ಅಂದು ಬಿಜೆಪಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಜನಾರ್ದನ ರೆಡ್ಡಿಗೆ ಈಗ ತಮ್ಮ ಶಕ್ತಿಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆ

G. Janardhana Reddy in BJP: ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ರೆಡ್ಡಿ ವರ್ಚಸ್ಸು ಸಹಜವಾಗಿಯೇ ಹೆಚ್ಚಾಗುತ್ತದೆ. ಬಿಜೆಪಿ ಸಹ ರೆಡ್ಡಿ ವರ್ಚಸ್ಸನ್ನು ಬಳಸಿಕೊಳ್ಳಲು ಮುಂದಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತಿ ಇರುವಂತೆ ಜನಾರ್ದನ ರೆಡ್ಡಿಗೆ ಸೂಚಿಸಿದೆ. ಜೊತೆಗೆ ಬಳ್ಳಾರಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆಯೂ ಹೇಳಿದೆ.

ಅಂದು ಬಿಜೆಪಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಜನಾರ್ದನ ರೆಡ್ಡಿಗೆ ಈಗ ತಮ್ಮ ಶಕ್ತಿಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆ
ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ತೆಕ್ಕೆಗೆ: ಲೋಕ ಸವಾಲುಗಳೆನು?
Follow us
| Updated By: ಸಾಧು ಶ್ರೀನಾಥ್​

Updated on: Apr 01, 2024 | 2:57 PM

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿರೋ ಗಾಲಿ ಜನಾರ್ದನ ರೆಡ್ಡಿಗೆ ಇದೀಗ ಪಕ್ಷದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹೆಚ್ಚು ಬೆವರು ಸುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಒಂದು ಸಮಯದಲ್ಲಿ ರಾಜ್ಯ ಬಿಜೆಪಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ರೆಡ್ಡಿ, ದಶಕದ ನಂತರ ಬಿಜೆಪಿಗೆ ಸೇರಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿರೋದರಿಂದ, ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋ ಮೂಲಕ ತಮ್ಮ ಶಕ್ತಿ ಸಾಮರ್ಥ್ಯವನ್ನು ಮತ್ತೊಮ್ಮೆ ಓರೆಗಲ್ಲಿಗೆ ಹಚ್ಚಬೇಕಾದ ಅನಿವಾರ್ಯತೆ ಉಂಟಾಗಿದೆ.

ಹೌದು ಜನಾರ್ದನ ರೆಡ್ಡಿ, ಅಂದ್ರೆ ಒಂದು ಸಮಯದಲ್ಲಿ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಹೆಸರಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಲ್ಲಿ ಜನಾರ್ದನ ರೆಡ್ಡಿ ಪಾತ್ರ ಕೂಡಾ ಮಹತ್ವದಾಗಿತ್ತು. ಒಂದು ಸಮಯದಲ್ಲಿ ಇಡೀ ರಾಜ್ಯ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ರೆಡ್ಡಿ ಇಟ್ಟುಕೊಂಡಿದ್ದರು. ಆದ್ರೆ ಗಣಿಗಾರಿಕೆ ಪ್ರಕರಣದ ಉರುಳು ಸುತ್ತಿಕೊಂಡ ನಂತರ, ಬಿಜೆಪಿಗೆ ರೆಡ್ಡಿ ಅಪಥ್ಯವಾಗಿದ್ದರು.

ಹೀಗಾಗಿ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲಾ ಅಂತ ಸ್ವತ: ಅಮಿತ್ ಶಾ ಹೇಳಿದ್ದರು. ಆದ್ರೆ ಬದಲಾದ ಸನ್ನಿವೇಶಗಳಲ್ಲಿ ಪರಸ್ಪರ ಬಿಜೆಪಿಗೂ ರೆಡ್ಡಿ ಬೇಕಾಗಿದ್ದಾರೆ. ರೆಡ್ಡಿಗೂ ಬಿಜೆಪಿ ಬೇಕಾಗಿದೆ. ಹೀಗಾಗಿ ಜನಾರ್ದನ ರೆಡ್ಡಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಸೇರಿದ್ದು, ಪಕ್ಷದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಅಂದಿನ ಬಿಜೆಪಿಗೂ ಇಂದಿನ ಬಿಜೆಪಿಗೂ ಸಾಕಷ್ಟು ವ್ಯತ್ಯಾಸಗಳಾಗಿವೆ.

ಅಂದು ಕೇಂದ್ರದಲ್ಲಿ ಹೈಕಮಾಂಡ್ ಬಲಿಷ್ಟವಾಗಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ರೆಡ್ಡಿ ತಮ್ಮ ಹಿಡಿತವನ್ನು ಹೆಚ್ಚಾಗಿ ಸಾಧಿಸಿದ್ದರು. ಆದ್ರೆ ಇದೀಗ ಕೇಂದ್ರದಲ್ಲಿ ಬಿಜೆಪಿ ಹೈಕಮಾಂಡ್ ತುಂಬಾ ಬಲಿಷ್ಟವಾಗಿದೆ. ರಾಜ್ಯದಲ್ಲಿ ಕೂಡಾ ಅನೇಕ ಬಿಜೆಪಿ ನಾಯಕರು ರೆಡ್ಡಿ ಹೇಳಿದ ಮಾತನ್ನು ಮೀರುತ್ತಿರಲಿಲ್ಲ. ಆದ್ರೆ ಇದೀಗ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಾಗಿ ರೆಡ್ಡಿ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಇಂದಿನ ಬಿಜೆಪಿಗೆ ಯಾವ ರೀತಿ ಹೊಂದಿಕೊಳ್ಳುತ್ತಾರೆ ಅನ್ನೋ ಕುತೂಹಲ ಕೂಡಾ ಹೆಚ್ಚಾಗಿದೆ.

ಇನ್ನು ಜನಾರ್ದನ ರೆಡ್ಡಿಗೆ ಇದೀಗ ಮತ್ತೊಮ್ಮೆ ಪಕ್ಷದಲ್ಲಿ ಹಿಡಿತ ಸಾಧಿಸಬೇಕಾದ್ರೆ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೌದು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಚಿತ್ರದುರ್ಗದಲ್ಲಿ ರೆಡ್ಡಿಗೆ ಹೆಚ್ಚಿನ ಜನಪ್ರಿಯತೆ ಇದ್ದು, ಅದನ್ನು ಬಳಿಸಿಕೊಂಡು, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾಗಿದೆ.

ಇದನ್ನೂ ಓದಿ: ಮಂಗಳೂರು – ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ, ಚುನಾವಣಾ ಆಯೋಗದಿಂದ ತುರ್ತು ನೋಟಿಸ್​

ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ರೆಡ್ಡಿ ವರ್ಚಸ್ಸು ಸಹಜವಾಗಿಯೇ ಹೆಚ್ಚಾಗುತ್ತದೆ. ಇನ್ನು ರೆಡ್ಡಿ ವರ್ಚಸ್ಸನ್ನು ಬಳಸಿಕೊಳ್ಳಲು ಮುಂದಾಗಿರೋ ಬಿಜೆಪಿ, ನಾಮಪತ್ರ ಸಲ್ಲಿಕೆ ವೇಳೆ ಜನಾರ್ದನ ರೆಡ್ಡಿ ಉಪಸ್ಥಿತಿ ಸೇರಿದಂತೆ ಬಳ್ಳಾರಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಹೇಳಿದೆ. ಜೊತೆಗೆ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಹೈಕಮಾಂಡ್ ನಾಯಕರು ರೆಡ್ಡಿಗೆ ಸೂಚಿಸಿದ್ದಾರಂತೆ. ಹೀಗಾಗಿ ಈಗಾಗಲೇ ಕೊಪ್ಪಳದಿಂದ ಜನಾರ್ದನ ರೆಡ್ಡಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೂಡಾ ಆರಂಭಿಸಿದ್ದಾರೆ.

ದಶಕ ಕಾಲದಿಂದ ಬಿಜೆಪಿಯಿಂದ ದೂರವಿದ್ದು ರೆಡ್ಡಿ, ಇದೀಗ ಬಿಜೆಪಿಗೆ ಮರಳಿ ಬಂದಿದ್ದಾರೆ. ಆದ್ರೆ ಮೊದಲಿನಂತೆ ರೆಡ್ಡಿ, ಬಿಜೆಪಿಯಲ್ಲಿ ತಮ್ಮ ಹಿಡಿತ ಸಾಧಿಸುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದ್ದರೆ, ರೆಡ್ಡಿಗೂ ಕೂಡಾ ತಮ್ಮ ವರ್ಚಸ್ಸು ತೋರಿಸುವ ಸತ್ವ ಪರೀಕ್ಷೆ ಎದುರಾಗಿದೆ. ಇದರಲ್ಲಿ ರೆಡ್ಡಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಅನ್ನೋದು ಕಾಲವೇ ಉತ್ತರಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ