ತರಬೇತಿ ನಿರತರಿಗೆ ಅಂತಿಮ ಅವಕಾಶ.. ನಿವೃತ್ತ ನೌಕರರಿಗೆ ಗೌರವ ಧನ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆಹ್ವಾನಿಸಿದ ಸಾರಿಗೆ ಇಲಾಖೆ

ಬಸ್ ಓಡಿಸಲು ನಿವೃತ್ತ ನೌಕರರ ಮೊರೆ ಹೋಗಿರುವ ಕೆಎಸ್​ಆರ್​ಟಿಸಿ, 62 ವರ್ಷದ ಒಳಗಿನ ನಿವೃತ್ತ ನೌಕರರಿಗೆ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ನೌಕರರ ಬದಲಿಗೆ ನಿವೃತ್ತ ನೌಕರರಿಗೆ ಕರ್ತವ್ಯಕ್ಕೆ ಆಹ್ವಾನ ನೀಡಿರುವ ಸಾರಿಗೆ ಅಧಿಕಾರಿಗಳು ಚಾಲಕರಿಗೆ 800 ರೂಪಾಯಿ ಹಾಗೂ ನಿರ್ವಾಹಕರಿಗೆ 700 ರೂಪಾಯಿ ನಿಗದಿಪಡಿಸಿದ್ದಾರೆ.

ತರಬೇತಿ ನಿರತರಿಗೆ ಅಂತಿಮ ಅವಕಾಶ.. ನಿವೃತ್ತ ನೌಕರರಿಗೆ ಗೌರವ ಧನ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆಹ್ವಾನಿಸಿದ ಸಾರಿಗೆ ಇಲಾಖೆ
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)
Follow us
Skanda
| Updated By: preethi shettigar

Updated on: Apr 09, 2021 | 7:37 AM

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ ಅಂತ್ಯ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇತ್ತ ರಾಜ್ಯ ಸರ್ಕಾರವೂ ಅವರ ಮನವೊಲಿಸುವ ಪ್ರಯತ್ನಾಕ್ಕಾಗಲೀ, ಬೇಡಿಕೆ ಈಡೇರಿಸುವ ಕ್ರಮಕ್ಕಾಗಲೀ ಮುಂದಾಗದೇ ಒತ್ತಾಯಪೂರ್ವಕವಾಗಿ ಮುಷ್ಕರ ಹತ್ತಿಕ್ಕಲು ಮುಂದಾಗಿದೆ. ಮೂರನೇ ದಿನವಾದ ಇಂದು ಕೂಡಾ ಮುಷ್ಕರ ಮುಂದುವರೆದಿರುವ ಕಾರಣ ಸಾರಿಗೆ ನಿಗಮಗಳು ಪರ್ಯಾಯ ಮಾರ್ಗಕ್ಕೆ ಮುಂದಾಗಿವೆ.

ನೌಕರರ ಮೇಲೆ ಒತ್ತಡ ತರುವ ಸಲುವಾಗಿ ತರಬೇತಿ ನಿರತ ಚಾಲಕ, ನಿರ್ವಾಹಕರಿಗೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. 1484 ತರಬೇತಿ ನಿರತ ಸಿಬ್ಬಂದಿಗೆ ಇಂದು ಡೆಡ್​ಲೈನ್ ನೀಡಿರುವ ಬಿಎಂಟಿಸಿ, ನಿನ್ನೆ ಮೊನ್ನೆ ಗೈರಾಗಿದ್ದಕ್ಕೆ ಸೂಕ್ತ ಕಾರಣ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಒಂದು ವೇಳೆ ಇಂದು ಮತ್ತೆ ಗೈರಾದರೆ ತರಬೇತಿಯಿಂದ ಮುಲಾಜಿಲ್ಲದೇ ವಜಾಗೊಳಿಸಲಾಗುವುದು ಎಂಬ ಕಠಿಣ ಸಂದೇಶವನ್ನೂ ರವಾನಿಸಿದೆ.

ಇನ್ನೊಂದೆಡೆ ಬಸ್ ಓಡಿಸಲು ನಿವೃತ್ತ ನೌಕರರ ಮೊರೆ ಹೋಗಿರುವ ಕೆಎಸ್​ಆರ್​ಟಿಸಿ, 62 ವರ್ಷದ ಒಳಗಿನ ನಿವೃತ್ತ ನೌಕರರಿಗೆ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ನೌಕರರ ಬದಲಿಗೆ ನಿವೃತ್ತ ನೌಕರರಿಗೆ ಕರ್ತವ್ಯಕ್ಕೆ ಆಹ್ವಾನ ನೀಡಿರುವ ಸಾರಿಗೆ ಅಧಿಕಾರಿಗಳು ಚಾಲಕರಿಗೆ 800 ರೂಪಾಯಿ ಹಾಗೂ ನಿರ್ವಾಹಕರಿಗೆ 700 ರೂಪಾಯಿ ನಿಗದಿಪಡಿಸಿದ್ದಾರೆ. ಆ ಮೂಲಕ ನೌಕರರ ಮುಷ್ಕರಕ್ಕೆ ತಾರ್ಕಿಕ ಅಂತ್ಯ ನೀಡುವ ಬದಲು ಪರ್ಯಾಯ ವ್ಯವಸ್ಥೆ ಮಾಡುಲ್ಲಿಯೇ ಹೆಚ್ಚಿನ ಗಮನ ನೀಡಿದಂತಿದೆ.

ಅಂತೆಯೇ, ರಾಜ್ಯದ ವಿವಿಧ ನಿಗಮಗಳ ಅಧಿಕಾರಿಗಳು ಈಗಾಗಲೇ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ನೋಟಿಸ್​ ನೀಡಿದ್ದು, ಅವಶ್ಯಕತೆ ಇದ್ದಾಗ ಕರ್ತವ್ಯ ನಿರ್ವಹಿಸಲಿಲ್ಲ ಎಂದಾದಲ್ಲಿ ನಿಮಗೆ ನೀಡಲಾದ ವಸತಿ ವ್ಯವಸ್ಥೆಯನ್ನೂ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಜೊತೆಗೆ ತರಬೇತಿ ನಿರತ ನೌಕರರಿಗೂ ಇಲಾಖೆಯ ವಿರುದ್ಧ ಹೋಗದಂತೆ ಕಠಿಣ ಸೂಚನೆ ನೀಡಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ ಗದಗದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದೇ ಕಾರಣಕ್ಕಾಗಿ ನಿರ್ವಾಹಕ ವಸಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಸಾರಿಗೆ ಇಲಾಖೆ ನೌಕರರು ಆಸ್ಪತ್ರೆ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: Karnataka Bus Strike: ಸಾರಿಗೆ ನೌಕರರ ಮುಷ್ಕರಕ್ಕೆ ಮೂರನೇ ದಿನ.. ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಸಿಬ್ಬಂದಿ 

ಕೋಡಿಹಳ್ಳಿ ಚಂದ್ರಶೇಖರ್ ಮಾಡೋದೆಲ್ಲ ಕೇವಲ ಸ್ವಾರ್ಥಕ್ಕೆ, ಸಾರಿಗೆ ನೌಕರರ ಪರ ಮುಷ್ಕರವನ್ನು ನಿಲ್ಲಿಸಬೇಕು: ಸುಭಾಷ ಐಕೂರ

(KSRTC BMTC Employees Protest Transport department calls retired employees below 62 years for duty)