ಕೊಪ್ಪಳ ಜನರ ಕನಸು ನನಸು: ಜಿಲ್ಲೆಯ 3 ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆಗೆ ಪ್ರಸ್ತಾಪ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2024 | 7:53 PM

ಕೊಪ್ಪಳ ಜಿಲ್ಲೆಯ ಮೂರು ರೈಲು ನಿಲ್ದಾಣಗಳಿಗೆ ಐತಿಹಾಸಿಕ ಹೆಸರುಗಳನ್ನು ನಾಮಕರಣ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ. ಗಂಗಾವತಿ ನಿಲ್ದಾಣಕ್ಕೆ ಅಂಜನಾದ್ರಿ, ಮುನಿರಾಬಾದ್‌ಗೆ ಹುಲಿಗೆಮ್ಮ, ಬಾನಾಪುರಕ್ಕೆ ಗಾಂಧೀಜಿ ಹೆಸರಿಡಲು ಪ್ರಸ್ತಾಪಿಸಲಾಗಿದೆ. ಈ ಮರುನಾಮಕರಣವು ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲಿದೆ. ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಕೊಪ್ಪಳ ಜನರ ಕನಸು ನನಸು: ಜಿಲ್ಲೆಯ 3 ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆಗೆ ಪ್ರಸ್ತಾಪ
ಕೊಪ್ಪಳ ಜನರ ಕನಸು ನನಸು: ಜಿಲ್ಲೆಯ 3 ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆಗೆ ಪ್ರಸ್ತಾಪ
Follow us on

ಕೊಪ್ಪಳ, ಡಿಸೆಂಬರ್​ 02: ಜಿಲ್ಲೆಗೆ ಐತಿಹಾಸಿಕ ಹಿನ್ನೆಲೆಯಿದೆ. ರಾಮಾಯಣ ಕಾಲದ ಕಿಷ್ಕಿಂದೆ, ಹನುಮನ ಜನ್ಮಸ್ಥಳ ಅಂಜನಾದ್ರಿ, ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗೊಂದಿ ಇರೋದು ಇದೇ  ಜಿಲ್ಲೆಯಲ್ಲಿ. ಜೊತೆಗೆ ಹುಲಿಗಿ ಹುಲಿಗೆಮ್ಮ ದೇವಸ್ಥಾನ ಸೇರಿದಂತೆ ಅನೇಕ ಸುಪ್ರಸಿದ್ದ ದೇವಸ್ಥಾನಗಳು ಕೂಡ ಇವೆ. ಇದೀಗ ಅನೇಕ ರೈಲ್ವೆ ನಿಲ್ದಾಣಗಳಿಗೆ (Railway Station) ಐತಿಹಾಸಿಕ, ಧಾರ್ಮಿಕ ಸ್ಥಳಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಲು ಮುಂದಾಗಿದೆ.

ಅನೇಕ ವರ್ಷಗಳ ಬೇಡಿಕೆ ಈಡೇರುವ ಸಂತಸದಲ್ಲಿ ಜನತೆ

ಜಿಲ್ಲೆಯ ಅನೇಕ ಐತಿಹಾಸಿಕ, ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ರಾಮಾಯಣದಲ್ಲಿ ಬರೋ ಕಿಷ್ಕಿಂದೆ ಇರೋದು ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ. ಇನ್ನು ರಾಮನ ಬಂಟ ಹನುಮನ ಜನ್ಮಸ್ಥಳ ಇರೋದು ಇದೇ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ. ಜೊತೆಗೆ ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗೊಂದಿ ಇರೋದು ಕೂಡಾ ಗಂಗಾವತಿ ತಾಲೂಕಿನಲ್ಲಿ. ಇಂತಹ ಹತ್ತು ಹಲವು ಐತಿಹಾಸಿಕ, ಪೌರಾಣಿಕ ವಿಶೇಷವನ್ನೊಳಗೊಂಡ ಸ್ಥಳಗಳು ಜಿಲ್ಲೆಯ ಹಲವು ಭಾಗಗಳಲ್ಲಿ ಇವೆ. ಹೀಗಾಗಿ ಪ್ರತಿನಿತ್ಯ ಜಿಲ್ಲೆಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರ್ತಾರೆ. ಕೊಪ್ಪಳ ತಾಲೂಕಿನಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರತಿನಿತ್ಯ ರಾಜ್ಯ, ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್ ರ‍್ಯಾಲಿ: ಎಷ್ಟು ದಿನ, ಆಯ್ಕೆ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ

ಇನ್ನು ಪ್ರವಾಸಿಗರಿಗೆ ಅನಕೂಲವಾಗಲಿ ಅನ್ನೋ ಉದ್ದೇಶದಿಂದ ಜಿಲ್ಲೆಯ ಅನೇಕ ರೈಲು ನಿಲ್ದಾಣಗಳಿಗೆ ಐತಿಹಾಸಿಕ, ಧಾರ್ಮಿಕ ಸ್ಥಳಗಳ ಹೆಸರುಗಳನ್ನು ನಾಮಕಾರಣ ಮಾಡಬೇಕು ಅನ್ನೋದು ಜಿಲ್ಲೆಯ ಹಲವರ ಆಗ್ರಹವಾಗಿತ್ತು. ಆದರೆ ಇದೀಗ ಈ ಬೇಡಿಕೆಗಳು ಈಡೇರುವ ಕಾಲ ಸನ್ನಿಹತವಾಗಿವೆ.

ಜಿಲ್ಲೆಯ ಮೂರು ರೈಲು ನಿಲ್ದಾಣಗಳಿಗೆ ಐತಿಹಾಸಿಕ, ಧಾರ್ಮಿಕ ಮತ್ತು ಮಹಾತ್ಮರ ಹೆಸರು ಇಡಲು ಪ್ರಸ್ತಾವಣೆಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬೃಹತ್ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್, ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ, ಮುನಿರಾಬಾದ್ ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ, ಬಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮಾ ಗಾಂಧೀಜಿ ರೈಲು ನಿಲ್ದಾಣ ಅಂತ ನಾಮಕಾರಣ ಮಾಡಲು ಸಿಎಂಗೆ ಪ್ರಸ್ತಾವ ನೀಡಲಾಗಿದೆ. ಅದನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗುತ್ತದೆ ಅಂತ ಟ್ವೀಟ್ ಮಾಡಿದ್ದಾರೆ.

ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಟಿ

ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ಮತ್ತು ಭಾವನೆಗಳಿಗೆ ಗೌರವಿಸಲು ಈ ಮೂರು ರೈಲು ನಿಲ್ದಾಣಗಳ ಹೆಸರನ್ನು ಮರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ ಅಂತ ಸಚಿವ ಎಂ. ಬಿ ಪಾಟೀಲ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ಮೂರು ರೈಲು ನಿಲ್ದಾಣಗಳ ಹೆಸರನ್ನು ಮರು ನಾಮಕರಣ ಮಾಡಲು ಒಪ್ಪಿಗೆ ನೀಡಿದ್ರೆ, ಕೆಲವೇ ತಿಂಗಳಲ್ಲಿ ಈ ಮೂರು ರೈಲು ನಿಲ್ದಾಣಗಳ ಹೆಸರುಗಳು ಬದಲಾಗಲಿವೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಟಿ ಬರುತ್ತದೆ. ಜೊತೆಗೆ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಸ್ಥಳಗಳ ಹೆಸರು ದೇಶಾದ್ಯಂತ ಹೆಸರು ಮಾಡಲಿವೆ. ಈ ಕೆಲಸ ಆದಷ್ಟು ಬೇಗ ಆಗಲಿ ಅನ್ನೋದು ಜಿಲ್ಲೆಯ ಜನರ ಆಗ್ರಹವಾಗಿದೆ.

ಇದನ್ನೂ ಓದಿ: ಗಣನೀಯವಾಗಿ ಕುಸಿದ ಭತ್ತದ ಬೆಲೆ: ಕಂಗಾಲಾದ ಭತ್ತದ ಕಣಜದ ರೈತರು

ಇನ್ನು ಮೂರು ರೈಲು ನಿಲ್ದಾಣಗಳ ಹೆಸರುಗಳ ಮರು ನಾಮಕರಣಕ್ಕೆ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಕಳಹಿಸುತ್ತಿರೋ ಮಾಹಿತಿ ಹೊರಬೀಳುತ್ತಿದ್ದಂತೆ, ಇದೀಗ ಕೊಪ್ಪಳ ನಗರ ರೈಲ್ವೆ ನಿಲ್ದಾಣಕ್ಕೆ ಗವಿ ಮಠದ ಹೆಸರು ಮರು ನಾಮಕರಣ ಮಾಡಬೇಕು ಅನ್ನೋ ಆಗ್ರಹ ಕೂಡ ಆರಂಭವಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಆದಷ್ಟು ಬೇಗನೆ ಒಪ್ಪಿಗೆ ನೀಡಿದ್ರೆ ಕೊಪ್ಪಳ ಜಿಲ್ಲೆಯ ಜನರ ಸಂತಸ ಇಮ್ಮಡಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.