
ಕೊಪ್ಪಳ, ಏಪ್ರಿಲ್ 11: ‘ಪ್ರೀತಿ ಕುರುಡು’ ಎನ್ನುತ್ತಾರೆ. ಹಾಗೆಯೇ ‘ಪ್ರೀತಿಗೆ ಧರ್ಮದ ಹಂಗಿಲ್ಲ’ ಎಂಬುದನ್ನು ಕೊಪ್ಪಳದ (Koppal) ಜೋಡಿಯೊಂದು ಸಾಬೀತುಮಾಡಿದೆ. ಆದರೆ, ಅದುವೇ ಈಗ ಅವರ ಜೀವಭಯಕ್ಕೂ ಕಾರಣವಾಗಿದೆ. ಬಸ್‌ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿರುವ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ನವಜೋಡಿ ಈಗ ರಕ್ಷಣೆಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಮೆಟ್ಟಿಲೇರಿದ್ದಾರೆ.
ಕನಕಗಿರಿ ತಾಲೂಕಿನ ಹುಲಿಹೈದರ್ ನಿವಾಸಿ ಕೇಶವ್ ಹಾಗೂ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ತಸ್ಲೀಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಸ್‌ನಲ್ಲಿ ಓಡಾಡುವಾಗ ಇವರ ಪರಿಚಯವಾಗಿತ್ತು. ಇತ್ತ ತಸ್ಲೀಮಾ ಮನೆಯಲ್ಲಿ ಆಕೆಗೆ ಬೇರೆಯವರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಈ ಜೋಡಿ ಕನಕಗಿರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಮುಸ್ಲಿಂ ಯುವತಿ ತಸ್ಲೀಮಾ ಹಣೆಗೆ ಕುಂಕುಮ ಇಟ್ಟು, ಅರಿಶಿಣ ಕೊಂಬು ಕಟ್ಟಿಕೊಂಡು ಹಿಂದೂ ಧರ್ಮದ ಸಂಪ್ರದಾಯದಂತೆ ಕೇಶವ್ ಕೈ ಹಿಡಿದಿದ್ದಾರೆ.
ಮದುವೆಯಾದ ಬೆನ್ನಲ್ಲೇ ತಮಗೆ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಭೀತಿಯಲ್ಲಿರುವ ಈ ಜೋಡಿ, ವಕೀಲರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಮ್ಮ ಮನೆಯವರಿಂದ ಏನಾದರೂ ತೊಂದರೆಯಾಗಬಹುದು ಎಂಬ ಭಯವಿದೆ. ಯಾರೂ ನಮಗೆ ಏನೂ ಮಾಡಬಾರದು, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಬೇಕು’ ಎಂದು ತಸ್ಲೀಮಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್ಗೆ ಟ್ವಿಸ್ಟ್: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ
ಲವ್ ಜಿಹಾದ್‌ನಂತಹ ಪ್ರಕರಣಗಳ ಕುರಿತು ಭಾರಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಈ ಅನ್ಯ ಕೋಮಿನ ವಿವಾಹ ನೆರವೇರಿದ್ದು, ಕೊಪ್ಪಳದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Sat, 11 April 26