ಬರಿದಾದ ಮೂರು ರಾಜ್ಯಗಳ ಜೀವನಾಡಿ: ಹೊಸ ಕ್ರಸ್ಟ್​​ಗೇಟ್​​ಗಳನ್ನು ಕಂಡ ತುಂಗಭದ್ರಾ ಜಲಾಶಯವೀಗ ಭಣಭಣ

Tungabhadra Dam: ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಭದ್ರಾ ಜಲಾಶಯದಲ್ಲಿ ಬರೋಬ್ಬರಿ 41 ಟಿಎಂಸಿ ನೀರು ಕಡಿಮೆಯಾಗಿದ್ದು, ಮೂರು ರಾಜ್ಯಗಳ ಜನರಲ್ಲಿ ಆತಂಕ ಮೂಡಿಸಿದೆ. ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಹಿನ್ನೆಲೆ ಸಂತಸ ಪಡಬೇಕೋ, ನೀರಿಲ್ಲ ಎಂದು ದುಃಖಪಡಬೇಕೋ ಎನ್ನುವ ಸ್ಥಿತಿಯಲ್ಲಿ ಇದೇ ಡ್ಯಾಂ ನಂಬಿಕೊಂಡ ಲಕ್ಷಾಂತರ ಜನರಿದ್ದಾರೆ. ಬಿತ್ತನೆ ಕಾರ್ಯ ಆರಂಭಿಸಬೇಕಾದ ಈ ಸಂದರ್ಭದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ನಡುವೆ, ಜಲಾಶಯವೂ ಬರಿದಾಗಿರೋದು ಅನ್ನದಾತರ ಚಿಂತೆಗೂ ಕಾರಣವಾಗಿದೆ.

ಬರಿದಾದ ಮೂರು ರಾಜ್ಯಗಳ ಜೀವನಾಡಿ: ಹೊಸ ಕ್ರಸ್ಟ್​​ಗೇಟ್​​ಗಳನ್ನು ಕಂಡ ತುಂಗಭದ್ರಾ ಜಲಾಶಯವೀಗ ಭಣಭಣ
ತುಂಗಭದ್ರಾ ಜಲಾಶಯ
Image Credit source: Tv9 Kannada
Edited By:

Updated on: Jun 26, 2026 | 4:42 PM

ಮುಖ್ಯಾಂಶಗಳು

  • ತುಂಗಭದ್ರಾ ಡ್ಯಾಂ ನೀರಿನ ಪ್ರಮಾಣದಲ್ಲಿ ದಾಖಲೆ ಪ್ರಮಾಣದ ಇಳಿಕೆ
  • ಕಳೆದ ವರ್ಷದ ಈ ದಿನಕ್ಕಿಂತ ಬರೋಬ್ಬರಿ 41 ಟಿಎಂಸಿ ಕಡಿಮೆ ಸಂಗ್ರಹ
  • ನಿನ್ನೆಯಷ್ಟೇ ನೂತನ ಕ್ರಸ್ಟ್​​ ಗೇಟ್​​ಗಳ ಲೋಕಾರ್ಪಣೆ ಕಂಡಿದ್ದ ಜಲಾಶಯ

ಕೊಪ್ಪಳ, ಜೂನ್​​ 26: ಮೂರು ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​​ ಗೇಟ್​​ಗಳನ್ನು ನಿನ್ನೆಯಷ್ಟೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಲೋಕಾರ್ಪಣೆ ಗೊಳಿಸಿದ್ದರು. ಈ ವಿಚಾರ ಇದೇ ಡ್ಯಾಂನ ನೀರು ನಂಬಿಕೊಂಡಿದ್ದ ಲಕ್ಷಾಂತರ ಮಂದಿಯ ಸಂತಸಕ್ಕೆ ಕಾರಣವಾಗಿತ್ತು. ಆದರೆ ಈ ಸಂತಸದ ನಡುವೆಯೇ ಆತಂಕ ಪಡಬೇಕಾದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 41 ಟಿಎಂಸಿ ನೀರು ಜಲಾಶಯದಲ್ಲಿ ಕಡಿಮೆಯಾಗಿರೋದು, ಮುಂದೇನೆಂಬ ಪ್ರಶ್ನೆ ಹುಟ್ಟುಹಾಕಿದೆ.

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 50 ಟಿಎಂಸಿ ನೀರಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣಕ್ಕೆ ಡ್ಯಾಂನಲ್ಲಿ ಸದ್ಯ ಲಭ್ಯವಿರೋದು ಕೇವಲ 9 ಟಿಎಂಸಿ ನೀರು ಮಾತ್ರ. ಆದರೆ ಇದೇ ನೀರನ್ನು ನಂಬಿಕೊಂಡು ಕರ್ನಾಟಕದ ವಿಜಯನಗರ, ಬಳ್ಳಾರಿ,ಕೊಪ್ಪಳ, ರಾಯಚೂರು ಜನರಿದ್ದಾರೆ. ಸಾಲದಕ್ಕೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಕೂಡ ಇದರ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಭವಿಷ್ಯದ ಆತಂಕ ತಲೆದೋರಿದ್ದು, ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ

ಕೃಷಿಕರು ಕಂಗಾಲು

ಲಕ್ಷಾಂತರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರುಣಿಸೋದು ಕೂಡ ಇದೇ ಜಲಾಶಯದ ನೀರು. ಬಿತ್ತನೆ ಕಾರ್ಯ ಆರಂಭಿಸಬೇಕಾದ ಈ ಸಂದರ್ಭದಲ್ಲಿ ಬೆಳೆಗೆ ನೀರು ಸಿಗುತ್ತಾ? ಇಲ್ಲವಾ? ಎಂಬ ಗೊಂದಲದಲ್ಲಿ ಅನ್ನದಾತರಿದ್ದು, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಕೇವಲ ಜಲಾಶಯದ ನೀರಿನ ಅವಲಂಬನೆಯೇ ರೈತರಿಗಿರುವ ಏಕೈಕ ಆಯ್ಕೆಯಾಗಿದೆ. ಹೀಗಾಗಿ ತಕ್ಷಣವೇ ಬರ ಘೋಷಣೆ ಮಾಡಿ ಎಂಬ ಆಗ್ರಹವೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:33 pm, Fri, 26 June 26

Follow Us