
ಕೊಪ್ಪಳ, ನ.27: ಖಾಸಗಿ ಸೋಲಾರ್ ಕಂಪನಿಯ ಹೈಟೆನ್ಶನ್ ವಿದ್ಯುತ್ ಕಂಬ ಅಳವಡಿಕೆಗೆ ಜಮೀನು ನೀಡಲು ನಿರಾಕರಿಸಿದ ಕಾರಣಕ್ಕೆ ಎಂಟು ಮಂದಿ ರೈತರ ವಿರುದ್ಧ ಪೊಲೀಸ್ ದೂರು ದಾಖಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಶುಕ್ರವಾರ (ನವೆಂಬರ್ 27) ನಡೆದಿದೆ. ತಮ್ಮ ವಿರುದ್ಧವೇ ಕೇಸ್ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ರೈತ ಕುಟುಂಬಸ್ಥರು ಜಮೀನಿನಲ್ಲೇ ಗಳಗಳನೆ ಅತ್ತು ಕಣ್ಣೀರು ಹಾಕುತ್ತಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರ ಗ್ರಾಮದ ಚೂರಿ ಹಾಗೂ ಸೊಟ್ನಾರ್ ಎಂಬ ಎರಡು ರೈತ ಕುಟುಂಬಗಳಿಗೆ ಸೇರಿದ ಜಮೀನಿನಲ್ಲಿ ಖಾಸಗಿ ಸೋಲಾರ್ ಕಂಪನಿಯಾದ ‘ಟೊರೆಂಟೋ’ ಕಂಪನಿಯು 220 ಕೆವಿ ಸ್ಟೇಶನ್‌ನ ಮೂರು ಹೈಟೆನ್ಶನ್ ವಿದ್ಯುತ್ ಕಂಬಗಳನ್ನು ಅಳವಡಿಸಲು ಮುಂದಾಗಿತ್ತು. ಕಾಮಗಾರಿಗಾಗಿ ಕಂಪನಿ ಸಿಬ್ಬಂದಿ ಜಮೀನಿಗೆ ಜೆಸಿಬಿ ತಂದಿದ್ದರು.
ಯಾವುದೇ ಕಾರಣಕ್ಕೂ ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಹಾಕಲು ಬಿಡುವುದಿಲ್ಲ ಎಂದು ರೈತರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕಂಪನಿ ಸಿಬ್ಬಂದಿ ಜಮೀನಿನಲ್ಲೇ ಜೆಸಿಬಿ ಬಿಟ್ಟು ತೆರಳಿದ್ದು, ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬೇವೂರ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ರೈತರ ವಿರುದ್ಧ ದೂರು ದಾಖಲಿಸಿದ್ದಾರೆ. ಮುದಕಪ್ಪ ಚೂರಿ, ವೀರೇಶ್ ಚೂರಿ, ಶಿವು ಚೂರಿ, ಶಿವಪುತ್ರಪ್ಪ ಚೂರಿ, ಮಂಗಲೇಶಪ್ಪ ಸೊಟ್ನಾರ್, ನೀಲಪ್ಪ, ಮಂಜು ಹಾಗೂ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಮಂಡಳಿ ಅಧಿಕಾರಿಗಳ ಯಡವಟ್ಟು: ವಿಜಯನಗರದ ಹಂಪಿ ನಗರದಲ್ಲಿ ಕಾವೇರಿ ನೀರಿಗೆ ಸೇರಿತು ಕೊಳಚೆ ನೀರು
ಜಮೀನು ಕಳೆದುಕೊಳ್ಳುವ ಭೀತಿಯ ಜೊತೆಗೆ ಈಗ ಪೊಲೀಸ್ ಕೇಸ್ ಕೂಡ ದಾಖಲಾಗಿರುವುದರಿಂದ ಕಂಗಾಲಾದ ಮಂಗಳೂರ ಗ್ರಾಮದ ಚೂರಿ ಮತ್ತು ಸೊಟ್ನಾರ್ ಕುಟುಂಬ ಸದಸ್ಯರು ಕಣ್ಣೀರಿಡುತ್ತಾ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. “ನಮ್ಮ ಕಷ್ಟ ಕೇಳಲು ಯಾವ ರಾಜಕಾರಣಿಯೂ ನಮ್ಮ ಸಹಾಯಕ್ಕೆ ಬಂದಿಲ್ಲ. ನಾವು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಜಮೀನಿನಲ್ಲಿ ಕಂಬ ಹಾಕಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಘಟನೆ ಕುಕನೂರ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ