ತಡರಾತ್ರಿ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತ KSRTC ಬಸ್: ಸಹಾಯಕ್ಕಾಗಿ ಪ್ರಯಾಣಿಕನ ಟ್ವೀಟ್, ಮುಂದೇನಾಯ್ತು?
ಧರ್ಮಸ್ಥಳದಿಂದ ಗದಗದ ಮುಂಡರಗಿಗೆ ತೆರಳುತ್ತಿದ್ದ ಬಸ್ಸೊಂದು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತಿದೆ. ರಘು ಎಂಬ ಪ್ರಯಾಣಿಕರೊಬ್ಬರು ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸಹಾಯ ಕೇಳಿದ್ದು ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಯಿತು. ಆದರೆ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳುವ ಬಗ್ಗೆ ರಘು ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು, ಸೆ.05: ತನ್ನ ಸಾಮರ್ಥ್ಯಕ್ಕೂ ಮೀರಿ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಧರ್ಮಸ್ಥಳದಿಂದ ಗದಗದ ಮುಂಡರಗಿಗೆ ತೆರಳುತ್ತಿದ್ದ ಬಸ್ಸೊಂದು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್(Charmadi Ghat) ಬಳಿ ಕೆಟ್ಟು ನಿಂತಿದೆ. ಹೀಗಾಗಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ(KSRTC) ಸಹಾಯವಾಣಿಗೆ ಕರೆ ಮಾಡಿ ಎಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರೂ ಎರಡು ಗಂಟೆಗಳ ಕಾಲ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ರಘು ಎಂಬ ಪ್ರಯಾಣಿಕರೊಬ್ಬರು ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸಹಾಯ ಕೇಳಿದ್ದು ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಯಿತು. ಆದರೆ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳುವ ಬಗ್ಗೆ ರಘು ಅಸಮಾಧಾನ ಹೊರ ಹಾಕಿದ್ದಾರೆ.
ರಘು ಟ್ವೀಟ್
ತಕ್ಷಣದ ಗಮನಕ್ಕೆ, ಚಾರ್ಮಾಡಿ ಘಾಟ್ ಬಳಿ ಬಸ್ ಕೆಟ್ಟುಹೋದ ಕಾರಣ 70ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಧರ್ಮಸ್ಥಳದಿಂದ ಹೊರಟ ಬಸ್ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತಿತು. ಈಗ, ಈ ಸಮಯದಲ್ಲಿ ಈ ಮಾರ್ಗದಲ್ಲಿ ಬೇರೆ ಯಾವುದೇ ಬಸ್ಸುಗಳಿಲ್ಲ. ದಯವಿಟ್ಟು ಸಹಾಯ ಮಾಡಿ, ಮಳೆ ಬಂದರೆ ಏನು ಗತಿ? ಎಂದು ಬಸ್ ಕೆಟ್ಟು ಹೋದ ಪರಿಣಾಮ ರಸ್ತೆ ಬದಿ ಪ್ರಯಾಣಿಕರು ವಿಶ್ರಾಂತಿ ಪಡೆಯುತ್ತಿದ್ದ ಫೋಟೋವನ್ನು ರಘು ಟ್ವೀಟ್ ಮಾಡಿದ್ದರು.
@KSRTC_Journeys Need Immediate attentions, 70+ passangers left stranded due to bus breakdown near Charmadi ghat. Bus started from Dharmasthala and broke down near the ghat section. Now, no other buses in this route at this time. Please help, what if it rains! pic.twitter.com/N9DiyPFQqb
— Raghu (@Raghu08743924) September 3, 2023
ರಘು ಅವರ ಟ್ವೀಟ್‌ಗೆ ಕೆಎಸ್‌ಆರ್‌ಟಿಸಿ ಪ್ರತಿಕ್ರಿಯಿಸಿದ್ದು, “ದಯವಿಟ್ಟು ಬಸ್ ಸಂಖ್ಯೆ ಅಥವಾ ಪಿಎನ್‌ಆರ್ ಪ್ರಯಾಣದ ವಿವರಗಳನ್ನು ಒದಗಿಸಿ” ಎಂದು ಕೇಳಿತು. ತಕ್ಷಣವೇ ರಘು ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಚಾರ ತಿಳಿದ ಖಾಸಗಿ ಸುದ್ದಿ ಪತ್ರಿಕೆಯ ರಿಪೋರ್ಟರ್ ಬೆಂಗಳೂರಿನ KSRTC ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದಾಗ, ಪುತ್ತೂರಿನಲ್ಲಿರುವ KSRTC ವಿಭಾಗೀಯ ನಿಯಂತ್ರಕ (DC) ರೊಂದಿಗೆ ಮಾತನಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಚಾರ್ಮಾಡಿ ಘಾಟ್ಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತೆ. ಪ್ರಯಾಣಿಕರನ್ನು ಕರೆದುಕೊಂಡು ಬರಲಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಗಲಾಟೆಗೆ ಮುಕ್ತಿ: ಯುಪಿಐ ಸ್ಕ್ಯಾನ್ ಮಾಡಿ ಟಿಕೆಟ್ ತಗೊಳ್ಳಿ
ಪುತ್ತೂರು ಡಿಸಿ ಜೈಕರ್ ಶೆಟ್ಟಿ ಮಾತನಾಡಿ, ಚಾರ್ಮಾಡಿ ಘಾಟ್ನಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರು ಹೋಗಬೇಕಿದ್ದ ಜಾಗಕ್ಕೆ ಕಳಿಸಲಾಗಿದೆ. ಚಾಲಕ ಸ್ವತಃ ಧರ್ಮಸ್ಥಳಕ್ಕೆ ಪ್ರಯಾಣಿಸಿ ಪರ್ಯಾಯ ಬಸ್ ಅನ್ನು ತೆಗೆದುಕೊಂಡು ಪ್ರಯಾಣವನ್ನು ಮುಂದುವರೆಸಿದರು ಎಂದು ಡಿಸಿ ಜೈಕರ್ ಅವರು ಮಾಹಿತಿ ನೀಡಿದರು.
ತಡ ರಾತ್ರಿ 12.55 ಕ್ಕೆ, ರಘು ಅವರು ಟ್ವೀಟ್ ಮಾಡಿ, ಅಂತಿಮವಾಗಿ ಸಾರಿಗೆ ಇಲಾಖೆಯಿಂದ ಸಹಾಯ ಸಿಕ್ಕಿದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ 54 ಆಸನಗಳ ಸಾಮರ್ಥ್ಯವಿರುವ ಬಸ್‌ನಲ್ಲಿ 78 ಜನರನ್ನು ಹತ್ತಿಸಿಕೊಳ್ಳಲಾಗಿದೆ. ಯಾರಾದರೂ ಈ ಬಗ್ಗೆ ಗಮನಹರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಮಸ್ಯೆ ಬಗ್ಗೆ ರಘು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ