ಅತ್ತ ಸಿಎಂ ಕುರ್ಚಿಗಾಗಿ ಗುದ್ದಾಟ: ಇತ್ತ ಸಚಿವ ಸ್ಥಾನಕ್ಕಾಗಿ ಶಾಸಕರ ನಡುವೆ ಆಂತರಿಕ ಯುದ್ಧ
ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಹಿನ್ನೆಲೆ, ಇತ್ತ ಕೊಪ್ಪಳ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಹಾಲಿ ಸಚಿವ ಶಿವರಾಜ್ ತಂಗಡಗಿ, ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನಡುವೆ ಆಂತರಿಕ ಸಮರ ನಡೆಯುತ್ತಿದೆ. ಕೊಪ್ಪಳದಿಂದ ಯಾರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಕೊಪ್ಪಳ, ನವೆಂಬರ್ 21: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿದೆ. ಕಾಂಗ್ರೆಸ್ (congress) ಸರ್ಕಾರ ಎರಡುವರೆ ವರ್ಷ ಪೂರೈಸಿದ ಹಿನ್ನೆಲೆ ಇದೀಗ ಅಧಿಕಾರ ಹಂಚಿಕೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಬದಲಾವಣೆ, ಮತ್ತೊಂದು ಕಡೆ ಸಚಿವ ಸಂಪುಟ (Cabinet) ಪುನರ್ ರಚನೆ ಸುದ್ದಿ ನಡುವೆ ಜಿಲ್ಲೆಯಲ್ಲಿ ಇದೀಗ ಮೂವರ ನಡುವೆ ಸಚಿವಗಿರಿಗಾಗಿ ಪೈಪೋಟಿ ಶುರುವಾಗಿದೆ. ಹಾಲಿ ಸಚಿವರು ಹಾಗೂ ಇನ್ನಿಬ್ಬರು ಹಿರಿಯ ಕೈ ಶಾಸಕರು ಮಂತ್ರಿಗಿರಿಗೆ ಟವೆಲ್ ಹಾಕಿದ್ದಾರೆ. ಹಾಲಿ ಸಚಿವರು ನಾನೇ ಸಚಿವನಾಗಿ ಮುಂದುವರೆಯಬೇಕೆಂಬ ಆಸೆ ಇದೆ ಅಂತಿದ್ರೆ, ಒಬ್ಬರು ಕೆಎಂಎಫ್ ದಾಳ ಉರುಳಿಸಿದ್ದಾರೆ. ಹಾಗಾದರೆ ಹಾಲಿ ಸಚಿವರೇ ಮುಂದುರೆಯುತ್ತಾರಾ ಅಥವಾ ಹೊಸ ಮಂತ್ರಿಗಳು ಬರ್ತಾರಾ ಅನ್ನೋದು ಕೂತುಹಲ ಸೃಷ್ಟಿಸಿದೆ. ಜಿಲ್ಲೆಯ ಮೂವರ ನಡುವೆ ಇದೀಗ ಸಚಿವಗಿರಿಗಾಗಿ ಒಳಗೊಳಗೆ ಆಂತರಿಕ ಯುದ್ದ ಶುರುವಾಗಿದೆ.
ಮೂವರ ನಡುವೆ ಮಂತ್ರಿಗಿರಿಗಾಗಿ ಫೈಟ್
ಕೊಪ್ಪಳ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆ. ಈಗಾಗಲೇ ಕೊಪ್ಪಳ ಜಿಲ್ಲೆಯಿಂದ ಶಿವರಾಜ್ ತಂಗಡಗಿ ಸಚಿವರಾಗಿ ಎರಡುವರೆ ವರ್ಷವಾಗಿದೆ. ಇದೀಗ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಶುರುವಾಗಿದೆ. ಮತ್ತೊಂದು ಕಡೆ ಸಚಿವ ಸಂಪುಟ ಪುನರ್ ರಚನೆ ವಿಚಾರವು ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇದೀಗ ಕೊಪ್ಪಳದಲ್ಲಿ ಮೂವರ ನಡುವೆ ಮಂತ್ರಿಗಿರಿಗಾಗಿ ಫೈಟ್ ನಡೆಯುತ್ತಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಕ್ರಾಂತಿ ನಡುವೆ ಮತ್ತೊಂದು ಕುರ್ಚಿಗಾಗಿ ಸಿಎಂ-ಡಿಸಿಎಂ ಬಣ ಪೈಪೋಟಿ
ಶಿವರಾಜ್ ತಂಗಡಗಿ, ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್ ಮತ್ತು ಸಿಎಂ ಆರ್ಥಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನಡುವೆ ತೀವೃ ಪೈಪೋಟಿ ನಡಿದಿದೆ. ಸದ್ಯ ಜಿಲ್ಲೆಯಿಂದ ಶಿವರಾಜ್ ತಂಗಡಗಿ ಸಚಿವರಾಗಿದ್ದಾರೆ. ಇದೀಗ ಪುನರ್ ರಚನೆ ಮಾತು ಕೇಳಿ ಬಂದ ಹಿನ್ನಲೆ ಹಿಟ್ನಾಳ ಹಾಗೂ ರಾಯರೆಡ್ಡಿ ಇಬ್ಬರು ಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ನಾಲ್ಕು ದಿನ ಬಿಡುಬಿಟ್ಟಿದ್ದ ಹಿಟ್ನಾಳ್ ಹಾಗೂ ರಾಯರೆಡ್ಡಿ ಮುಂದಿನ ಅವಧಿಗೆ ಮಂತ್ರಿಯಾಗುವ ಆಸೆ ಬಿಚ್ಚಿಟಿದ್ದಾರೆ. ಅದರಲ್ಲೂ ಸಿಎಂ ಆಪ್ತ ರಾಘವೇಂದ್ರ ಹಿಟ್ನಾಳ್ ಕೆಎಂಎಫ್ ದಾಳವನ್ನು ಉರುಳಿಸಿದ್ದಾರೆ.
ಡಿಕೆ ಕುಟುಂಬಕ್ಕೆ ಚೆಕ್‌ಮೇಟ್ ಕೊಟ್ಟ ಹಿಟ್ನಾಳ್
ನನಗೆ ಮಂತ್ರಿ ಮಾಡಿ ಅಥವಾ ಕೆಎಂಎಫ್ ಅಧ್ಯಕ್ಷನನ್ನಾಗಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅತ್ತ ಡಿಕೆ ಸುರೇಶ್ ಕೆಎಂಎಫ್ ಗಾದಿ ಮೇಲೆ ಕಣ್ಣಿಟ್ಟಿದ್ದರೆ, ಹಿಟ್ನಾಳ್ ಡಿಕೆ ಕುಟುಂಬಕ್ಕೆ ಚೆಕ್‌ಮೇಟ್ ಇಟ್ಟಿದ್ದಾರೆ. ಸಿಎಂ ಬದಲಾವಣೆ ಚರ್ಚೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಹಿಟ್ನಾಳ್ ಮಂತ್ರಿಯಾಲು ಕೆಎಂಎಫ್ ದಾಳ ಉರುಳಿಸಿದ್ದು, ನಾನು ಕೂಡ ಮಂತ್ರಿ ಆಕಾಂಕ್ಷಿ ಎಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಪುನರ್ ರಚನೆ ಆದರೆ ಕೇಳುವುದರಲ್ಲಿ ತಪ್ಪೇನಿದೆ ಅನ್ನೋ ಮೂಲಕ ನಾನು ಆಕಾಂಕ್ಷಿ ಎಂದಿದ್ಧಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಿ ಎರಡುವರೆ ವರ್ಷ ಆಗಿದೆ. ಜಿಲ್ಲೆಯಲ್ಲಿ ಬಸವರಾಜ್ ರಾಯರೆಡ್ಡಿ ಹಿರಿಯ ಶಾಸಕ. ಮೊದಲ ಅವಧಿಯಲ್ಲಿ ಸಚಿವರಾಗುವ ಕನಸು ಕಂಡಿದ್ದರು. ಆದರೆ ಸಮುದಾಯವಾರು ಲೆಕ್ಕಾಚಾರ ಬಂದಾಗ ಶಿವರಾಜ್ ತಂಗಡಗಿಗೆ ಚಾನ್ಸ್ ಸಿಕ್ಕಿತ್ತು. ಇದೀಗ ಸಹಜವಾಗಿ ಜಿಲ್ಲೆಯ ಉಳಿದ ಶಾಸಕರು ಶಿವರಾಜ್ ತಂಗಡಗಿ ಎರಡುವರೆ ವರ್ಷ ಅಧಿಕಾರ ಅನುಭವಿಸಿದ್ದಾರೆ, ನಮಗೂ ಕೊಡಿ ಎಂದು ಕೇಳುತ್ತಿದ್ದಾರೆ.
ಜಿಲ್ಲೆಯ ಕನಕಗಿರಿಯಿಂದ ಮೂರು ಬಾರಿ ಶಾಸಕರಾದ ತಂಗಡಗಿ, ಮೂರು ಬಾರಿ ಸಚಿವರಾಗಿದ್ದಾರೆ. ವಿಚಿತ್ರ ಅಂದರೆ ಮೂರು ಬಾರಿ ಕೂಡ ಪೂರ್ಣವಾಗಿ ಐದು ವರ್ಷ ಪೂರೈಸಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಅವಧಿಯಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಕೇಸ್ ವಿಚಾರಕ್ಕೆ ತಂಗಡಗಿ ಮಂತ್ರಿಸ್ಥಾನ ಕಳೆದುಕೊಂಡಿದ್ದರು. ಅದಾದ ಬಳಿಕ ರಾಯರೆಡ್ಡಿ ಮಂತ್ರಿ ಆಗಿದ್ದರು. ಮೊದಲ ಬಾರಿ ಶಾಸಕರಾದಾಗ ಆಪರೇಷನ್ ಕಮಲದ ಮೂಲಕ ತಂಗಡಗಿ ಮಂತ್ರಿ ಆಗಿದ್ದರು. ಇದೀಗ ಮೂರನೇ ಬಾರಿಯೂ ತಂಗಡಗಿ ಮಂತ್ರಿ ಆಗಿದ್ದಾರೆ. ಆದರೆ ಐದು ವರ್ಷ ಇರುತ್ತಾರಾ ಇಲ್ಲವಾ ಅನ್ನೋ ಅನುಮಾನ ಶುರುವಾಗಿದೆ.
ನಾನು ಮಂತ್ರಿ ಆಗಿ ಮುಂದುವರೆಯಬೇಕೆಂಬ ಆಸೆ ಇದೆ ಎಂದ ಶಿವರಾಜ್ ತಂಗಡಗಿ
ಖುದ್ದು ಹಿಟ್ನಾಳ್ ಮತ್ತು ರಾಯರೆಡ್ಡಿ ಇಬ್ಬರು ನಾವು ಮಂತ್ರಿ ಆಕಾಂಕ್ಷಿಗಳು ಎಂದಿರುವುದು ತಂಗಡಗಿಗೆ ಟೆನ್ಶನ್ ತಂದಿಟ್ಟಿದೆ. ನಾನು ಕೂಡ ಸಿದ್ದರಾಮಯ್ಯ ಅವರ ಬಳಿ ಮಂತ್ರಿ ಸ್ಥಾನ ಕೊಡಿ ಎಂದಿದ್ದೇನೆಂದು ರಾಯರೆಡ್ಡಿ ಹೇಳಿದ್ದಾರೆ. ರಾಯರೆಡ್ಡಿ ಹಾಗೂ ಹಿಟ್ನಾಳ್ ದೆಹಲಿ ಭೇಟಿ ಬಳಿಕ ಮಾತನಾಡಿದ ಶಿವರಾಜ್ ತಂಗಡಗಿ, ನಾನು ಮಂತ್ರಿ ಆಗಿ ಮುಂದುವರೆಯಬೇಕೆಂಬ ಆಸೆ ಇದೆ ಎಂದಿದ್ದಾರೆ. ಈ ಮೂಲಕ ಪುನರ್ ರಚನೆ ಸುಳಿವನ್ನ ತಂಗಡಗಿ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: ನವೆಂಬರ್ ಕ್ರಾಂತಿ: ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶಕ್ಕೆ ಡಿಕೆಶಿ ಶುಭ ಹಾರೈಕೆ
ಮೂರು ಬಾರಿ ಸಚಿವರಾದರೂ ತಂಗಡಗಿ ಪೂರ್ಣ ಅವಧಿ ಪೂರೈಸಿಲ್ಲ. ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆ ಆದರೆ ತಂಗಡಗಿ ಸಚಿವ ಸ್ಥಾನ ತಪ್ಪಬಹುದು ಎನ್ನಲಾಗುತ್ತಿದೆ. ಇತ್ತ ಕೆಎಂಎಫ್ ದಾಳ ಉರುಳಿಸಿದ ಹಿಟ್ನಾಳ್ ಮಂತ್ರಿಯಾಗುವ ಹುಮ್ಮಸ್ಸಿನಲ್ಲಿದ್ದರೆ, ನಾನೇ ಸೀನಿಯರ್ ಎಂದು ಹೇಳಿಕೊಂಡು ಓಡಾಡತಿರುವ ರಾಯರೆಡ್ಡಿ ಕೂಡ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಯಾರಾಗುತ್ತಾರೆ ಮಂತ್ರಿ ಅನ್ನೋದು ಕೂತುಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



