
ನವದೆಹಲಿ, (ಅಕ್ಟೋಬರ್ 13): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ ) ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಅವರ ಬದಲಾವಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕೆಪಿಎಸ್‌ಸಿ ಹಗರಣದ ತನಿಖೆಗೆ ಹೈಕೋರ್ಟ್ ಆದೇಶಿಸಿದ್ದ ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಎಸ್‌ಐಟಿ ರಚನೆ ಆದೇಶಕ್ಕೆ ಹಸ್ತಕ್ಷೇಪವಿಲ್ಲ. ಹೊಸದಾದ ತನಿಖೆ ಅಗತ್ಯವಿಲ್ಲ. ಆದರೆ ಇಬ್ಬರು ಅಧಿಕಾರಿಗಳ ಹೆಸರು ಬದಲಿಸಲು ಸೂಚನೆ ನೀಡಿದೆ. ಪೊಲೀಸ್ ಮಹಾನಿರ್ದೇಶಕರಿಂದ ಅಧಿಕಾರಿಗಳ ಪಟ್ಟಿ ಹೈಕೋರ್ಟ್‌ಗೆ ಸಲ್ಲಿಸಬೇಕು. ಎರಡೂ ಕಡೆ ವಾದ ಆಲಿಸಿ ಹೈಕೋರ್ಟ್ ಅಧಿಕಾರಿಗಳನ್ನು ನೇಮಿಸಬೇಕು .ಬಳಿಕ ಇಬ್ಬರು ಅಧಿಕಾರಿಗಳ ನೇಮಕದ ಬಗ್ಗೆ ಆದೇಶಿಸಬೇಕು ಎಂದು ಹೇಳಿದೆ.
ಕೆಪಿಎಸ್‌ಸಿ ಅಕ್ರಮದ ತನಿಖೆಗೆ ಹೈಕೋರ್ಟ್ ಎಸ್‌ಐಟಿ ರಚನೆ ಮಾಡಿತ್ತು. ಅಲೋಕ್ ಕುಮಾರ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಆದ್ರೆ, ಸಿಐಡಿ ತನಿಖೆ ಈಗಾಗಲೇ ಶೇಕಡಾ 80ರಷ್ಟು ಪೂರ್ಣಗೊಂಡಿದೆ ಮತ್ತು ಹೊಸದಾಗಿ SIT ರಚಿಸಿ ಮರು ತನಿಖೆ ನಡೆಸುವುದರಿಂದ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿ ಸುದೀರ್ಘ ಹಾಗೂ ತೀವ್ರ ವಾದ-ಪ್ರತಿವಾದಗಳು ನಡೆದವು. ಅಂತಿಮವಾಗಿ ಇಬ್ಬರ ಅಧಿಕಾರಿಗಳ ಬದಲು ಎಡಿಜಿಪಿ ದರ್ಜೆಯ ಇಬ್ಬರು ಅಧಿಕಾರಿಗಳ ನೇಮಕಕ್ಕೆ ಡಿಜಿಐಜಿಗೆ ಸೂಚಿಸಿದೆ.
ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಎಸ್‌ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅಲೋಕ್ ಕುಮಾರ್ ಅವರ ವಿರುದ್ಧ ಹಿಂದೆ ಫೋನ್ ಟ್ಯಾಪಿಂಗ್ ಆರೋಪಗಳಿದ್ದವು. ಅವರ ಕೇಸ್ ಹಿಸ್ಟರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದ್ದರಿಂದ ಎಸ್‌ಐಟಿ ನೇತೃತ್ವಕ್ಕೆ ಐಜಿಪಿ ಶ್ರೇಣಿಯ ಅಧಿಕಾರಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್ ಸೇರಿದಂತೆ ಐದು ಹೊಸ ಅಧಿಕಾರಿಗಳ ಪಟ್ಟಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, “ಅಲೋಕ್ ಕುಮಾರ್ ಅವರು ಫೋನ್ ಟ್ಯಾಪಿಂಗ್ ಪ್ರಕರಣದಿಂದ ಈಗಾಗಲೇ ಮುಕ್ತರಾಗಿದ್ದಾರೆ. ಇದೇ ಸರ್ಕಾರ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡಿತ್ತು. ಈಗ ಸರ್ಕಾರಕ್ಕೆ ಬೇಕಾದ ಅಧಿಕಾರಿಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದು ಪ್ರತಿವಾದ ಮಂಡಿಸಿದರು.
ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ಪೀಠ, “ಆಯೋಗದ ಉನ್ನತ ಅಧಿಕಾರಿಗಳ ಮೇಲೆಯೇ ತನಿಖೆ ನಡೆಯಬೇಕಿರುವುದರಿಂದ, ಡಿಜಿಪಿ ಬದಲಿಗೆ ಎಡಿಜಿಪಿ ಅಥವಾ ಕೆಳಹಂತದ ಅಧಿಕಾರಿಗಳನ್ನು ನೇಮಿಸುವುದು ಸರಿಯಲ್ಲ. ಹಿರಿಯ ರ್‍ಯಾಂಕ್ ಅಧಿಕಾರಿಯೇ ಇರಬೇಕು. ನಮಗೆ ರಾಜ್ಯದ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯ ರಾಜ್ಯ ಸರ್ಕಾರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಡಿಜಿಪಿ ಅವರೇ ಸೂಕ್ತ ಅಧಿಕಾರಿಗಳ ಹೆಸರನ್ನು ಸೂಚಿಸಲಿ” ಎಂದು ಅಭಿಪ್ರಾಯಪಟ್ಟಿದೆ.
ಡಿಜಿಪಿ ಅಲೋಕ್ ಕುಮಾರ್ ಮತ್ತು ಡಿಐಜಿ ದಿವ್ಯಾ ಗೋಪಿನಾಥ್ ಬದಲಿಗೆ ಹೊಸ ಹಿರಿಯ ಅಧಿಕಾರಿಗಳ ಹೆಸರುಗಳನ್ನು ಎರಡು ವಾರಗಳ ಒಳಗೆ ಹೈಕೋರ್ಟ್‌ಗೆ ಸಲ್ಲಿಸಬೇಕು. ಹೈಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಿ ಅಂತಿಮವಾಗಿ ಎಸ್‌ಐಟಿ ಅಧಿಕಾರಿಗಳನ್ನು ನಿರ್ಧರಿಸಬೇಕು ಮತ್ತು ಹೈಕೋರ್ಟೇ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಬೇಕು.
ಪ್ರಕರಣದಲ್ಲಿ ಮರು ತನಿಖೆ ಅಥವಾ ಮೊದಲಿನಿಂದ ಹೊಸ ತನಿಖೆ ನಡೆಸುವಂತಿಲ್ಲ. ಎಸ್‌ಐಟಿ ತಂಡ ಅಂತಿಮಗೊಳ್ಳುವವರೆಗೂ ಸಿಐಡಿ (CID) ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಸುಪ್ರೀಂ ಹೇಳಿದೆ.