AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC BMTC Strike: ನಾಳೆಯಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ, ಸ್ಪಂದಿಸದಿದ್ದರೆ ಜೈಲ್​ ಭರೋ ಚಳವಳಿ; ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಮಾತುಕತೆ ಮಾಡಿ ಬಗೆಹರಿಸಬೇಕು. ಸೋಮವಾರದ ಬಳಿಕ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ. ನೌಕರರು ಜೈಲ್ ಭರೋ ಚಳವಳಿಗೆ ಸಿದ್ಧರಾಗಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

KSRTC BMTC Strike: ನಾಳೆಯಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ, ಸ್ಪಂದಿಸದಿದ್ದರೆ ಜೈಲ್​ ಭರೋ ಚಳವಳಿ; ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 18, 2021 | 5:10 PM

Share

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ವಿವಿಧ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರ 12ನೇ ದಿನಕ್ಕೆ ಕಾಲಿಟ್ಟಿದೆ. ನೌಕರರೂ ಪಟ್ಟು ಸಡಿಲಿಸಿಲ್ಲ, ರಾಜ್ಯ ಸರ್ಕಾರವೂ ಮಾತುಕತೆಗೆ ಮುಂದಾಗುತ್ತಿಲ್ಲ. ಹೀಗಾಗಿ ನೌಕರರ ಮುಷ್ಕರದಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಷ್ಕರನಿರತ ನೌಕರರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವ ನೌಕರರು ಮುಷ್ಕರ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು ಮತ್ತು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಗಾಂಧಿ ಪ್ರತಿಮೆಗಳ ಬಳಿ ನಾಳೆ (ಏಪ್ರಿಲ್ 19) ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. 2443 ನೌಕರರನ್ನು ಶನಿವಾರ ಕೆಲಸದಿಂದ ತೆಗೆದಿದ್ದಾರೆ. ಇದು ರಾಜ್ಯ ಸರ್ಕಾರದ ಒಳ್ಳೆಯ ನಿರ್ಧಾರವಲ್ಲ. ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಮಾತುಕತೆ ಮಾಡಿ ಬಗೆಹರಿಸಬೇಕು. ಸೋಮವಾರದ ಬಳಿಕ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ. ನೌಕರರು ಜೈಲ್ ಭರೋ ಚಳವಳಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಸಾರಿಗೆ ನಿಗಮಗಳ ನೌಕರರು ಮುಷ್ಕರ ಮುಂದುವರಿಸಿದರೆ ಸರ್ಕಾರ ಶೇ 10ರಷ್ಟು ಬಸ್​ಗಳನ್ನು ಓಡಿಸಬಹುದು. ಆದರೆ ಪೂರ್ಣ ಪ್ರಮಾಣದಲ್ಲಿ ಬಸ್​ಗಳು ರಸ್ತೆಗಿಳಿಯಲು ಆಗುವುದಿಲ್ಲ ಎಂದು ಹೇಳಿದರು. ಸಾರಿಗೆ ನಿಗಮಗಳ ನೌಕರರ ಬಗ್ಗೆ ರಾಜ್ಯ ಸರ್ಕಾರವು ತಿರಸ್ಕಾರದ ಭಾವನೆ ಹೊಂದಿದೆ. ಸೋಮವಾರದ ಒಳಗೆ ಸ್ಪಂದಿಸದಿದ್ದರೆ ಮುಷ್ಕರ ತೀವ್ರಗೊಳಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಡೆಡ್​ಲೈನ್ ನೀಡಿದರು.

ನೌಕರರ ಮನೆ ಬಳಿ ಹೋಗಿ ಅಧಿಕಾರಿಗಳು ಅವರಿಗೆ ಮಾನಸಿಕವಾಗಿ ಘಾಸಿ ಮಾಡುತ್ತಿದ್ದಾರೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಿದೆ. ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಏಕಾಏಕಿ ನಿನ್ನೆ 2443 ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ವಿಷಾದಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಉಳಿದ ಸಚಿವರು ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸಬಹುದಿತ್ತು. ಇಲ್ಲಿಯವರೆಗೆ ಅಂಥ ಯಾವುದೇ ಪ್ರಯತ್ನಗಳು ನಡೆದಿಲ್ಲ. ಸರ್ಕಾರದ ನಿಲುವು ಖಂಡಿಸಿ, ನಮ್ಮ ಬೇಡಿಕೆಗಳ ಶೀಘ್ರ ಈಡೇರಿಕೆಗೆ ಆಗ್ರಹಿಸಿ ನಾಳೆ ಬೆಳಿಗ್ಗೆ 10 ಗಂಟೆಗೆ ಮೌರ್ಯಸರ್ಕಲ್ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಾಳೆಯು ಸರ್ಕಾರದ ಪ್ರತಿನಿಧಿಗಳು ಯಾವುದೇ ಮಾತುಕತೆಗೆ ಮುಂದೆಬರದಿದ್ದರೆ ಜೈಲ್ ಭರೋ ಚಳುವಳಿಗೆ ಕರೆ ಕೊಡುತ್ತೇವೆ. ಸಾರಿಗೆ ನೌಕರರ ಬೇಡಿಕೆ ಈಡೇರದಿದ್ದರೆ ನಾವು ಜೈಲಿಗೂ ಹೋಗುವುದಕ್ಕು ಸಿದ್ಧ. ಜೈಲ್ ಭರೋ ಚಳುವಳಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

(KSRTC BMTC Strike Indiscriminate Hunger Strike to Stress Demands of Transport Employees says Kodihalli Chandrashekhar)

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್​ಗೆ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆ ಸರಿಪಡಿಸೋ ಭರವಸೆ ನೀಡಿರೊ ಸಾರಿಗೆ ಸಚಿವ ಲಕ್ಷ್ಮಣ ಸವದಿ

ಇದನ್ನೂ ಓದಿ: ಸರ್ಕಾರ ಸಾರಿಗೆ ನೌಕರರು ಕುಟುಂಬ ಭಿಕ್ಷೆ ಬೇಡುವಂತೆ ಮಾಡಿದೆ, ಜನರೂ ಭಿಕ್ಷೆ ಬೇಡಬೇಕು- ಮಾಜಿ ಸಿಎಂ ಕುಮಾರಸ್ವಾಮಿ