ಕೊಪ್ಪಳದಲ್ಲಿ ಕರಡಿ ದಾಳಿಗೆ ಮತ್ತೋರ್ವ ಬಲಿ: ಅರಣ್ಯ ಇಲಾಖೆ ವಿರುದ್ದ ಹೆಚ್ಚಾದ ಜನರ ಆಕ್ರೋಶ
ಕೊಪ್ಪಳ ಜಿಲ್ಲೆಯಲ್ಲಿ ಕರಡಿ ದಾಳಿ ಪ್ರಕರಣ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ರೈತರೊಬ್ಬರು ಕರಡಿ ದಾಳಿಯಿಂದ ಮೃತಪಟ್ಟಿದ್ದು, ಎರಡು ದಿನಗಳಲ್ಲಿ ಎರಡು ಸಾವು ಸಂಭವಿಸಿದಂತಾಗಿದೆ. ಕರಡಿ ಧಾಮ ಸ್ಥಾಪಿಸಿ ಕರಡಿಗಳನ್ನು ಹಿಡಿದು ಸ್ಥಳಾಂತರ ಮಾಡದ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ಏಪ್ರಿಲ್ 19: ಕೊಪ್ಪಳ (Koppal) ಜಿಲ್ಲೆಯಲ್ಲಿ ಕರಡಿ ದಾಳಿಗೆ (Bear Attack) ಮತ್ತೋರ್ವ ಬಲಿಯಾಗಿದ್ದಾನೆ. ಕಳೆದ ಎರಡು ದಿನದಲ್ಲಿ ಕರಡಿ ದಾಳಿಯಿಂದ ಮೃತಪಟ್ಟ ಎರಡನೇ ಘಟನೆಯಾಗಿದೆ. ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ (32) ಕರಡಿ ದಾಳಿಗೆ ತುತ್ತಾಗಿ ಬಲಿಯಾದ ರೈತ. ಜಿಲ್ಲೆಯಲ್ಲಿ ನಿರಂತರವಾಗಿ ಜನರ ಮೇಲೆ ಕರಡಿಗಳು ದಾಳಿ ಮಾಡುತ್ತಿದ್ದು, ಮೇಲಿಂದ ಮೇಲೆ ಅನೇಕರ ಜೀವಗಳು ಹೋಗುತ್ತಿವೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಜನರ ಆಕ್ರೋಶ ಕೂಡಾ ಹೆಚ್ಚಾಗುತ್ತಿದೆ.
ಎರಡು ದಿನದ ಹಿಂದೆ ಈರಪ್ಪ, ಬೈಕ್ನಲ್ಲಿ ತನ್ನ ಪತ್ನಿ, ಮಗಳನ್ನು ಬೈಕ್ ಮೇಲೆ ಕರೆದುಕೊಂಡು ನಾಗೇಶನಹಳ್ಳಿಯಿಂದ ಗ್ರಾಮದ ಹೊರವಲಯದಲ್ಲಿರುವ ತನ್ನ ತೋಟದ ಮನೆಗೆ ಹೋಗುತ್ತಿದ್ದರು. ಆದರೆ, ರಾತ್ರಿ ಸಮಯದಲ್ಲಿ ಮೂವರ ಮೇಲೆ ಕರಡಿ ದಾಳಿ ಮಾಡಿತ್ತು. ಹೀಗಾಗಿ ಮೂವರನ್ನು ಕೂಡಾ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಈರಪ್ಪ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ. ಇನ್ನು ಈರಪ್ಪನ ಪತ್ನಿ ಹೇಮವ್ವ ಮತ್ತು ಪುತ್ರಿ ಗೌತಮಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗೆ ಆಧಾರವಾಗಿದ್ದ ಈರಪ್ಪನ ಸಾವು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಇದನ್ನೂ ಓದಿ: ಕೊಪ್ಪಳ: ಒಂದೇ ದಿನದಲ್ಲಿ ಎರಡು ಕಡೆ ಕರಡಿ ದಾಳಿ; ಓರ್ವ ಸಾವು, ಮೂವರು ಗಂಭೀರ ಗಾಯ
ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆಯಷ್ಟೇ ಕನಕಗಿರಿ ತಾಲೂಕಿನ ರಾಂಪುರದಲ್ಲಿ ಚನ್ನಪ್ಪ ಅನ್ನೋ ವೃದ್ದ ಕರಡಿ ದಾಳಿಯಿಂದ ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ಈರಪ್ಪ ಕೂಡಾ ಕರಡಿ ದಾಳಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರಾತ್ರಿ ಸಮಯದಲ್ಲಿ ಹೊರಗಡೆ ಅಡ್ಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಕರಡಿ ಧಾಮವನ್ನು ಆರಂಭಿಸಿ, ಅನಕೇ ಕಡೆ ಇರುವ ಕರಡಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ