ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

ಕೊಪ್ಪಳದ ನವವಿವಾಹಿತೆ ನಾಪತ್ತೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮದುವೆಯಾದ ಎರಡು ತಿಂಗಳಲ್ಲಿ ನಾಪತ್ತೆಯಾಗಿದ್ದ ಯುವತಿ, ಮುಸ್ಲಿಂ ಯುವಕನ ಜೊತೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸ್​​ ಠಾಣೆಯಲ್ಲಿ ಕುಟುಂಬಸ್ಥರ ಎದುರೇ ಯುವತಿ ಪ್ರಿಯತಮನ ಜೊತೆ ಹೋಗುವುದಾಗಿ ಹಠ ಹಿಡಿದಿದ್ದರೆ, ಘಟನೆಯಿಂದ ಮನೆಯಲ್ಲಿ ಒಂದು ಸಾವಾಗಿದೆ. ಹೀಗಾಗಿ ನಮಗೆ ಪರಿಹಾರ ಬೇಕು ಎಂದು ಪತಿ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ
ಮುಸ್ಲಿಂ ಯುವಕನ ಜೊತೆ ನವ ವಿವಾಹಿತೆ
Image Credit source: Tv9 Kannada
Edited By:

Updated on: Apr 09, 2026 | 6:08 PM

ಕೊಪ್ಪಳ, ಏಪ್ರಿಲ್​​ 09: ಇಲ್ಲಿನ ಗೌರಿ ಅಂಗಳ ನಿವಾಸಿ ನಾಗರಾಜ್​​ ಎಂಬವರನ್ನು ವಿವಾಹವಾಗಿದ್ದ ರಾಯಚೂರು ಜಿಲ್ಲೆಯ ಸಿಂದನೂರಿನ ಸಂಜನಾ ಎಂಬಾಕೆ ಮದುವೆಯಾಗಿ ಎರಡು ತಿಂಗಳಲ್ಲೇ ಪತಿ ಬಿಟ್ಟು ನಾಪತ್ತೆ ಆಗಿದ್ದಳು. ವಿಷಯ ತಿಳಿದ ಮಾವ ಅಂದರೆ ಪತಿಯ ತಂದೆ ಹೃದಯಾಘಾತದಿಂದ ಮೃತಪಟ್ಟ ಕಾರಣ ಘಟನೆ ಭಾರಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕೀಗ ಭರ್ಜರಿ ಟ್ವಿಸ್ಟ್​​ ಸಿಕ್ಕಿದ್ದು, ಕಳೆದ 20 ದಿನಗಳ ಹಿಂದೆ ಮಿಸ್​​ ಆಗಿದ್ದ ಯುವತಿ ಸಂಜನಾ ಮುಸ್ಲಿಂ ಯುವಕನೋರ್ವನ ಜೊತೆ ನಿನ್ನೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ರಾಜಾಭಕ್ಷಿ ಎಂಬಾತನ ಜೊತೆ ನವ ವಿವಾಹಿತೆಯನ್ನು ಪತ್ತೆ ಮಾಡಿರುವ ಪೊಲೀಸರು, ಇಬ್ಬರನ್ನೂ ಕೊಪ್ಪಳದ ಮಹಿಳಾ ಠಾಣೆಗೆ ಕರೆತಂದಿದ್ದಾರೆ.

ಮೂಲತಃ ಗದಗ ಜಿಲ್ಲೆ ನಿವಾಸಿಯಾಗಿರೋ ರಾಜಾಭಕ್ಷಿ ಆಟೋ ಚಾಲಕನಾಗಿದ್ದು, ಅದಾಗಲೇ ಈತನಿಗೆ ಮದುವೆ ಕೂಡ ಆಗಿದೆ. ಹೀಗಿದ್ದರೂ ಆತ ಸಂಜನಾಳನ್ನು ಕರೆದುಕೊಂಡು ಹೋಗಿದ್ದ ಎಂಬ ವಿಚಾರವೀಗ ಬಯಲಾಗಿದೆ. ಇನ್ನು  ಇವರಿಬ್ಬರನ್ನು ಪೊಲೀಸ್​​ ಠಾಣೆಗೆ ಕರೆತರುತ್ತಿದ್ದಂತೆ ಸಂಜನಾ ಪತಿ ಸೇರಿ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ನಡುವೆಯೂ ತನಗೆ ರಾಜಾಭಕ್ಷಿನೇ ಬೇಕು ಎಂದು ಸಂಜನಾ ಹಠ ಹಿಡಿದಿದ್ದರೆ, ಈಕೆಯ ಹುಚ್ಚಾಟಕ್ಕೆ ಅದಾಗಲೇ ನಮ್ಮ ಮನೆಯಲ್ಲಿ ಇಂದು ಜೀವ ಹೋಗಿದೆ. ಹೀಗಾಗಿ ನಮಗೆ ಪರಿಹಾರ ಬೇಕು ಎಂದು ನಾಗರಾಜ್​​ ಕುಟುಂಬ ಪಟ್ಟು ಹಿಡಿದಿದೆ.

ಇದನ್ನೂ ಓದಿ: ಪತಿ ಬಿಟ್ಟು ನವವಿವಾಹಿತೆ ನಾಪತ್ತೆ; ವಿಷಯ ತಿಳಿದ ಮಾವ ಹೃದಯಾಘಾತದಿಂದ ಸಾವು!

ಎರಡೂ ಕುಟುಂಬಳ ಪರಸ್ಪರ ಒಪ್ಪಿಗೆಯ ಮೇಲೆಯೇ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 8ರಂದು ನಾಗರಾಜ್​​ ಮತ್ತು ಸಂಜನಾ ವಿವಾಹ ನಡೆದಿತ್ತು. ಆ ಬಳಿಕ ದಂಪತಿ ನಾಗರಾಜ್​​ ಅವರ ಮನೆಯ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಈ ನಡುವೆ ಮಾರ್ಚ್​​ 21ರ ರಾತ್ರಿ ರಾತ್ರಿ 8.30ರ ಸುಮಾರಿಗೆ ಸಂಜನಾ ತನಗೆ ಆರೋಗ್ಯ ಸರಿ ಇಲ್ಲದ ಕಾರಣ ಔಷಧ ತರುವಂತೆ ಪತಿ ನಾಗರಾಜ್​​ಗೆ ತಿಳಿಸಿದ್ದಾಳೆ. ಹೀಗಾಗಿ ಮಾತ್ರೆ ತರಲೆಂದು ತೆರಳಿದ್ದ ನಾಗರಾಜ್​​ 15 ನಿಮಿಷಗಳ ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದರೆ ಆ ವೇಳೆ ಹೆಂಡತಿ ಸಂಜನಾ ಮನೆಯಲ್ಲಿ ಇಲ್ಲದಿರೋದು ಗಮನಕ್ಕೆ ಬಂದಿದೆ. ಹೀಗಾಗಿ ಕೆಳ ಮಹಡಿಯಲ್ಲಿರುವ ಸಹೋದರನ ಮನೆಗೆ ತೆರಳಿ ನಾಗರಾಜ್​​ ಪತ್ನಿ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆಕೆ ಇಲ್ಲಿಗೆ ಬಂದಿಲ್ಲ ಎಂಬ ಉತ್ತರ ದೊರೆತಿದೆ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆಕೆಯ ಬಗ್ಗೆ ಮಾಹಿತಿ ಸಿಗದ ಕಾರಣ ಪತಿ ನಾಗರಾಜ್​​ ಈ ಬಗ್ಗೆ ದೂರು ದಾಖಲಿಸಿದ್ದರು. ಆ ಬೆನ್ನಲ್ಲೇ ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್​​ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us