
ಕೊಪ್ಪಳ, ಆಗಸ್ಟ್ 06: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ನಾಗರಪಂಚಮಿ ಹಬ್ಬ ಮಾಡಿದ್ದ ಪತ್ನಿಯನ್ನು ಕೊಪ್ಪಳ (Koppal) ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿಗಳಾದ ನೇತ್ರಾವತಿ, ನೇತ್ರಾವತಿ ಪ್ರಿಯಕರ ಸೋಮಪ್ಪನನ್ನು ಪೊಲೀಸರು (Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ್ಯಾಮಣ್ಣ ವಜ್ರಬಂಡಿ ಕೊಲೆಯಾದವ. ಕೊಪ್ಪಳ ತಾಲೂಕಿನ ಬುದಗೂಂಪದಲ್ಲಿ ನಿವಾಸಿಗಳಾದ ಆರೋಪಿ ನೇತ್ರಾವತಿ ಮತ್ತು ದ್ಯಾಮಣ್ಣ ವಜ್ರಬಂಡಿ ಮದುವೆಯಾಗಿ 13 ವರ್ಷ ಕಳೆದಿವೆ. ದಂಪತಿಗೆ ಮುದ್ದಾದ ಮೂವರು ಮಕ್ಕಳು ಇದ್ದಾರೆ.
ಜುಲೈ 25 ರಂದು ದಂಪತಿ ಬುದಗೂಂಪ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದರು. ಇದೇ ಜಮೀನಿಗೆ ನೇತ್ರಾವತಿ ಪ್ರಿಯಕರ ಸೋಮಣ್ಣ ಕುರಬಡಗಿಯನ್ನು ಕರೆಸಿಕೊಂಡಿದ್ದಾಳೆ. ಮೊದಲೇ ಪ್ಲ್ಯಾನ್ ಮಾಡಿದಂತೆ ಸೋಮಪ್ಪ ಗ್ಯಾರೇಜ್ವೊಂದರಿಂದ ರಾಡ್ ತಂದಿದ್ದಾನೆ. ಬಳಿಕ, ಸೋಮಪ್ಪ ಮತ್ತು ನೇತ್ರಾವತಿ ರಾಡ್ನಿಂದ ದ್ಯಾಮಣ್ಣನ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ಸೋಮಪ್ಪ ಪ್ರೇಯಸಿ ನೇತ್ರಾವತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಮನೆಗೆ ಬಿಟ್ಟು ಬಂದಿದ್ದಾನೆ. ನಂತರ, ಸೋಮಪ್ಪ ನಿರ್ಜನ ಪ್ರದೇಶಕ್ಕೆ ದ್ಯಾಮಣ್ಣನ ಶವ ತಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಬಳಿಕ, ರಾಡ್ ಅನ್ನು ಗ್ಯಾರೇಜ್ಗೆ ತಂದುಕೊಟ್ಟಿದ್ದಾನೆ.
ನೇತ್ರಾವತಿ ಏನೂ ನಡೆದೇ ಇಲ್ಲ ಎಂಬಂತೆ ಮನೆಯಲ್ಲಿ ನಾಗರ ಪಂಚಮಿ ಹಬ್ಬ ಮಾಡಿದ್ದಾಳೆ. ಪತಿಯನ್ನು ಕೊಲೆ ಮಾಡಿದ ಕಿಂಚ್ಚಿತ್ತು ಭಯ ಇಲ್ಲದೇ ನಾಗರ ಪಂಚಮಿ ಹಬ್ಬ ಮಾಡಿದ್ದಾಳೆ. ಇತ್ತ ದ್ಯಾಮಣ್ಣನ ಸಹೋದರರು ದ್ಯಾಮಣ್ಣ ಎಲ್ಲಿ ಅಂತ ಕೇಳಿದಾಗ, ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾಳೆ.
ಕೊಲೆ ನಡೆದ ಮರುದಿನ ಮುನಿರಾಬಾದ್ ಪೊಲೀಸರಿಗೆ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಅಪರಿಚಿತ ಶವ ಯಾರದ್ದು ಅಂತ ಮುನಿರಾಬಾದ್ ಪೊಲೀಸರು ನಾಪತ್ತೆಯಾದವರ ಪಟ್ಟಿ ತೆಗೆದಿದ್ದಾರೆ. ಆಗ ದ್ಯಾಮಣ್ಣ ನಾಪತ್ತೆಯಾಗಿರುವ ಬಗ್ಗೆ ತಿಳಿದಿದೆ. ತನಿಖೆ ನಡೆಸಿದಾಗ, ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ ದ್ಯಾಮಣ್ಣನದ್ದು ಎಂದು ಗೊತ್ತಾಗಿದೆ.
ಇತ್ತ ಮನೆಯವರಿಗೆ ನೇತ್ರಾವತಿ ದಾರಿ ತಪ್ಪಿಸಿದ ಹಿನ್ನೆಲೆಯಲ್ಲಿ ದ್ಯಾಮಣ್ಣ ಮನೆಯವರು ದೂರು ಕೊಟ್ಟಿರಲಿಲ್ಲ. ಕೊನೆಗೆ ದ್ಯಾಮಣ್ಣ ಸಹೋದರರು ಅನುಮಾನಗೊಂಡು ಜುಲೈ 30 ರಂದು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದರು. ಈ ವೇಳೆ ದ್ಯಾಮಣ್ಣನ ಹೆಂಡತಿ ನೇತ್ರಾವತಿ ನಾನೇ ಕೊಲೆ ಮಾಡಿದ್ದು ಎಂದು ಬಾಯಿ ಬಿಟ್ಟಿದ್ದಾಳೆ. ಕೊಲೆ ವಿಚಾರ ಬಯಲಾಗುತ್ತಿದ್ದಂತೆ ಪೊಲೀಸರು ನೇತ್ರಾವತಿ ಮತ್ತು ಸೋಮಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಆಚೆ ಬಂದಿದೆ. ಕೊಲೆಗೆ ಕಾರಣವಾಗಿದ್ದು, ಸೋಮಪ್ಪ ಹಾಗೂ ನೇತ್ರಾವತಿ ನಡುವಿನ ಅಕ್ರಮ ಸಂಬಂಧ ಎಂದು ಗೊತ್ತಾಗಿದೆ.
ಸೋಮಣ್ಣ ಹಾಗೂ ನೇತ್ರಾವತಿ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿಗಳು. ನೇತ್ರಾವತಿ ಮತ್ತು ಸೋಮಪ್ಪ ಇಬ್ಬರು ಸಂಬಂಧಿಕರು. ಸೋಮಣ್ಣ ಹಾಗೂ ನೇತ್ರಾವತಿ 16 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುವುದಕ್ಕೂ ತಯಾರಾಗಿದ್ದರು. ಅಷ್ಟರಲ್ಲಿ ನೇತ್ರಾವತಿಗೆ ದ್ಯಾಮಣ್ಣ ಜೊತೆ ಮದುವೆಯಾಗಿದೆ. ಇತ್ತ ದ್ಯಾಮಣ್ಣಗೂ ಮನೆಯಲ್ಲಿ ಮದುವೆ ಮಾಡಿದ್ದರು.
ತಮಗೆ ಬೇರೊಬ್ಬರ ಜೊತೆ ಮದುವೆಯಾಗಿದ್ದರೂ ನೇತ್ರಾವತಿ ಮತ್ತು ಸೋಮಪ್ಪ ವಿವಾಹವಾಗಲು ಮನಸ್ಸು ಮಾಡಿದ್ದರು.ಆದರೆ, ಕೊನೆ ಕ್ಷಣದಲ್ಲಿ ಮದುವೆಯಿಂದ ಹಿಂದೆ ಸರಿದರು. ಇದಾದ ಬಳಿಕ ಇಬ್ಬರ ನಡುವೆ ಗೆಳೆತನ ಮುಂದುವರೆದಿತ್ತು. ನೇತ್ರಾವತಿ ಗಂಡ ದ್ಯಾಮಣ್ಣನಿಗೂ ಈ ವಿಚಾರ ಗೊತ್ತಿತ್ತು. ಸೋಮಪ್ಪನು ಪ್ರೇಯಸಿ ನೇತ್ರಾವತಿ ಮನೆಗೆ ಬಂದು ಹೋಗಿ ಬಂದು ಮಾಡುತ್ತಿದ್ದನು. ಕೆಲವು ಬಾರಿ ಗಂಡ ದ್ಯಾಮಣ್ಣ, ಸೋಮಪ್ಪನ ಬಳಿ ಪತ್ನಿ ನೇತ್ರಾವತಿಯನ್ನು ಬಿಟ್ಟು ಹೋಗುತ್ತಿದ್ದನು. ಸಂಬಂಧಿಕ ಎಂಬ ಕಾರಣಕ್ಕೆ ದ್ಯಾಮಣ್ಣ ನೇತ್ರಾವತಿಯನ್ನು ಸೋಮಪ್ಪನ ಜೊತೆ ಸಂತೆ, ಹಬ್ಬಕ್ಕೆಂದು ಊರಿಗೆ ಕಳುಹಿಸುತ್ತಿದ್ದನು.
ಇದನ್ನೂ ಓದಿ: ಮಸೀದಿ ಮುಂದೆಯೇ ಗವಿಸಿದ್ದಪ್ಪನನ್ನು ಸಾದಿಕ್ ಕೊಲೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ
ಇಬ್ಬರ ನಡುವೆ ಇದ್ದ ಅಕ್ರಮ ಸಂಬಂಧದ ವಿಚಾರ ದ್ಯಾಮಣ್ಣನಿಗೆ ಕೊನೆಗೆ ಕೊನೆಗೆ ಗೊತ್ತಾಗಿದೆ. ಮನೆಯಲ್ಲಿ ಮಕ್ಕಳು ಎದೆ ಎತ್ತರಕ್ಕೆ ಬೆಳೆಯುತ್ತಿದ್ದಾರೆ, ಇದನ್ನೆಲ್ಲ ಬಿಟ್ಟು ಬಿಡು ಅಂತ ದ್ಯಾಮಣ್ಣ ಪತ್ನಿ ನೇತ್ರಾವತಿಗೆ ಬುದ್ದಿ ಮಾತು ಹೇಳಿದ್ದಾನೆ. ಆದರೂ, ನೇತ್ರಾವತಿ ಪತಿಯ ಮಾತು ಕೇಳಿಲ್ಲ. ಸೋಮಪ್ಪನ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಾಳೆ. ಇದಕ್ಕೆ ದ್ಯಾಮಣ್ಣ ವಿರೋಧ ವ್ಯಕ್ತಪಡಿಸಲು ಆರಂಭಿಸಿದಾಗ, ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆ.