಅನ್ಯಾಯ ಮಾಡಿದರೂ ಈ ಯೋಜನೆಯಿಂದ ಗೊತ್ತಾಗಲಿದೆ.
ಇದನ್ನೂ ಓದಿ:Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್ ಕಹಾನಿ; ‘ಬ್ಲೈಂಡ್’ ಚಿತ್ರದ ಪ್ಲಸ್ ಏನು? ಮೈನಸ್ ಏನು?
ಉತ್ತಮ ಸೇವೆ ಸಲ್ಲಿಸಿದವರಿಗೆ ರ‍್ಯಾಕಿಂಗ್
ಇನ್ನು ದಿನನಿತ್ಯ ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಸೌಹಾರ್ದತೆಯಿಂದ ಮಾತನಾಡಿ, ನ್ಯಾಯಯುತ ಸಮಸ್ಯೆಗಳಿದ್ದರೇ ದೂರು ಸ್ವೀಕರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ಉತ್ತಮ ಕೆಲಸ ಮಾಡುತ್ತಿರುವುದು ಪಿಡ್ ಬ್ಯಾಕ್ ಸಿಸ್ಟಮ್ ಮೂಲಕ ಗಮನಕ್ಕೆ ಬಂದರೇ ಅಂತಹ ಪೊಲೀಸ್ ಠಾಣೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ರ‍್ಯಾಂಕಿಂಗ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಕೆಲವು ದಿನಗಳ ನಂತರ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಠಾಣೆಗಳನ್ನು ಗುರುತಿಸಿ, ಪ್ರಶಂಸನಾ ಪತ್ರ ಸಹ ಕೊಡುವುದಕ್ಕೆ ಸಿದ್ದತೆ ನಡೆಸಲಾಗಿದೆ.
ಸದರಿ ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿರುವ ಯತೇಚ್ಛ ದೂರುಗಳು ಬಂದು, ಅವು ರುಜುವಾತಾದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿಯೇ ಸದ್ಯ ಫೀಡ್ ಬ್ಯಾಕ್ ಸಿಸ್ಟಮ್ ಬಗ್ಗೆ ಇಲಾಖೆಯಲ್ಲೂ ಅರಿವು ಬಂದಿದೆ. ಅಲ್ಲದೇ ಜನಸಮಾನ್ಯರಿಗೂ ನ್ಯಾಯ ಸಿಗುವಂತಾಗುತ್ತಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ